ADVERTISEMENT

ಫಲಿತಾಂಶ ಸುಧಾರಣೆಗೆ ಅಂತಿಮ ಕಸರತ್ತು

ಆರ್.ಜಿತೇಂದ್ರ
Published 20 ಫೆಬ್ರುವರಿ 2018, 6:27 IST
Last Updated 20 ಫೆಬ್ರುವರಿ 2018, 6:27 IST
ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗಾಗಿ ವಿತರಿಸಲಾದ ‘ಯಶಸ್ಸು’ ಪ್ರಶ್ನೋತ್ತರ ಮಾಲಿಕೆ ಪುಸ್ತಕ
ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗಾಗಿ ವಿತರಿಸಲಾದ ‘ಯಶಸ್ಸು’ ಪ್ರಶ್ನೋತ್ತರ ಮಾಲಿಕೆ ಪುಸ್ತಕ   

ರಾಮನಗರ: ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಇನ್ನಷ್ಟು ಸುಧಾರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಹತ್ತು ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಡೆಯ ಕ್ಷಣದ ಕಸರತ್ತು ನಡೆಸಿದೆ.

ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನೂ ಉತ್ತೇಜಿಸಿ ಅವರನ್ನು ಪರೀಕ್ಷೆಯಲ್ಲಿ ಉತ್ತೀರ್ಣರನ್ನಾಗಿ ಮಾಡುವ ಗುರಿಯನ್ನು ಇಲಾಖೆಯು ಹೊಂದಿದೆ. ಇದರ ಅಂಗವಾಗಿ ವಿದ್ಯಾರ್ಥಿಗಳಿಗೆ ‘ಯಶಸ್ಸು’ ಎನ್ನುವ ವಿಷಯವಾರು ತರಬೇತಿ ಪುಸ್ತಕವನ್ನು ಕಳೆದ ಜನವರಿಯಲ್ಲಿ ವಿತರಿಸಲಾಗಿದೆ. ಸುಮಾರು ಹತ್ತು ಸಾವಿರದಷ್ಟು ವಿದ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ.

ಏನಿದು ಯಶಸ್ಸು: ಪಠ್ಯವನ್ನು ಓದಿಕೊಂಡು ಉತ್ತರ ಬರೆಯುವುದು ಕೆಲವು ವಿದ್ಯಾರ್ಥಿಗಳಿಗೆ ಕಷ್ಟವಾಗಿದೆ. ಅಂತಹವರನ್ನು ಗಮನದಲ್ಲಿ ಇಟ್ಟುಕೊಂಡು ಗೈಡ್‌ ಮಾದರಿಯಲ್ಲಿ ಪ್ರಶ್ನೋತ್ತರ ಮಾಲಿಕೆಯನ್ನು ರಚಿಸಲಾಗಿದೆ. ಪ್ರತಿ ವಿಷಯಕ್ಕೂ ಒಂದು ಪ್ರತ್ಯೇಕ ಹೊತ್ತಿಗೆ ಸಿದ್ಧಪಡಿಸಲಾಗಿದೆ. ಇಲಾಖೆಯ ಶಿಕ್ಷಕರೇ ಇದನ್ನು ರೂಪಿಸಿದ್ದಾರೆ. ಒಂದು ಸಾಲಿನ ಸರಳ ಪ್ರಶ್ನೋತ್ತರಗಳು, ಸಂಕ್ಷಿಪ್ತ ಟಿಪ್ಪಣಿಗಳನ್ನು ಈ ಹೊತ್ತಿಗೆಗಳು ಒಳಗೊಂಡಿವೆ.

ADVERTISEMENT

‘ಈ ಪುಸ್ತಕಗಳನ್ನು ಅಭ್ಯಾಸ ಮಾಡಿದ್ದೇ ಆದಲ್ಲಿ ಸಾಮಾನ್ಯ ಬುದ್ಧಿಮತ್ತೆ ವಿದ್ಯಾರ್ಥಿಗಳೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ನಮ್ಮ ಜಿಲ್ಲೆಯಲ್ಲಿ ಇಂತಹದ್ದೊಂದು ಪ್ರಯೋಗಕ್ಕೆ ಮುಂದಾದೆವು. ಈಗ ಬಹುತೇಕ ಸರ್ಕಾರಿ, ಅನುದಾನಿತ ಶಾಲೆಗಳ ಮಕ್ಕಳನ್ನು ಈ ಹೊತ್ತಿಗೆಗಳು ತಲುಪಿವೆ. ಸದ್ಯದಲ್ಲಿಯೇ ಎರಡನೇ ಹಂತದ ಪೂರ್ವಸಿದ್ಧತಾ ಪರೀಕ್ಷೆ ಇದ್ದು, ಅಲ್ಲಿ ಫಲಿತಾಂಶ ಗೊತ್ತಾಗಲಿದೆ’ ಎಂದು ಡಿಡಿಪಿಐ ಗಂಗಮಾರೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪುಸ್ತಕಗಳ ಮುದ್ರಣಕ್ಕೆ ಟೊಯೊಟಾ ಕಂಪನಿಯು ಆರ್ಥಿಕ ಸಹಕಾರ ನೀಡಿದೆ. ನಾನೇ ಬ್ಲಾಕ್‌ವಾರು ಶಾಲೆಗಳನ್ನು ಭೇಟಿ ನೀಡಿ ಇದರ ಫಲಿತಾಂಶವನ್ನೂ ಗಮನಿಸುತ್ತಿದ್ದೇನೆ’ ಎಂದು ಅವರು ಹೇಳಿದರು.

ವಿಶ್ವಾಸ ಕಿರಣ: ಇದಲ್ಲದೆ ‘ವಿಶ್ವಾಸ ಕಿರಣ’ ಎನ್ನುವ ಕಾರ್ಯಕ್ರಮದ ಮೂಲಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಾರಾಂತ್ಯದಲ್ಲಿ ವಿಶೇಷ ತರಗತಿಗಳು ನಡೆದಿವೆ. 25 ದಿನಗಳ ಕಾಲ ಸರ್ಕಾರಿ ರಜೆ ದಿನಗಳಲ್ಲಿ ಮಕ್ಕಳಿಗೆ ವಿಜ್ಞಾನ, ಗಣಿತದ ಬೋಧನೆ ನಡೆದಿದೆ. ಫಲಿತಾಂಶ ಸುಧಾರಣೆಯ ನಿಟ್ಟಿನಲ್ಲಿ ಈ ಕಾರ್ಯಕ್ರಮವೂ ಮಹತ್ವದ್ದಾಗಿದೆ.

ತಾಯಂದಿರ ಸಭೆ: ಖಾಸಗಿ ಶಾಲೆಗಳ ಮಾದರಿಯಲ್ಲೇ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿಯೂ ನಿಯಮಿತವಾಗಿ ಪೋಷಕರ ಸಭೆಗಳನ್ನು ಇಲಾಖೆಯು ಆಯೋಜಿಸುತ್ತಿದೆ. ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಯ ವಿವರ ಪಡೆಯುತ್ತಿದ್ದಾರೆ. ಇದು ವಿದ್ಯಾರ್ಥಿಗಳ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದೆ ಎನ್ನುತ್ತಾರೆ ಅಧಿಕಾರಿಗಳು.

ಆನ್‌ಲೈನ್ ತರಬೇತಿ: ಕಲಿಕೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದುವರಿದಿರುವ ಇಲಾಖೆಯು ವರ್ಚುಯಲ್‌ ತರಗತಿಗಳ ಮೂಲಕ ಮಕ್ಕಳಿಗೆ ಆನ್‌ಲೈನ್‌ ಕಲಿಕೆ ಸೌಲಭ್ಯ ಒದಗಿಸುತ್ತಿದೆ. ಜಿಲ್ಲೆಯ ಎಂಟು ಶಾಲೆಗಳಲ್ಲಿ ಸದ್ಯ ಈ ಕಾರ್ಯಕ್ರಮನಡೆದಿದೆ.

ಪರೀಕ್ಷಾ ಕೇಂದ್ರಗಳ ಗದ್ದಲವಿಲ್ಲ
ಈ ವರ್ಷ ಜಿಲ್ಲೆಯಲ್ಲಿ ಒಟ್ಟು 55 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಇದರಲ್ಲಿ 24 ಸರ್ಕಾರಿ ಶಾಲೆ, 28 ಅನುದಾನಿತ ಶಾಲೆ ಹಾಗೂ 3 ಖಾಸಗಿ ಶಾಲೆ ಕೇಂದ್ರಗಳು ಸೇರಿವೆ.

ಕಳೆದ ವರ್ಷ ಪರೀಕ್ಷಾ ಕೇಂದ್ರಗಳ ಅದಲು ಬದಲಿನಿಂದಾಗಿ ವಿದ್ಯಾರ್ಥಿಗಳಲ್ಲಿ ಕೊಂಚ ಗೊಂದಲ ಏರ್ಪಟ್ಟಿತ್ತು. ಆದರೆ ಈ ವರ್ಷ ಶಿಕ್ಷಣ ಇಲಾಖೆಯು ಹೆಚ್ಚಿನ ಬದಲಾವಣೆ ಮಾಡಿಲ್ಲ.


ಸಿ.ಸಿ. ಟಿವಿ ಕ್ಯಾಮೆರಾ ಕಡ್ಡಾಯ
ಪರೀಕ್ಷಾ ಅಕ್ರಮವನ್ನು ತಡೆಯುವ ಸಲುವಾಗಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಪ್ರಶ್ನೆಪತ್ರಿಕೆಗಳನ್ನು ತೆರೆಯುವ ಕೊಠಡಿ ಹಾಗೂ ಆವರಣದಲ್ಲಿ ಕ್ಯಾಮೆರಾಗಳು ಇರಲಿವೆ. ಅನುಕೂಲ ಇರುವ ಕಡೆ ಕೊಠಡಿಗಳ ಒಳಗೂ ಕ್ಯಾಮೆರಾಗಳು ಕಾರ್ಯನಿರ್ವಹಿಸಲಿವೆ. ಇದರಿಂದ ಅಲ್ಲಿನ ಚಲನವಲನಗಳು, ಬಂದು ಹೋಗುವವರ ವಿವರಗಳೆಲ್ಲವೂ ದಾಖಲಾಗಲಿವೆ.

ಜಿಲ್ಲೆಯಲ್ಲಿ ಈಗಾಗಲೇ 25 ಕೇಂದ್ರಗಳು ಇಂತಹ ಸೌಲಭ್ಯವನ್ನು ಹೊಂದಿದ್ದು, ಇನ್ನೂ 30 ಕೇಂದ್ರಗಳಲ್ಲಿ ಕ್ಯಾಮೆರಾಗಳು ಅಳವಡಿಕೆಯಾಗಲಿವೆ.

* * 

ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯು ಆರನೇ ಸ್ಥಾನ ಪಡೆದಿತ್ತು. ಈ ವರ್ಷ ಮೊದಲ ಐದರೊಳಗೆ ಸ್ಥಾನ ಪಡೆಯುವ ಗುರಿ ಇದೆ
ಎಂ.ಎಚ್‌. ಗಂಗಮಾರೇಗೌಡ
ಡಿಡಿಪಿಐ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.