ADVERTISEMENT

ಚಿರತೆ ಉಪಟಳಕ್ಕೆ ಕ್ರಮ: ಡಿಸಿಎಂ ಅಶ್ವತ್ಥನಾರಾಯಣ

ರಾಮನಗರ ಜಿಲ್ಲೆಯ ನರೇಗಾ ಯೋಜನೆ ಪ್ರಗತಿ ಪರಿಶೀಲನೆ ವಿಡಿಯೊ ಸಂವಾದ

​ಪ್ರಜಾವಾಣಿ ವಾರ್ತೆ
Published 22 ಮೇ 2020, 15:25 IST
Last Updated 22 ಮೇ 2020, 15:25 IST
ಮಾಗಡಿಯಲ್ಲಿ ನರೇಗಾ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಡಿಸಿಎಂ.ಅಶ್ವತ್ಥನಾರಾಯಣ ಅವರನ್ನು ಇ.ಒ ಟಿ.ಪ್ರದೀಪ್‌ ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು. ಶಾಸಕ ಎ.ಮಂಜುನಾಥ ಇದ್ದರು
ಮಾಗಡಿಯಲ್ಲಿ ನರೇಗಾ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಡಿಸಿಎಂ.ಅಶ್ವತ್ಥನಾರಾಯಣ ಅವರನ್ನು ಇ.ಒ ಟಿ.ಪ್ರದೀಪ್‌ ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು. ಶಾಸಕ ಎ.ಮಂಜುನಾಥ ಇದ್ದರು   

ಮಾಗಡಿ: ಜಿಲ್ಲೆಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿರುವ 2391ಕೆರೆಗಳು ಮತ್ತು ಅರಣ್ಯ ಪ್ರದೇಶವನ್ನು ಸರ್ವೇ ಮಾಡಿ ಪ್ರಾಯೋಗಿಕ ಯೋಜನೆಯಡಿ ಕೆರೆ–ಕಾಡು ಸಂರಕ್ಷಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ನರೇಗಾ ಯೋಜನೆ ಪ್ರಗತಿ ಪರಿಶೀಲನೆ ವಿಡಿಯೊ ಸಂವಾದದಲ್ಲಿ ಮಾತನಾಡಿದರು.

ಕೆರೆಗಳು ಗ್ರಾಮೀಣ ಜನರ ಬದುಕಿನ ಜೀವಾಳದಾತು. ಅರಣ್ಯಪ್ರದೇಶದಲ್ಲಿ ಇರುವ 283ಕೆರೆಗಳ ಹೂಳೆತ್ತಿಸಲು ಇಲಾಖೆ ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು. ಮಳೆಗಾಲ ಆರಂಭಕ್ಕೆ ಮುನ್ನ ಜಿಲ್ಲೆಯಲ್ಲಿನ ಎಲ್ಲಾ ಕೆರೆಗಳ ಹೂಳೆತ್ತಿಸಬೇಕು ಎಂದು ಹೇಳಿದರು.

ADVERTISEMENT

ನರೇಗಾ ಯೋಜನೆಯ ಅನುಷ್ಠಾನದಲ್ಲಿ 4 ತಾಲ್ಲೂಕುಗಳಿಗೂ ತಾರತಮ್ಯ ಮಾಡದೆ ಸಮಾನ ಹಂಚಿಕೆ ಕಾಮಗಾರಿ ಮಾಡಿಸಬೇಕು. ಸರ್ವಾಂಗೀಣ ಪ್ರಗತಿಗೆ ನರೇಗಾ ಯೋಜನೆ ವರದಾನವಾಗಿದೆ. ನರೇಗಾ ಯೋಜನೆ ಅನುಷ್ಠಾನದಲ್ಲಿ ರಾಮನಗರ ಜಿಲ್ಲೆ 2ನೇ ಸ್ಥಾನದಲ್ಲಿದೆ. ಅಧಿಕ ಕಾಮಗಾರಿ ಕೈಗೊಂಡು ಮೊದಲನೆ ಸ್ಥಾನಕ್ಕೆ ಬರಬೇಕು. ಚಿರತೆಗಳ ಉಪಟಳ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ಉತ್ತಮ ಕೆಲಸ ಮಾಡಿದೆ. ಪಂಚಾಯಿತಿಗೊಂದು ಆಟದ ಮೈದಾನ ಮತ್ತು ಸ್ಮಶಾನ ಗುರುತಿಸಿ ಅಭಿವೃದ್ಧಿಪಡಿಸಬೇಕು. ಸಾಮಾಜಿಕ ಅರಣ್ಯದ ವತಿಯಿಂದ ಪ್ರತಿಯೊಂದು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 5ಕಿ.ಮಿ.ರಸ್ತೆ ಬದಿ ಸಸಿನೆಟ್ಟು ಬೆಳೆಸಬೇಕು ಎಂದು ಸಲಹೆ ನೀಡಿದರು‌.

ಪ್ರತಿಯೊಂದು ಸರ್ಕಾರಿ ಆಸ್ಪತ್ರೆ, ಶಾಲಾ ಮೈದಾನದಲ್ಲಿ ಉದ್ಯಾನ ಬೆಳೆಸಲು ಅಧಿಕಾರಿಗಳು ಜನಪ್ರತಿನಿಧಿಗಳು, ಸಾರ್ವಜನಿಕರು ಸಹಕಾರ ನೀಡಬೇಕು. ವೈ.ಜಿ.ಗುಡ್ಡ ಜಲಾಶಯದಿಂದ 4 ಗ್ರಾಮಪಂಚಾಯಿತಿಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಪರಿಶೀಲನೆ ನಡಸಲಾಗುವುದು ಎಂದರು.

ಉಪಮುಖ್ಯಮಂತ್ರಿಯೊಂದಿಗೆ ವಿಡಿಯೊ ಸಂವಾದದಲ್ಲಿ ಮಾತನಾಡಿದ ಮತ್ತಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೆಳ್ಳಿಯಪ್ಪ, ವೈ.ಜಿ.ಗುಡ್ಡದ ಜಲಾಶಯದಿಂದ 4 ಗ್ರಾಮ ಪಂಚಾಯಿತಿಗಳಿ ಕುಡಿಯುವ ನೀರು ಒದಗಿಸಿಬೇಕು ಎಂದು ಮನವಿ ಮಾಡಿದರು.

ಜಿ.ಪಂ.ಉಪಕಾರ್ಯದರ್ಶಿ ಉಮೇಶ್‌ ಮಾತನಾಡಿ,19–20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ₹313 ಕೋಟಿ ವೆಚ್ಚದಲ್ಲಿ ನರೇಗಾ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಉಯ್ಯಂಬಳ್ಳಿ, ಕಾಡಹಳ್ಳಿ, ಮಳೂರು, ಬೆಳಗುಂಬ ಗ್ರಾಮ ಪಂಚಾಯಿತಿ ಪಿಡಿಒಗಳು ತಮ್ಮ ಗ್ರಾ.ಪಂ.ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಿರುವ ನರೇಗಾ ಯೋಜನೆ ಬಗ್ಗೆ ಡಿಸಿಎಂ ಜತೆಗೆ ಸಂವಾದ ನಡೆಸಿದರು. ‌

ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ, ಜಿ.ಪಂ ಸಿಇಒ, ಇಕ್ರಂ, ತಾ.ಪಂ.ಅಧ್ಯಕ್ಷ ನಾರಾಯಣಪ್ಪ, ಉಪಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಪ್ರದೀಪ್‌, ತಾಲ್ಲೂಕು ಪಂಚಾಯಿತಿ ಇಒ, ಟಿ.ಪ್ರದೀಪ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.