ADVERTISEMENT

ಆತ್ಮಸ್ಥೈರ್ಯ ತುಂಬಲು ಸಲಹೆ- 2 ಸಾವಿರ ಕುಟುಂಬಗಳಿಗೆ ಆಹಾರ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಮೇ 2021, 5:30 IST
Last Updated 24 ಮೇ 2021, 5:30 IST
ಸಂಸದ ಡಿ.ಕೆ. ಸುರೇಶ್‌ ಹಾರೋಶಿವನಹಳ್ಳಿಯಲ್ಲಿ ಆಹಾರ ಕಿಟ್‌ ವಿತರಿಸಿದರು
ಸಂಸದ ಡಿ.ಕೆ. ಸುರೇಶ್‌ ಹಾರೋಶಿವನಹಳ್ಳಿಯಲ್ಲಿ ಆಹಾರ ಕಿಟ್‌ ವಿತರಿಸಿದರು   

ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಕೊಳಗೊಂಡನಹಳ್ಳಿ ಮತ್ತು ಉಯ್ಯಂಬಳ್ಳಿ ಹೋಬಳಿಯ ಹಾರೋಶಿವನಹಳ್ಳಿ ಗ್ರಾಮದಲ್ಲಿ ಕೋವಿಡ್‌ ಸಂಕಷ್ಟದಲ್ಲಿರುವ ಸುಮಾರು ಎರಡು ಸಾವಿರ ಕುಟುಂಬಗಳಿಗೆ ₹ 1 ಸಾವಿರ ಮೌಲ್ಯದ ರೇಷನ್‌ ಕಿಟ್‌ಗಳನ್ನು ದಾನಿಗಳ ಕುಟುಂಬ ಭಾನುವಾರ ಹಂಚಿಕೆ ಮಾಡಿತು.

ಕೊಳಗೊಂಡನಹಳ್ಳಿ ಮತ್ತು ಹಾರೋಶಿವನಹಳ್ಳಿಯಲ್ಲಿ ಹುಟ್ಟಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾಗಿ ವಿದೇಶದಲ್ಲಿ ದುಡಿಯುತ್ತಿರುವ ದಂಪತಿ ತಮ್ಮ ಹುಟ್ಟೂರಿನ ಜನಕ್ಕೆ ಕೊರೊನಾ ಸಂಕಷ್ಟದ ಸಮಯದಲ್ಲಿ ಏನಾದರೂ ಸಹಾಯ ಮಾಡಬೇಕೆಂಬ ಮಹದಾಸೆಯಿಂದ ಈ ಸೇವಾ ಕಾರ್ಯ ಮಾಡಿದ್ದಾರೆ.

ತಮಗೆ ಯಾವುದೇ ಪ್ರಚಾರ ಬೇಡ. ಜನಗಳ ಮೇಲಿನ ಪ್ರೀತಿಯಿಂದ ಸಣ್ಣ ಸೇವೆ ಮಾಡುತ್ತಿರುವುದಾಗಿ ರೇಷನ್‌ ಕಿಟ್‌ ಉಚಿತವಾಗಿ ವಿತರಣೆ ಮಾಡಿದ ದಂಪತಿ ತಿಳಿಸಿದರು.

ADVERTISEMENT

ಕೊರೊನಾ ಸೋಂಕು ಕಣ್ಣಿಗೆ ಕಾಣದಿದ್ದರೂ ಅದರ ಪರಿಣಾಮ ಮಾತ್ರ ಭೀಕರವಾಗಿದೆ. ಸೋಂಕಿಗೆ ಸಾಕಷ್ಟು ಜನ ಬಲಿಯಾಗಿದ್ದಾರೆ. ಲಕ್ಷಾಂತರ ಜನ ಸೋಂಕಿನಿಂದ ನಲುಗಿ ಹೋಗಿದ್ದಾರೆ. ಇದರಿಂದ ಆರ್ಥಿಕ ವ್ಯವಸ್ಥೆಯೇ ಬುಡಮೇಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಷ್ಟದಲ್ಲಿರುವ ಜನಕ್ಕೆ ಮಾಡುವ ಒಂದು ಸಣ್ಣ ಸಹಾಯವೂ ಅವರಿಗೆ ದೊಡ್ಡದಾಗಿರುತ್ತದೆ. ದಯಮಾಡಿ ಎಲ್ಲರೂ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ದಾನಿಗಳು ನೀಡಿದ ರೇಷನ್‌ ಕಿಟ್‌ ಅನ್ನು ಸಂಸದ ಡಿ.ಕೆ. ಸುರೇಶ್‌ ವಿತರಿಸಿದರು. ನಂತರ ಸೋಂಕಿನಿಂದ ಮೃತಪಟ್ಟಿದ್ದ ಚಂದ್ರಣ್ಣ ಮತ್ತು ಸದಾಶಿವಾ ಅವರ ಮನೆಗಳಿಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

‘ಸೋಂಕು ತಗುಲಿದಾಗ ಯಾರು ಧೈರ್ಯ ಕಳೆದುಕೊಳ್ಳಬಾರದು. ಸೋಂಕಿತರನ್ನು ಕೆಟ್ಟ ದೃಷ್ಟಿಯಿಂದ ನೋಡಬೇಡಿ. ನಿಮ್ಮ ಅಕ್ಕಪಕ್ಕದಲ್ಲಿ ಸೋಂಕಿತರಿದ್ದರೆ ಅವರಿಗೆ ಆತ್ಮಸ್ಥೈರ್ಯ ತುಂಬಬೇಕು’ ಎಂದು ಸಲಹೆ ನೀಡಿದರು.

‘ಯಾರೇ ಸಹಾಯ ಮಾಡಿದರೆ ಅದರಿಂದ ಏನು ಲಾಭ ಬರುತ್ತದೆ ಎಂದು ಬಯಸುತ್ತಾರೆ. ಆದರೆ, ಇಲ್ಲಿನ ಸಾಫ್ಟ್‌ವೇರ್‌ ದಂಪತಿ ತಮ್ಮ ಹುಟ್ಟೂರಿನ ಜನತೆಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತಿದ್ದಾರೆ. ಇದು ಬೇರೆಯವರಿಗೆ ಪ್ರೇರೇಪಣೆಯಾಗಬೇಕು’ ಎಂದು ಆಶಿಸಿದರು.

ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.