ADVERTISEMENT

‘ರೈತರ ಒಳಿತಿಗೆ ಜೀವನ ಮುಡಿಪಾಗಿಟ್ಟ ವ್ಯಕ್ತಿ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2018, 6:23 IST
Last Updated 20 ಫೆಬ್ರುವರಿ 2018, 6:23 IST

ಚನ್ನಪಟ್ಟಣ: ತಮ್ಮದೇ ಆದ ಧಾಟಿಯಲ್ಲಿ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಬಡಿದೆಬ್ಬಿಸಿ ರೈತರ ಪರ ಹೋರಾಟ ಮಾಡುತ್ತಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರ ನಿಧನದಿಂದ ರೈತ ಸಂಕುಲಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣಪ್ಪ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ವೃತ್ತದ ಬಳಿ ಸೋಮವಾರ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಏರ್ಪಡಿಸಿದ್ದ ಸಂತಾಪ ಸಭೆಯಲ್ಲಿ ಪುಟ್ಟಣ್ಣಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.‌‌

ತಮ್ಮ ಇಡೀ ಜೀವನವನ್ನು ರೈತರ ಒಳಿತಿಗಾಗಿ ಮುಡಿಪಾಗಿಟ್ಟವರು ಕೆ.ಎಸ್.ಪುಟ್ಟಣ್ಣಯ್ಯ.ವಿಧಾನಸಭೆಯಲ್ಲಿ ರೈತರ ಪರ ದನಿ ಎತ್ತುತ್ತಿದ್ದ ಅವರು ರೈತರಿಗೆ ನ್ಯಾಯ ಒದಗಿಸಲು ಅವಿರತ ಶ್ರಮ ವಹಿಸಿದವರು. ಅಂತಹ ಮಹಾನ್ ಚೇತನದ ಅಗಲಿಕೆಯಿಂದ ರೈತರ ಪರ ದನಿಯೊಂದನ್ನು ಕಳೆದುಕೊಂಡಂತಾಗಿದೆ ಎಂದರು.

ADVERTISEMENT

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಸಾಗರ್ ಮಾತನಾಡಿ, ತಮ್ಮದೇ ಹಾಸ್ಯಮಿಶ್ರಿತ ಮಾತುಗಳಲ್ಲಿ ರೈತರ ಸಮಸ್ಯೆ ಸರ್ಕಾರಗಳಿಗೆ ತಿಳಿಸಿ ಕೊಡುತ್ತಾ, ಅದಕ್ಕೆ ಸೂಕ್ತ ಪರಿಹಾರ ಸಿಗುವಂತೆ ಮಾಡುತ್ತಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರ ವ್ಯಕ್ತಿತ್ವ ಎಲ್ಲರಿಗೂ ಅನುಕರಣೀಯ. ಕ್ಷೇತ್ರದ ಅಭಿವೃದ್ಧಿ ಜತೆಗೆ ಇಡೀ ರಾಜ್ಯದ ರೈತರನ್ನು ಸ್ವಾಭಿಮಾನಿಗಳನ್ನಾಗಿ ಮಾಡಿದ ಮಹನೀಯರ ಸಾಲಿಗೆ ಅವರು ಸೇರುತ್ತಾರೆ. ಅವರ ಹಾದಿಯಲ್ಲಿ ರೈತಸಂಘ ಮುನ್ನಡೆಯಬೇಕು ಎಂದರು. ಟೆಕೀಸ್ ಟೀಂನ ಅಧ್ಯಕ್ಷೆ ನವ್ಯಶ್ರೀ ಮಾತನಾಡಿ, ಪುಟ್ಟಣ್ಣಯ್ಯ ಅವರ ವಿಚಾರಧಾರೆ ಸರ್ವಕಾಲಕ್ಕೂ ಪ್ರಸ್ತುತ ಎಂದರು.

ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ತಿಮ್ಮೇಗೌಡ, ಜೀತ ವಿಮುಕ್ತ ಕರ್ನಾಟಕ ಸಂಘಟನೆಯ ಗೋವಿಂದರಾಜು, ತಾಲ್ಲೂಕು ಕಾರ್ಯದರ್ಶಿ ವಿಜಿ, ರೈತ ಮುಖಂಡರಾದ ವೆಂಕಟಪ್ಪ, ರಾಮಕೃಷ್ಣ, ವಿಠಲೇನಹಳ್ಳಿ ವೆಂಕಟಪ್ಪ, ಅಪ್ಪಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.