ADVERTISEMENT

ಕನಕಪುರ | ಕಾಡುಕೋಣ ದಾಳಿಗೆ ಕುರಿಗಾಹಿ ಬಲಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 4:47 IST
Last Updated 24 ಫೆಬ್ರುವರಿ 2023, 4:47 IST
ನಾಗನಾಯ್ಕ್
ನಾಗನಾಯ್ಕ್   

ಕನಕಪುರ: ಇಲ್ಲಿನ ಕಾಡು ಶಿವನಹಳ್ಳಿದೊಡ್ಡಿ ಗ್ರಾಮದ ಬಳಿಯಿರುವ ಕಾಡಿನಲ್ಲಿ ಕುರಿ, ಮೇಕೆ ಮೇಯಿಸುತ್ತಿದ ವ್ಯಕ್ತಿಯ ಮೇಲೆ ಕಾಡುಕೋಣ ಗುರುವಾರ ದಾಳಿ ನಡೆಸಿದ್ದು, ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉಯ್ಯಂಬಳ್ಳಿ ಹೋಬಳಿಯ ಕಾಡು ಶಿವನಹಳ್ಳಿದೊಡ್ಡಿ ಗ್ರಾಮದ ನಾಗನಾಯ್ಕ್ (65) ಮೃತಪಟ್ಟವರು. ಮೃತ ನಾಗನಾಯ್ಕ ಅವರ ಜತೆಗಿದ್ದ ಪಾಪಣ್ಣಿ ನಾಯ್ಕ್ ಅವರು ಕಾಡುಕೋಣ ದಾಳಿಯಿಂದ ತಪ್ಪಿಸಿಕೊಂಡು ಪಾರಾಗಿದ್ದಾರೆ.

ಮೃತ ನಾಗನಾಯ್ಕ್ ಮತ್ತು ಪಾಪಣ್ಣಿ ಇಬ್ಬರು ಕುರಿ, ಮೇಕೆ ಸಾಕಾಣಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದು, ಗುರುವಾರವೂ ಎಂದಿನಂತೆ ಕಾಡು ಶಿವನಹಳ್ಳಿ
ದೊಡ್ಡಿಯ ಕಾಡಂಚಿನ ಜಮೀನಿ ನಲ್ಲಿ ಕುರಿ ಮೇಯಿಸಲು ಹೋಗಿದ್ದರು. ಈ ವೇಳೆ ಏಕಾಏಕಿ ಬಂದ ಕಾಡುಕೋಣವು ದಾಳಿ ನಡೆಸಿದ್ದು, ಪಾಪಣ್ಣಿ ಮರ ಏರಿ ಕುಳಿತಿದ್ದರಿಂದ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.

ADVERTISEMENT

ನಾಗನಾಯ್ಕ್ ಅವರೂ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಕಾಡುಕೋಣವು ಕೊಂಬಿನಿಂದ ಅವರ ಹೊಟ್ಟೆಯ ಬಲಭಾಗಕ್ಕೆ ಬಲವಾಗಿ ತಿವಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟರು.

ಪಾಪಣ್ಣಿ ನಾಯ್ಕ್ ಗ್ರಾಮಕ್ಕೆ ಬಂದು ಗ್ರಾಮಸ್ಥರು ಮತ್ತು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪಿಎಸ್ಐ ಪಾಲಾಕ್ಷ, ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಶವವನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.