ADVERTISEMENT

ಮಾಗಡಿ | ಉರ್ದು ಶಾಲೆ: ಶಿಥಿಲ ಕೊಠಡಿಯಲ್ಲೇ 70 ಮಕ್ಕಳಿಗೆ ಪಾಠ

​ಪ್ರಜಾವಾಣಿ ವಾರ್ತೆ
Published 31 ಜುಲೈ 2023, 3:05 IST
Last Updated 31 ಜುಲೈ 2023, 3:05 IST
ಮಾಗಡಿ ಪಟ್ಟಣದ ಹಳೆ ಮಸೀದಿ ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಶಾಲೆಯ ಶಿಥಿಲಗೊಂಡಿದ್ದ ಹಳೆ ಕಟ್ಟಡಗಳನ್ನು ಕೆಡವಿ ಅವಶೇಷಗಳನ್ನು ಸರಿಯಾಗಿ ತೆರವುಗೊಳಿಸದೆ ಹಾಗೆಯೇ ಬಿಡಲಾಗಿದೆ
ಮಾಗಡಿ ಪಟ್ಟಣದ ಹಳೆ ಮಸೀದಿ ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಶಾಲೆಯ ಶಿಥಿಲಗೊಂಡಿದ್ದ ಹಳೆ ಕಟ್ಟಡಗಳನ್ನು ಕೆಡವಿ ಅವಶೇಷಗಳನ್ನು ಸರಿಯಾಗಿ ತೆರವುಗೊಳಿಸದೆ ಹಾಗೆಯೇ ಬಿಡಲಾಗಿದೆ   

ದೊಡ್ಡಬಾಣಗೆರೆ ಮಾರಣ್ಣ

ಮಾಗಡಿ: ಶಿಥಿಲಾವಸ್ಥೆ ತಲಪಿರುವ ಏಕೈಕ ಕೊಠಡಿಯ ಚಾವಣಿಯಿಂದ ಜಿನುಗುವ ಮಳೆ ನೀರು. ಅದರಲ್ಲೇ 1ರಿಂದ 7ನೇ ತರಗತಿವರೆಗಿನ 70 ಮಕ್ಕಳನ್ನು ಗುಡ್ಡೆ ಹಾಕಿಕೊಂಡು ಪಾಠ ಮಾಡಬೇಕಾದ ಅನಿವಾರ್ಯತೆ ಶಾಲೆಯ ಶಿಕ್ಷಕರದು.

ಪಟ್ಟಣದ ಹಳೆ ಮಸೀದಿ ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಜಿ.ಎನ್.ಟಿ.ಜಿ.ಎಂ.ಎಸ್ ಶಾಲೆಯ ದುಃಸ್ಥಿತಿ ಇದು.

ADVERTISEMENT

ಶಿಥಿಲವಾಗಿವೆ ಎಂದು ಶಾಲೆಯ 6 ಕೊಠಡಿಗಳನ್ನು ಕೆಡವಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳು, ಹೊಸ ಕೊಠಡಿಗಳನ್ನು ವರ್ಷವಾದರೂ ನಿರ್ಮಿಸಿ ಕೊಡಲಿಲ್ಲ. ಇದರಿಂದಾಗಿ, ವಿದ್ಯಾರ್ಥಿಗಳು –ಶಿಕ್ಷಕರು ಇರುವ ಏಕೈಕ ಕೊಠಡಿಯಲ್ಲಿ ಆತಂಕದಿಂದ ದಿನ ಕಳೆಯಬೇಕಾಗಿದೆ.

ಬೇರೆಡೆಗೆ ವರ್ಗಾವಣೆ

2022-23ನೇ ಸಾಲಿಗೆ ರಾಜ್ಯ ವಲಯ ಮುಂದುವರಿದ ಯೋಜನೆಯಡಿ 2022ನೇ ಆಗಸ್ಟ್‌ನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗಳ ಕ್ರಿಯಾ ಯೋಜನೆಗೆ ಜಿಲ್ಲಾ ಪಂಚಾಯಿತಿ ಸಿಇಒ ಆಡಳಿತಾತ್ಮಕ ಅನುಮೋದನೆ ನೀಡಿದ್ದರು’ ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಜಾಬಿರ್ ಪಾಷಾ ಹೇಳಿದರು.

ಶಾಲೆಗೆ 6 ಕೊಠಡಿಗಳ ಅಗತ್ಯವಿದೆ. ಇರುವ ಏಕೈಕ ಶಿಥಿಲ ಕೊಠಡಿಯಲ್ಲಿ 70 ಮಕ್ಕಳನ್ನು ಕೂಡಿಸಿಕೊಂಡು ಪಾಠ ಮಾಡುತ್ತಿದ್ದೇವೆ. ಕೊಠಡಿಯ ಸೀಲಿಂಗ್ ಉದುರಿ ಬೀಳುತ್ತಿದೆ.
ನಗೀನಾ ಜಾನ್, ಮುಖ್ಯ ಶಿಕ್ಷಕಿ

‘ಅದರಂತೆ, ಉರ್ದು ಶಾಲೆಗೆ ₹13.90 ಲಕ್ಷ ವೆಚ್ಚದಲ್ಲಿ ಕೊಠಡಿ ನಿರ್ಮಾಣಕ್ಕೆ ಆದೇಶವಾಗಿತ್ತು. ನಂತರ, ಶಿಥಿಲವಾಗಿದ್ದ 6 ಕೊಠಡಿಗಳನ್ನು ತೆರವುಗೊಳಿಸಲಾಗಿತ್ತು. ಕೊಠಡಿಗಳನ್ನು ಕೆಡವಿದ ನಂತರ, ಶಾಲೆಗೆ ಮಂಜೂರಾಗಿದ್ದ ಕೊಠಡಿಯನ್ನು ಬೇರೆಡೆಗೆ ವರ್ಗಾಯಿಸಿದರು’ ಎಂದು ತಿಳಿಸಿದರು.

ಮಕ್ಕಳನ್ನು ಕಳಿಸಲು ಭಯವಾಗುತ್ತಿದೆ. ಆದರೆ ಬಡವರಾದ ನಮಗೆ ಆ ಶಾಲೆ ಬಿಟ್ಟರೆ ಬೇರೆ ಕಡೆ ಸೇರಿಸುವ ಸಾಮರ್ಥ್ಯವಿಲ್ಲ. ಆದಷ್ಟು ಬೇಗ ಹೊಸ ಕೊಠಡಿ ನಿರ್ಮಿಸಿ ನಮ್ಮ ಆತಂಕ ದೂರ ಮಾಡಬೇಕು.
ಮೋಹ್ಸಿನಾ ಪೋಷಕಿ

‘ಖಾಸಗಿ ಕಂಪನಿಯೊಂದರ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಆರ್‌ಎಸ್‌) ಯೋಜನೆಯಡಿ  ಮಂಜೂರಾಗಿದ್ದ ಕೊಠಡಿಯೂ ಬೇರೆ ಶಾಲೆಗೆ ವರ್ಗಾಯಿಸಿದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದರೂ ಪ್ರಯೋಜವಾಗಿಲ್ಲ. ಒಂದೇ ಕೊಠಡಿಯಲ್ಲಿ ಶಾಲೆ ನಡೆಸಲಾಗುತ್ತಿದೆ’ ಎಂದು ಶಿಕ್ಷಕರು ತಿಳಿಸಿದರು.

ಜಿಲ್ಲಾ ಪಂಚಾಯಿತಿಯಿಂದ ಮಂಜೂರಾಗಿದ್ದ ಕೊಠಡಿಯನ್ನು ಬೇರೆ ಶಾಲೆಗೆ ವರ್ಗಾಯಿಸಿರುವ ಬಗ್ಗೆ ಮಾಹಿತಿ ಪಡೆಯುವೆ. ನೂತನ ಕೊಠಡಿ ಕಟ್ಟಿಸಿ ಕೊಡುವಂತೆ ಜಿ.ಪಂ.ಗೆ ಮನವಿ ಮಾಡುತ್ತೇನೆ.
ಗಂಗಣ್ಣಸ್ವಾಮಿ, ಡಿಡಿಪಿಐ, ರಾಮನಗರ

ಕುಸಿಯುವ ಆತಂಕ

ಸದ್ಯ ತರಗತಿ ನಡೆಯುತ್ತಿರುವ ಶಿಥಿಲ ಕೊಠಡಿ ಮಳೆಗಾಲದಲ್ಲಿ ಯಾವುದೇ ಕ್ಷಣದಲ್ಲಿ ಬೀಳುವ ಅಪಾಯವಿದೆ. ಅನಾಹುತ ಸಂಭವಿಸುವುದಕ್ಕೂ ಮುಂಚೆ ಶಿಕ್ಷಣ ಇಲಾಖೆ ಶಾಲೆಯತ್ತ ಗಮನ ಹರಿಸಿ, ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದರು. ಅವರ ಮಾತಿಗೆ ಶಿಕ್ಷಕರು ಸಹ ದನಿಗೂಡಿಸಿದರು.

ಕ್ರಮ ಕೈಗೊಳ್ಳಬೇಕು

‘ನಮ್ಮ ಉರ್ದು ಶಾಲೆಗೆ ನೂತನ ಕೊಠಡಿಗಳನ್ನು ತಕ್ಷಣ ನಿರ್ಮಿಸಿ ಕೊಡಬೇಕು. ಅಲ್ಲದೆ ಹಿಂದೆ ಮಂಜೂರಾಗಿದ್ದ ಕೊಠಡಿಯನ್ನು ಬೇರೆಡೆಗೆ ವರ್ಗಾಯಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಶಾಲೆಯ ಸ್ಥಿತಿ ನೋಡಿಯೂ ಕೊಠಡಿಯನ್ನು ಬೇರೆಡೆಗೆ ವರ್ಗಾಯಿಸಿದ್ದಾರೆಂದರೆ ಅವರ ಮನಸ್ಥಿತಿ ಇನ್ಯಾವ ಮಟ್ಟಿಗೆ ಇರಬಹುದು’ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಾಬಿರ್ ಪಾಷಾ ಅಸಮಾಧಾನ ವ್ಯಕ್ತಪಡಿಸಿದರು.

ಮಾಗಡಿ ಪಟ್ಟಣದ ಹಳೆ ಮಸೀದಿ ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಶಾಲೆಯ ಏಕೈಕ ಕೊಠಡಿಯಲ್ಲೇ ಮಕ್ಕಳು ಕುಳಿತಿರುವುದು. ಮೇಲ್ಭಾಗದಲ್ಲಿ ಚಾವಣಿ ಕುಸಿದಿದೆ
ಶಿಥಿಲ ಕೊಠಡಿಯ ಚಾವಣಿಯ ಪದರು ಕುಸಿದು ಬಿದ್ದರೂ ವಿಧಿ ಇಲ್ಲದೆ ವಿದ್ಯಾರ್ಥಿಗಳು ಅಲ್ಲೇ ಕುಳಿತು ಪಾಠ ಕೇಳಬೇಕಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.