ADVERTISEMENT

ಅಂಬೇಡ್ಕರ್ ನವ ಭಾರತದ ಹರಿಕಾರ: ಸಾಹಿತಿ ವಿಜಯ್ ರಾಂಪುರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 4:54 IST
Last Updated 16 ಏಪ್ರಿಲ್ 2022, 4:54 IST
ಚನ್ನಪಟ್ಟಣದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಸಾಹಿತಿ ವಿಜಯ್ ರಾಂಪುರ ಪುಷ್ಪನಮನ ಸಲ್ಲಿಸಿದರು. ಚನ್ನಾಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪೂರ್ಣಿಮಾ ನಿಂಗೇಗೌಡ, ಉಪನ್ಯಾಸಕರು ಇದ್ದರು
ಚನ್ನಪಟ್ಟಣದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಸಾಹಿತಿ ವಿಜಯ್ ರಾಂಪುರ ಪುಷ್ಪನಮನ ಸಲ್ಲಿಸಿದರು. ಚನ್ನಾಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪೂರ್ಣಿಮಾ ನಿಂಗೇಗೌಡ, ಉಪನ್ಯಾಸಕರು ಇದ್ದರು   

ಚನ್ನಪಟ್ಟಣ:‘ನವ ಭಾರತ ನಿರ್ಮಾತೃ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಸಮಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿವೆ’ ಎಂದು ಸಾಹಿತಿ ವಿಜಯ್ ರಾಂಪುರ ಅಭಿಪ್ರಾಯಪಟ್ಟರು.

ನಗರದ ಚನ್ನಾಂಬಿಕ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

‘ಭಾರತದಲ್ಲಿದ್ದ ಅಸಮಾನತೆಯ ಕ್ಷೋಭೆಯನ್ನು ತೊಡೆದು ಹಾಕಲು ದುಡಿದ ಮಹನೀಯ. ದೇಶದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅವ್ಯವಸ್ಥೆಯನ್ನು ಸರಿಪಡಿಸಲು ತಮ್ಮ ಬದುಕನ್ನೇ ಪಣವಾಗಿಟ್ಟು ಹೋರಾಡಿದ ಮಹಾನುಭಾವ’ ಎಂದು ಹೇಳಿದರು.

ADVERTISEMENT

ಸ್ತ್ರೀ ಸಬಲೀಕರಣ, ತಾರತಮ್ಯ ನೀತಿ, ವರ್ಣಾಶ್ರಮ ವ್ಯವಸ್ಥೆ ವಿರುದ್ಧ ಸಮರೋಪಾದಿಯಲ್ಲಿ ಸಂಘರ್ಷ ನಡೆಸಿ ಯಶಸ್ವಿಯಾದವರು. ಅವರ ದಿಟ್ಟಹೆಜ್ಜೆ ದೇಶದ ಜನರಲ್ಲಿ ಕ್ರಾಂತಿಕಾರಕ ಆಲೋಚನೆಗಳನ್ನು ಹುಟ್ಟು ಹಾಕಿತು. ಅವರ ಬದುಕು-ಬರಹ ಇಂದಿನ ಯುವಜನಾಂಗಕ್ಕೆ ಮಾದರಿಯಾಗಿದೆ’ ಎಂದರು.

ಅಧ್ಯಕ್ಷತೆವಹಿಸಿದ್ದ ಚನ್ನಾಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪೂರ್ಣಿಮಾ ನಿಂಗೇಗೌಡ ಮಾತನಾಡಿ, ವಿಶ್ವದಾದ್ಯಂತ ಕೀರ್ತಿ ಗಳಿಸಿರುವ ಭಾರತ ರತ್ನ ಅಂಬೇಡ್ಕರ್ ಅವರು ವಿಶ್ವ ಕಂಡ ಮಹಾನ್ ಮಾನವತಾವಾದಿ. ಅವರ ಆಳವಾದ ಅಧ್ಯಯನ ಮತ್ತು ಸಂಶೋಧನೆಗಳು ಭಾರತದ ಮುನ್ನಡೆಗೆ ಹೊಸ ಆಯಾಮಗಳನ್ನು ತಂದುಕೊಟ್ಟಿತು. ಅವರ ಜ್ಞಾನ, ಶಿಸ್ತು, ಶ್ರದ್ಧೆ, ಹೋರಾಟದ ಮನೋಭಾವದಂತಹ ಗುಣಗಳು ವಿದ್ಯಾರ್ಥಿಗಳಿಗೆ ಮಾದರಿ ಎಂದರು.

ಉಪ ಪ್ರಾಂಶುಪಾಲ ಎಚ್.ಕೆ. ದಿನೇಶ್, ಉಪನ್ಯಾಸಕರಾದ ವಸಂತ, ಕೆ.ಎಸ್. ಕೃಷ್ಣಯ್ಯ, ಸ್ವಾಮಿ, ಬಾಬು, ಸಿಬ್ಬಂದಿ ರಮೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.