ADVERTISEMENT

ರಾಮನಗರ | ಬೆಳೆದ ಬೆಳೆಗೆ ಮಾರುಕಟ್ಟೆ ಸೃಷ್ಟಿಸಿದ ಮಾದರಿ ರೈತ

ಎಚ್.ಎಂ.ರಮೇಶ್
Published 1 ಆಗಸ್ಟ್ 2024, 4:45 IST
Last Updated 1 ಆಗಸ್ಟ್ 2024, 4:45 IST
ಚನ್ನಪಟ್ಟಣ ತಾಲ್ಲೂಕಿನ ಸೀಬನಹಳ್ಳಿ ರೈತ ಶಶಿಕುಮಾರ್ ಅವರು ಸಂತೆಯಲ್ಲಿ ಸ್ವತಃ ತರಕಾರಿ, ಹೂ ಮಾರಾಟದಲ್ಲಿ ತೊಡಗಿರುವುದು
ಚನ್ನಪಟ್ಟಣ ತಾಲ್ಲೂಕಿನ ಸೀಬನಹಳ್ಳಿ ರೈತ ಶಶಿಕುಮಾರ್ ಅವರು ಸಂತೆಯಲ್ಲಿ ಸ್ವತಃ ತರಕಾರಿ, ಹೂ ಮಾರಾಟದಲ್ಲಿ ತೊಡಗಿರುವುದು   

ಚನ್ನಪಟ್ಟಣ: ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ಸಿಗುತ್ತಿಲ್ಲ ಎನ್ನುವುದು ರೈತರ ಕೊರಗು. ಆದರೆ ಇಲ್ಲೊಬ್ಬ ರೈತ ತಾನು ಬೆಳೆದ ಬೆಳೆಗೆ ತಾನೇ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.


ತಾಲ್ಲೂಕಿನ ಸೀಬನಹಳ್ಳಿ ಗ್ರಾಮದ ಶಶಿಕುಮಾರ್ ಈ ಮಾದರಿ ಕೃಷಿಕ. ಮಿಶ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಪ್ರಗತಿ ಸಾಧಿಸಿರುವ ಇವರು ಕೃಷಿ ಬಗ್ಗೆ ಹೊಂದಿರುವ ಅಪರಿಮಿತ ಪ್ರೀತಿ ಹಾಗೂ ಕಾಯಕನಿಷ್ಠೆ ರೈತಕುಲಕ್ಕೆ ಮಾದರಿಯಾಗಿದೆ.


ಹತ್ತನೆ ತರಗತಿ ಓದಿರುವ ಇವರು ಚಿಕ್ಕಂದಿನಿಂದಲೂ ಕೃಷಿ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದವರು. ತಮಗೆ ಬಂದಿರುವ ಪಿತ್ರಾರ್ಜಿತ ಐದು ಎಕರೆ ಜಮೀನಿನಲ್ಲಿ ವಿವಿಧ ಕೃಷಿ ನಡೆಸುತ್ತಿದ್ದಾರೆ. ಮಾವು, ಭತ್ತ, ತೆಂಗು, ರಾಗಿ, ತೊಗರಿ, ಅಲಸಂದೆ ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳು ಹಾಗೂ ಆಯಾ ಋತುಮಾನಕ್ಕೆ ತಕ್ಕಂತೆ ವಿವಿಧ ತರಕಾರಿ, ವಿವಿಧ ಸೊಪ್ಪು, ಮೆಣಸಿನಕಾಯಿ, ಚೆಂಡುಹೂಗಳನ್ನು ಬೆಳೆಯುತ್ತಾರೆ. ರೇಷ್ಮೆ ಸಾಕಾಣಿಕೆ, ಹಸು, ಕುರಿ ಹಾಗೂ ಕೋಳಿ ಸಾಕಾಣಿಕೆ ಇವರ ಉಪಕಸುಬುಗಳು. ಇವರ ಕೃಷಿ ಕಾರ್ಯಕ್ಕೆ ಇವರ ತಂದೆ ರಾಮಕೃಷ್ಣೇಗೌಡ, ಪತ್ನಿ ಎಂ.ಎಚ್.ರೂಪ ಹಾಗೂ ಮೂವರು ಹೆಣ್ಣುಮಕ್ಕಳು ಕೈಜೋಡಿಸಿದ್ದಾರೆ.

ADVERTISEMENT


ನೇರ ಮಾರಾಟಗಾರ: ಶಶಿಕುಮಾರ್ ಅವರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಯಾವುದೇ ದಲ್ಲಾಳಿ ಹಾಗೂ ಮಾರುಕಟ್ಟೆ ನೆಚ್ಚಿಕೊಂಡಿಲ್ಲ. ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಕಂಡುಕೊಂಡಿದ್ದಾರೆ. ತಮ್ಮ ಗ್ರಾಮ ಹಾಗೂ ಅಕ್ಕಪಕ್ಕ ಗ್ರಾಮಗಳ ಗ್ರಾಹಕರು ಹಾಗೂ ರೈತರು ಸ್ಥಳಕ್ಕೆ ಬಂದು ಇವರ ಬೆಳೆಗಳನ್ನು ಕೊಂಡುಕೊಳ್ಳುತ್ತಾರೆ.


ಸಾಮಾಜಿಕ ಜಾಲತಾಣವನ್ನು ಸಹ ತಮ್ಮ ವ್ಯಾಪಾರಕ್ಕೆ ಬಳಕೆ ಮಾಡಿಕೊಂಡಿರುವ ಇವರು, ಆ ದಿನದ ಬೆಳೆಯ ಮಾಹಿತಿಯನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ಅವಶ್ಯಕತೆ ಇರುವವರಿಗೆ ಆಯಾ ದಿನದ ತಾಜಾ ಸೊಪ್ಪು, ತರಕಾರಿ ಹಾಗೂ ಇನ್ನಿತರ ಬೆಳೆಯನ್ನು ಮಾರಾಟ ಮಾಡುತ್ತಾರೆ.


ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಶಿವಳ್ಳಿ ಹೋಟೆಲ್ ಮುಂಭಾಗ ಅಂಗಡಿ ತೆರೆದು ಗ್ರಾಹಕರಿಗೆ ತನ್ನ ಬೆಳೆಗಳನ್ನು ಮಾರುತ್ತಾರೆ. ಜೊತೆಗೆ ಬುಧವಾರ ನಿಡಘಟ್ಟ ಸಂತೆ, ಶುಕ್ರವಾರ ಕೆಸ್ತೂರು ಸಂತೆ, ಶನಿವಾರ ಬೆಸಗರಹಳ್ಳಿ ಸಂತೆ ಹಾಗೂ ಮಂಗಳವಾರ ಮದ್ದೂರು ಸಂತೆಗಳಿಗೆ ತೆರಳಿ ಅಲ್ಲಿ ಅಂಗಡಿ ಇಟ್ಟು ತನ್ನ ಬೆಳೆಗಳನ್ನು ಗ್ರಾಹಕರಿಗೆ ತಲುಪಿಸುತ್ತಾರೆ. ಜೊತೆಗೆ ತನ್ನ ತೋಟದಲ್ಲಿ ಬೆಳೆಯುವ ರಸಭರಿತ ಮಾವಿನಹಣ್ಣುಗಳನ್ನು ನೈಸರ್ಗಿಕವಾಗಿ ಹಣ್ಣುಮಾಡಿ ಗ್ರಾಹಕರಿಗೆ ನೀಡುತ್ತಾರೆ. ಇವರ ಬಳಿ ಪ್ರತಿನಿತ್ಯ ಒಂದಲ್ಲ ಒಂದು ಬೆಳೆ ಮಾರಾಟವಾಗುತ್ತವೆ. ಪ್ರತಿನಿತ್ಯ ಆದಾಯ ನೋಡುತ್ತಾರೆ.


ಮಾಗಡಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಬೆಂಗಳೂರು ಜಿಕೆವಿಕೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹೊಸ ವಿಧದ ತಳಿಗಳ ಕೃಷಿಯನ್ನು ಮಾಡುತ್ತಿದ್ದಾರೆ. ಮಧುಮೇಹಕ್ಕೆ ರಾಮಬಾಣ ಎಂದು ನಂಬಲಾಗಿರುವ ಅಪರೂಪದ ವೈಟ್ ರಾಗಿ (ಕೆ.ಎಂ.ಆರ್. 340) ನಲ್ಲೂ ಲಾಭ ಕಂಡಿದ್ದಾರೆ. ಸಿರಿಧಾನ್ಯ ಬೆಳೆಯೂ ಸಹ ಇವರ ಕೃಷಿಯ ಪಟ್ಟಿಯಲ್ಲಿದೆ. ಟ್ರ್ಯಾಕ್ಟರ್ ಸೇರಿದಂತೆ ಆಧುನಿಕ ಕೃಷಿ ಉಪಕರಣಗಳನ್ನು ಹೊಂದಿರುವ ಇವರು ಕೃಷಿಯಿಂದ ವಾರ್ಷಿಕವಾಗಿ ಉತ್ತಮ ಆದಾಯ ಗಳಿಸುವ ಮೂಲಕ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ನೇರ ಮಾರುಕಟ್ಟೆ ವ್ಯವಸ್ಥೆ ಇವರ ಆದಾಯದ ಪ್ರಮುಖ ಭಾಗವಾಗಿದೆ.


ಅಕಾಶವಾಣಿ ಹಾಗೂ ಚಂದನ ವಾಹಿನಿಯ ಫೋನ್ ಇನ್ ಕಾರ್ಯಕ್ರಮದಲ್ಲಿ ರೈತರಿಗೆ ಮಾರ್ಗದರ್ಶನ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಜೊತೆಗೆ ತಮ್ಮ ತೋಟಕ್ಕೆ ಬರುವ ರೈತರಿಗೂ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ರೈತ ಚಳುವಳಿಯಲ್ಲೂ ಮುಂಚೂಣಿಯಲ್ಲಿದ್ದು, ರೈತಸಂಘದ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದಾರೆ. ಇವರ ಕೃಷಿ ಸಾಧನೆಯನ್ನು ಗುರುತಿಸಿ ಸರ್ಕಾರ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಸನ್ಮಾನಿಸಿವೆ.


ರೈತರು ಮಿಶ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ನೇರ ಮಾರುಕಟ್ಟೆ ಮಾಡಿಕೊಂಡರೆ ಲಾಭ ಕಾಣಬಹುದು. ನಾನು ಕಲಿತುಕೊಂಡಿರುವುದನ್ನು ಆಸಕ್ತರಿಗೆ ತಿಳಿಸಬೇಕು ಎಂಬುದು ನನ್ನ ಆಶಯ ಎಂದು ರೈತ ಸೀಬನಹಳ್ಳಿ ಶಶಿಕುಮಾರ್ ತಿಳಿಸುತ್ತಾರೆ. ಸಂಪರ್ಕ ಸಂಖ್ಯೆ - 9743373350

ರೇಷ್ಮೆಗೂಡು ಬಿಚ್ಚುತ್ತಿರುವ ಶಶಿಕುಮಾರ್ ಮತ್ತು ಮಹಿಳೆಯರು
ತಮ್ಮ ಮಗಳ ಜೊತೆ ಮೆಣಸಿನಕಾಯಿ ಬಿಡಿಸುತ್ತಿರುವ ರೈತ ಶಶಿಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.