ADVERTISEMENT

ಸಂತ್ರಸ್ತ ಕುಟುಂಬಗಳಿಗೆ ನೆರವಿಗೆ ಕ್ರಮ: ಕೊಟ್ಟಗಾಳು ಗ್ರಾ.ಪಂ. ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 5:13 IST
Last Updated 20 ಜೂನ್ 2021, 5:13 IST
ಕೊಟ್ಟಗಾಳು ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ನಡೆಯಿತು
ಕೊಟ್ಟಗಾಳು ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ನಡೆಯಿತು   

ಕನಕಪುರ: ಕೋವಿಡ್‌ ಸೋಂಕಿನಿಂದ ಮೃತಪಟ್ಟವರಿಗೆ ರಾಜ್ಯ ಸರ್ಕಾರ ₹ 1 ಲಕ್ಷ ಪರಿಹಾರ ಘೋಷಿಸಿದೆ. ತಾಲ್ಲೂಕಿನ ಕೊಟ್ಟಗಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೆ 7 ಮಂದಿ ಸಾವನ್ನಪ್ಪಿದ್ದು ಅವರ ದಾಖಲಾತಿಯನ್ನು ಸರ್ಕಾರಕ್ಕೆ ಕಳಿಸಿ ಕುಟುಂಬಗಳಿಗೆ ತ್ವರಿತವಾಗಿ ಪರಿಹಾರ ಕೊಡಿಸಲು ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ನಿರ್ಣಯ ಕೈಗೊಂಡರು.

ಅಧ್ಯಕ್ಷೆ ಪುಟ್ಟಮಣಿ ಪುಟ್ಟಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋವಿಡ್‌ ನಿಯಂತ್ರಣ ಸಂಬಂಧ ಚರ್ಚೆ ನಡೆಯಿತು. ಸರ್ಕಾರದ ಘೋಷಣೆಯು ಕಾಗದದಲ್ಲಿ ಉಳಿಯಬಾರದು. ಸಂತ್ರಸ್ತ ಕುಟುಂಬಕ್ಕೆ ಶೀಘ್ರವೇ ಪರಿಹಾರ ದೊರಕಿಸಲು ಪಂಚಾಯಿತಿ ಶ್ರಮಿಸಬೇಕೆಂದು ಸದಸ್ಯರು ಆಗ್ರಹಿಸಿದರು.

ಸೋಂಕು ಇನ್ನೂ ಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಸರ್ಕಾರ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡುತ್ತಿದೆ. ಜೀವನಕ್ಕಿಂತ ಜೀವ ಮುಖ್ಯವಾಗಿದೆ. ಜೀವ ಕಾಪಾಡುವ ಕೆಲಸವನ್ನು ನಾವು ಮಾಡಬೇಕಿದೆ. ಡಪಂಚಾಯಿತಿಯಿಂದ 18ರಿಂದ 45 ವರ್ಷದವರಿಗೆ ವ್ಯಾಕ್ಸಿನ್‌ ಅಭಿಯಾನ ನಡೆಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಸದಸ್ಯರು ಒತ್ತಾಯಿಸಿದರು.

ADVERTISEMENT

‘ಪಂಚಾಯಿತಿಯಲ್ಲಿ ಸಂಗ್ರಹಿಸುವ ಒಣ ಮತ್ತು ಹಸಿ ಕಸ ಬೇರ್ಪಡಿಸುವ ಕೆಲಸ ಮಾಡಬೇಕಿದೆ. ಸಂಗ್ರಹವಾದ ಕಸವನ್ನು ಖಾಸಗಿ ಜಮೀನುಗಳಲ್ಲಿ ಹಾಕುತ್ತಿದ್ದು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪಂಚಾಯಿತಿಯಿಂದ ಸೂಕ್ತ ಜಾಗ ಗುರುತಿಸಿ ವಿಲೇವಾರಿ ಮಾಡಬೇಕಿದೆ’ ಎಂದು ಪಿಡಿಒ ರಾಜೇಶ್ವರಿ ತಿಳಿಸಿದರು.

‘ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಗೋಮಾಳ ಜಾಗದಲ್ಲಿ ಕಸ ವಿಲೇವಾರಿ ಮಾಡಬಹುದು’ ಎಂದು ಸದಸ್ಯ ಜಗದೀಶ್‌ ಸಲಹೆ ನೀಡಿದರು.

ಪಂಚಾಯಿತಿಯಿಂದ ನೀಡಿರುವ ಉಚಿತ ನಿವೇಶನದಾರರು ಹೆಚ್ಚುವರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಆ ಜಾಗವನ್ನು ಬಿಡಿಸಿ ಯಾರಿಗೆ ನಿವೇಶನ ಇಲ್ಲವೋ ಅಂತಹವರನ್ನು ಗುರುತಿಸಿ ನಿವೇಶನ ನೀಡಬೇಕೆಂದು ಸದಸ್ಯರು ಸಲಹೆ ನೀಡಿದರು.

15ನೇ ಹಣಕಾಸು ಯೋಜನೆಯಡಿ ಪಂಚಾತಿಗೆ ₹ 42 ಲಕ್ಷ ಅನುದಾನ ಬಂದಿದೆ. ಈವರೆಗೆ ₹ 16 ಲಕ್ಷ ಮಾತ್ರ ಬಳಕೆಯಾಗಿದೆ. ಉಳಿಕೆ ಹಣವನ್ನು ಏಕೆ ಖರ್ಚು ಮಾಡಿಲ್ಲವೆಂದು ನೋಟೀಸ್‌ ಬಂದಿದೆ. ಶೀಘ್ರವೇ ಆ ಹಣವನ್ನು ಖರ್ಚು ಮಾಡಬೇಕಿದೆ ಎಂದು ಪಿಡಿಒ ಸಭೆಯ ಗಮನಕ್ಕೆ ತಂದರು. ಅದಕ್ಕೆ ಮುಂದಿನ ಸಭೆಯಲ್ಲಿ ನಿರ್ಣಯ ಮಾಡಲು ಸದಸ್ಯರು ಸೂಚಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಲು ಈ ಹಿಂದೆ ಹರಾಜು ಮಾಡಿದ್ದು ಅದರ ಅವಧಿ ಜೂನ್‌ 30ಕ್ಕೆ ಮುಕ್ತಾಯವಾಗಲಿದೆ. ಹೊಸದಾಗಿ ಕೆರೆ ಹರಾಜು ಮಾಡಬೇಕು ಎಂದು ಪಿಡಿಒ ತಿಳಿಸಿದರು.

‘ಈಗ ಕೆರೆಗಳು ಖಾಲಿಯಿವೆ. ಮುಂದೆ ಮಳೆಯಿಂದ ಕೆರೆ ತುಂಬಿದಾಗ ಕೆರೆಗಳನ್ನು ಹರಾಜು ಮಾಡಬೇಕು’ ಎಂದು ಸದಸ್ಯರುನಿರ್ಣಯಿಸಿದರು.

ಪಿಚ್ಚನಕೆರೆ ಸಮೀಪದ ಸರ್ವೇ ನಂಬರ್‌ 13 ಮತ್ತು 14ರಲ್ಲಿ ಎಬಿ ಸಿಟಿ ಲೇಔಟ್‌ ನಿರ್ಮಾಣ ಮಾಡಲಾಗಿದೆ. ಕೆಲವು ನಿವೇಶನಗಳ ಖಾತೆಯನ್ನು ತಮ್ಮ ಗಮನಕ್ಕೆ ತಾರದೆ ಮಾಡಲಾಗುತ್ತಿದೆ ಎಂದು ಪಿಡಿಒ ರಾಜೇಶ್ವರಿ ಅವರು ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ದೂರು ನೀಡಿರುವ ಸಂಬಂಧ ಸಭೆಯಲ್ಲಿ ಸದಸ್ಯರಾದ ಜಗದೀಶ್‌, ಲಾಯರ್‌ ದೇವುರಾವ್‌ ಜಾಧವ್‌ ಚರ್ಚೆ ನಡೆಸಿದರು. ದೂರು ನೀಡಿರುವ ವಿಷಯವನ್ನು ಏಕೆ ಸದಸ್ಯರ ಗಮನಕ್ಕೆ ತಂದಿಲ್ಲವೆಂದು
ಪ್ರಶ್ನಿಸಿದರು.

ಪಿಡಿಒ ಗಮನಕ್ಕೆ ತಾರದೆ ಖಾತೆ ಪ್ರಕ್ರಿಯೆ ನಡೆಯುತ್ತಿರುವುದು ಸರಿಯಲ್ಲ. ಪಿಡಿಒ ಸಹಿ ಮತ್ತು ಲಾಗಿನ್‌ ದುರ್ಬಳಕೆ ಆಗುತ್ತಿದೆ. ಇದರ ವಿರುದ್ಧ ಸೈಬರ್‌ ಕ್ರೈಮ್‌ಗೆ ದೂರು ಕೊಡಬೇಕೆಂದು ಸದಸ್ಯರು ಸೂಚಿಸಿದರು.

ಉಪಾಧ್ಯಕ್ಷ ನವೀನ್‌ಕುಮಾರ್‌, ಕಾರ್ಯದರ್ಶಿ ರಾಮಾಂಜನೇಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.