ADVERTISEMENT

ವೈದ್ಯರ ನಿರ್ಲಕ್ಷ್ಯ ಆರೋಪ: ಪ್ರತಿಭಟನೆ

ಆಂಬುಲೆನ್ಸ್ ಸಿಬ್ಬಂದಿ ವಿರುದ್ಧ ಕುಟುಂಬಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2022, 22:30 IST
Last Updated 23 ಡಿಸೆಂಬರ್ 2022, 22:30 IST
ಶವವನ್ನು ಶವಾಗಾರದಿಂದ ಜಿಲ್ಲಾಸ್ಪತ್ರೆ ಮುಂಭಾಗಕ್ಕೆ ತರುತ್ತಿರುವ ಸಂಬಂಧಿಕರು
ಶವವನ್ನು ಶವಾಗಾರದಿಂದ ಜಿಲ್ಲಾಸ್ಪತ್ರೆ ಮುಂಭಾಗಕ್ಕೆ ತರುತ್ತಿರುವ ಸಂಬಂಧಿಕರು   

ರಾಮನಗರ: ಅಪಘಾತದಿಂದ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ವೈದ್ಯರು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ರೋಗಿಯಕುಟುಂಬಸ್ಥರು ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಮಾಯಗಾನಹಳ್ಳಿ ಬಳಿ ಶುಕ್ರವಾರ ಕೇತೋಹಳ್ಳಿ ಗ್ರಾಮದ ರೇಣುಕಪ್ಪ (58) ಎಂಬುವರಿಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇಣುಕಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸುವ ಸಂಬಂಧ ಸ್ಥಳೀಯರು 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದರು. ಸ್ಥಳಕ್ಕೆ ಧಾವಿಸಿದ ಆಂಬುಲೆನ್ಸ್ ಸಿಬ್ಬಂದಿ, ವ್ಯಕ್ತಿ ಈಗಾಗಲೇ ಮೃತಪಟ್ಟಿದ್ದಾರೆ ಎನ್ನುವ ಕಾರಣಕ್ಕೆ ಆಸ್ಪತ್ರೆಗೆ ದಾಖಲು ಮಾಡದೆ ತೆರಳಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ನಂತರ ಕುಟುಂಬಸ್ಥರು ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ರೇಣುಕಪ್ಪನನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ನಂತರವೂ ಸುಮಾರು ಒಂದೂವರೆ ಗಂಟೆ ಅವರಿಗೆ ಚಿಕಿತ್ಸೆ ನೀಡದೆ ವೈದ್ಯರು ನಿರ್ಲಕ್ಷ್ಯ ತೋರಿಸಿದ್ದಾರೆ. ರೋಗಿ ಬದುಕಿದ್ದರೂ ಚಿಕಿತ್ಸೆ ನೀಡುತ್ತಿಲ್ಲ ಎಂದು ಸಂಬಂಧಿಕರು ದೂರಿದರು.

ADVERTISEMENT

ಜನರ ಕೂಗಾಟ ಹೆಚ್ಚಾದ ಬಳಿಕ ವೈದ್ಯರು ರೇಣುಕಪ್ಪ ಅವರನ್ನು ತಪಾಸಣೆಗೆ ಒಳಪಡಿಸಿದ್ದು, ಅವರು ಈಗಾಗಲೇ ಮೃತಪಟ್ಟಿರುವು
ದಾಗಿ ಘೋಷಿಸಿದರು. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆ ಸಿಬ್ಬಂದಿ ಶವಾಗಾರಕ್ಕೆ ಸಾಗಿಸಿದರು. ವೈದ್ಯರು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದ ಕಾರಣದಿಂದಲೇ ರೋಗಿ ಮೃತಪಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂಬಂಧಿಕರು, ಶವವನ್ನು ಜಿಲ್ಲಾಸ್ಪತ್ರೆ ಮುಂಭಾಗಕ್ಕೆ ತಂದು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬರಬೇಕು ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಪೊಲೀಸರು ಕುಟುಂಬದವನ್ನು ಮನವೊಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.