ADVERTISEMENT

ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ, ನಿಷೇದಾಧಿಕಾರಿಗಳಿಗೆ ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 2:48 IST
Last Updated 12 ಫೆಬ್ರುವರಿ 2026, 2:48 IST
   

ರಾಮನಗರ: ‘ಅನಿಷ್ಟ ಪದ್ಧತಿಗಳಲ್ಲಿ ಒಂದಾದ ಜೀತ ಪದ್ಧತಿಯ ನಿರ್ಮೂಲನೆಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಸಹ ಕೈ ಜೋಡಿಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ ಪಿ.ಆರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಮತ್ತು ಜೀತ ಪದ್ಧತಿ ನಿಷೇದಾಧಿಕಾರಿಗಳಿಗೆ ಆಯೋಜಿಸಲಾಗಿದ್ದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಗ್ರಾಮ ಮಟ್ಟದ ಅಧಿಕಾರಿಗಳು ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಸಮರ್ಥವಾಗಿ ಮತ್ತು ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸಿ ಗ್ರಾಮ ಮಟ್ಟದಲ್ಲೇ ಜೀತ ಪದ್ಧತಿ ತಡೆಯಬೇಕು. ಈ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ತೊಡಗಿಸಿಕೊಳ್ಳಬೇಕು’ ಎಂದರು.

ADVERTISEMENT

‘ಇಟ್ಟಿಗೆ ಭಟ್ಟಿ ಕೇಂದ್ರಗಳು, ಕೋಳಿ ಸಾಕಾಣಿಕೆ ಕೇಂದ್ರಗಳು, ರೇಷ್ಮೆ ನೂಲು ಬಿಚ್ಚುವ ಕೇಂದ್ರಗಳು, ಹೋಟೆಲ್‌ಗಳು, ತೋಟದ ಮನೆಗಳು, ಗಣಿಗಾರಿಕೆ ಪ್ರದೇಶಗಳು, ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವವರನ್ನು ಸೂಕ್ಷ್ಮವಾಗಿ ಗಮನಿಸಿ ಮಾಹಿತಿ ಕಲೆ ಹಾಕಬೇಕು. ಅಲ್ಲೇನಾದರೂ ಜೀತ ಪದ್ಧತಿ ಆಚರಣೆ ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

‘ಮನುಷ್ಯನನ್ನು ವಸ್ತುವಂತೆ ಕಂಡು ಮಾರಾಟ ಮಾಡುವ ಹಾಗೂ ಖರೀದಿಸುವುದೇ ಜೀತ ಪದ್ಧತಿಯಾಗಿದೆ. ಸಂವಿಧಾನದ 21ನೇ ವಿಧಿ ಜೀವಿಸುವ, ಸ್ವಾತಂತ್ರ್ಯದ ಹಕ್ಕು ಹಾಗೂ 23ನೇ ವಿಧಿ ಶೋಷಣೆ ವಿರುದ್ಧದ ಹಕ್ಕಿನ ಮೂಲಕ ದೇಶದ ಜನರಿಗೆ ಗೌರವಯುತ ಬದುಕನ್ನು ಕಲ್ಪಿಸಿದೆ’ ಎಂದು ತಿಳಿಸಿದರು.

‘ಜೀತ ಕಾರ್ಮಿಕ ಪದ್ಧತಿ (ರದ್ಧತಿ) ಕಾಯ್ದೆ– 1976 ಸೇರಿದಂತೆ ವಿವಿಧ ಕಾನೂನುಗಳನ್ನು ಜಾರಿಗೊಳಿಸಿದೆ. ಜೀವನದ ಉನ್ನತಿಗೆ ಹಾಗೂ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರೂ ಕಾನೂನಗಳನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ ನಾವು ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಲು ಸಾಧ್ಯ’ ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಬಿನೋಯ್ ಅವರು, ಜೀತ ಕಾರ್ಮಿಕ ಪದ್ಧತಿ ನಿರ್ಮೂಲನಾ ಹೋರಾಟಗಳ ಇತಿಹಾಸ, ಕಾಯ್ದೆ ಅನುಷ್ಠಾನ ಕುರಿತು ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿ ನಾಗೇಂದ್ರ ಅವರು ಜೀತ ಪದ್ಧತಿ ನಿರ್ಮೂಲನಾ ಕಾರ್ಯಾಚರಣೆ, ಕಾಯ್ದೆಗಳಡಿ ಜೀತ ವಿಮುಕ್ತರ ಪುನರ್ವಸತಿ, ಸರ್ಕಾರಿ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಧನರಾಜ್, ಯೋಜನಾ ನಿರ್ದೇಶಕ ಶಿವಕುಮಾರ್ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಆರಕ್ಷಕ ನಿರೀಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.