ರಾಮನಗರ: ಇಲ್ಲಿನ ವಿಜಯನಗರದಲ್ಲಿ ಮಹಿಳೆಯೊಬ್ಬರ ಮೇಲೆ ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಕಿರಣ್ ಸಾಗರ್ ಹಲ್ಲೆ ನಡೆಸಿದ್ದು, ಕೃತ್ಯದ ವಿಡಿಯೊ ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆ ಕುರಿತು ಮಹಿಳೆ ನೀಡಿದ ದೂರಿನ ಮೇರೆಗೆ ಕಿರಣ್ ಸಾಗರ್, ಆತನ ತಾಯಿ ಹೇಮಾವತಿ ಹಾಗೂ ಸಹೋದರಿ ಪ್ರಿಯಾಂಕ ವಿರುದ್ಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾದೇವಮ್ಮ ಮತ್ತು ಅವರ ಪುತ್ರ ಅಭಿಷೇಕ್ ಹಲ್ಲೆಗೊಳಗಾದವರು. ತಮ್ಮ ಮನೆಯ ಮೇಲ್ಭಾಗದಲ್ಲಿ ಮತ್ತೊಂದು ಅಂತಸ್ತು ನಿರ್ಮಾಣಕ್ಕಾಗಿ ಮಹಾದೇವಮ್ಮ ಅವರು ಏ. 11ರಂದು ಲಾರಿಯಲ್ಲಿ ಜಲ್ಲಿ ತರಿಸಿದ್ದರು. ಮನೆಯವರು ಇಲ್ಲದಿದ್ದಾಗ ಬಂದಿದ್ದ ಲಾರಿ ಚಾಲಕ, ಮನೆ ಎದುರಿನ ರಸ್ತೆಗೆ ಬೆಳಿಗ್ಗೆ ಜಲ್ಲಿ ಸುರಿದು ಹೋಗಿದ್ದ.
ರಸ್ತೆಗೆ ಅಡ್ಡವಾಗಿ ಜಲ್ಲಿ ಸುರಿದಿದ್ದಕ್ಕಾಗಿ ಮಹಾದೇವಮ್ಮ ಅವರಿಗೆ ಅದೇ ರಸ್ತೆಯ ನಿವಾಸಿಯಾದ ಕಿರಣ್ ಸಾಗರ್ ಅವಾಚ್ಯವಾಗಿ ನಿಂದಿಸಿದ್ದ. ಆಗ ಮಹಾದೇವಮ್ಮ ಅವರು ಜಲ್ಲಿಯನ್ನು ರಸ್ತೆ ಬದಿಗೆ ರಾಶಿ ಮಾಡಲು ಕೆಲಸಗಾರರಿಗೆ ಸೂಚಿಸಿದ್ದರು. ಈ ವೇಳೆ ಮತ್ತೆ ಕಿರಣ್ ಮತ್ತು ಮಹಾದೇವಮ್ಮ ನಡುವೆ ಶುರುವಾದ ಮಾತಿನ ಚಕಮಕಿ ವಿಕೋಪಕ್ಕ ತಿರುಗಿದೆ ಎಂದು ಪೊಲೀಸರು ತಿಳಿಸಿದರು.
ಈ ವೇಳೆ ಕಿರಣ್ ಮಹಾದೇವಮ್ಮ ಅವರ ಕೆನ್ನೆ ಮತ್ತು ತಲೆಗೆ ಹೊಡೆದಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಕಿರಣ್ ತಾಯಿ ಮತ್ತು ಸಹೋದರಿ ಸಹ ಹಲ್ಲೆ ನಡೆಸಿದ್ದಾರೆ. ತಾಯಿಯನ್ನು ಬಿಡಿಸಿಕೊಳ್ಳಲು ಬಂದ ಮಹಾದೇವಮ್ಮ ಪುತ್ರ ಅಭಿಷೇಕ್‌ಗೂ ಹೊಡೆದು, ಕೊಲೆ ಬೆದರಿಕೆ ಹಾಕಿದ್ದಾರೆ. ಘಟನೆ ವೇಳೆ ತನ್ನ 35 ಗ್ರಾಂ ಚಿನ್ನದ ಸರ ಕಳೆದುಕೊಂಡಿದ್ದೇನೆ ಎಂದು ಮಹಾದೇವಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ಬಳಿಕ ಕಿರಣ್ ಸಾಗರ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.