ADVERTISEMENT

ಅಂಬೇಡ್ಕರ್‌ ದಮನಿತರ ಧ್ವನಿ: ಬಿ.ವಿ. ಜಯರಾಮು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 3:41 IST
Last Updated 19 ಏಪ್ರಿಲ್ 2021, 3:41 IST
ಮಾಗಡಿ ತಾಲ್ಲೂಕಿನ ದೊಡ್ಡಮುದುಗೆರೆ ದಲಿತರ ಕಾಲೊನಿಯಲ್ಲಿ ನಡೆದ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿಯಲ್ಲಿ ಕಾಂಗ್ರೆಸ್‌ ಮುಖಂಡ ಬಿ.ವಿ. ಜಯರಾಮು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು
ಮಾಗಡಿ ತಾಲ್ಲೂಕಿನ ದೊಡ್ಡಮುದುಗೆರೆ ದಲಿತರ ಕಾಲೊನಿಯಲ್ಲಿ ನಡೆದ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿಯಲ್ಲಿ ಕಾಂಗ್ರೆಸ್‌ ಮುಖಂಡ ಬಿ.ವಿ. ಜಯರಾಮು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು   

ಮಾಗಡಿ: ‘ಅಂಬೇಡ್ಕರ್ ದಮನಿತ ವರ್ಗಗಳ ಸಬಲೀಕರಣದ ನೇತಾರ’ ಎಂದು ಕಾಂಗ್ರೆಸ್ ಮುಖಂಡ ಬಿ.ವಿ. ಜಯರಾಮು ಹೇಳಿದರು.

ತಾಲ್ಲೂಕಿನ ದೊಡ್ಡಮುದುಗೆರೆ ದಲಿತರ ಕಾಲೊನಿಯಲ್ಲಿ ಭಾನುವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.

ಸ್ವಾತಂತ್ರ್ಯಗಳಿಸಿ 70 ವರ್ಷ ಕಳೆದರೂ ಅಂಬೇಡ್ಕರ್ ಕಂಡ ದಮನಿತ ವರ್ಗಗಳ ಸಬಲೀಕರಣದ ಕನಸು ನನಸಾಗಲಿಲ್ಲ. ಶಿಕ್ಷಣ, ಸಂಘಟನೆ, ಹೋರಾಟಗಳೆಂಬ ಪ್ರಧಾನ ಚಿಂತನೆಗಳಿಗೆ ಮರುಜೀವ ಕೊಡುವ ಅಗತ್ಯವಿದೆ ಎಂದರು.

ADVERTISEMENT

ಪರಿಶಿಷ್ಟ ಜಾತಿಯ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ಗ್ರಾಮೀಣ ಭಾಗದ ದಲಿತರ ಕಾಲೊನಿಗಳನ್ನು ದತ್ತು ಸ್ವೀಕರಿಸಿ ಸವಲತ್ತು ಕಲ್ಪಿಸಬೇಕು ಎಂದು ಹೇಳಿದರು.

ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ‘ಕಾಲೊನಿಯಲ್ಲಿನ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲು ಕೊಳವೆಬಾವಿ ಕೊರೆಸಿಕೊಡುತ್ತೇನೆ. ಮಾನವತಾವಾದಿ ಅಂಬೇಡ್ಕರ್ ಆದರ್ಶಗಳನ್ನು ಜನಮಾನಸದಲ್ಲಿ ಬಿತ್ತಿ ಬೆಳೆಸುವ ಅಗತ್ಯವಿದೆ. ಸರ್ಕಾರ ಕೊಡಮಾಡಿರುವ ಸವಲತ್ತುಗಳನ್ನು ಬಳಸಿಕೊಂಡು ವಿದ್ಯಾವಂತರಾಗಬೇಕು’ ಎಂದರು.

ದಲಿತ ಹಕ್ಕುಗಳ ಸಮಿತಿ ಕರ್ನಾಟಕ ರಾಜ್ಯ ಸಂಚಾಲಕಿ ಎಸ್.ಜಿ. ವನಜಾ, ಚಿಕ್ಕಮುದುಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿಕುಮಾರ್, ಜಿ.ಪಂ ಮಾಜಿ ಸದಸ್ಯ ಎಂ.ಕೆ. ಧನಂಜಯ, ಜುಟ್ಟನಹಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಚಂದ್ರೇಗೌಡ, ತಾ.ಪಂ ಸದಸ್ಯ ಕೆ.ಎಚ್. ಶಿವರಾಜ್ ಅಂಬೇಡ್ಕರ್ ಮಾತನಾಡಿದರು.

ಅಂಬೇಡ್ಕರ್ ಗ್ರಾಮೀಣ ಅಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಕೆಂಚರಂಗಯ್ಯ, ಮುಖಂಡರಾದ ನಿಜಲಿಂಗಯ್ಯ ಹಾಗೂ ಕಾಲೊನಿ ನಿವಾಸಿಗಳು ಇದ್ದರು. ದ್ವಿತೀಯ ಪಿಯುಸಿ ಮತ್ತು ‍ಪದವಿ ತರಗತಿಗಳಲ್ಲಿ ಶೇ 86ಕ್ಕಿಂತ ಅಧಿಕ ಅಂಕಗಳಿಸಿರುವ ಸುದರ್ಶನ್, ಭರತ್, ಗೀತಾ, ದೀಪಿಕಾ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.