ADVERTISEMENT

ಅಂಬಿಗರ ಚೌಡಯ್ಯ ಆದರ್ಶ ಸಕಾಲಿಕ: ಬಸವಾನಂದ ಸ್ವಾಮೀಜಿ

ಮುನಿಯಪ್ಪನದೊಡ್ಡಿ ಗ್ರಾಮದಲ್ಲಿ ಜಯಂತ್ಯುತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 12:57 IST
Last Updated 31 ಜನವರಿ 2020, 12:57 IST
ಚನ್ನಪಟ್ಟಣ ತಾಲ್ಲೂಕಿನ ಮುನಿಯಪ್ಪನದೊಡ್ಡಿ ಗ್ರಾಮದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತೋತ್ಸವವನ್ನು ಬಸವಾನಂದಸ್ವಾಮೀಜಿ ಉದ್ಘಾಟಿಸಿದರು
ಚನ್ನಪಟ್ಟಣ ತಾಲ್ಲೂಕಿನ ಮುನಿಯಪ್ಪನದೊಡ್ಡಿ ಗ್ರಾಮದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತೋತ್ಸವವನ್ನು ಬಸವಾನಂದಸ್ವಾಮೀಜಿ ಉದ್ಘಾಟಿಸಿದರು   

ಚನ್ನಪಟ್ಟಣ: ಕಾಲಜ್ಞಾನಿ ನಿಜ ಶರಣ ಅಂಬಿಗರ ಚೌಡಯ್ಯ ಅವರ ಆದರ್ಶ, ತತ್ವಗಳು ಇಂದಿಗೂ ಪ್ರಸ್ತುತ ಎಂದು ಮಳವಳ್ಳಿ ರಾಮರೂಢ ಮಠದ ಸ್ವಾಮಿ ಬಸವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮುನಿಯಪ್ಪನದೊಡ್ಡಿ ಗ್ರಾಮದಲ್ಲಿನ ಶ್ರೀ ಕೊತ್ತನಹಳ್ಳಿ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಬೆಸ್ತರ ಸಂಘ ಹಾಗೂ 39 ಉಪಜಾತಿಗಳ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಬೇರೂರಿದ್ದ ಜಾತಿವ್ಯವಸ್ಥೆಯ ವಿರುದ್ಧ ಹೋರಾಡಿದ ಬಸವಣ್ಣನವರ ಸಮಕಾಲೀನರಾದ ಅಂಬಿಗರ ಚೌಡಯ್ಯ ಅವರು ಬಸವಣ್ಣರಂತೆಯೆ ಹೋರಾಟ ನಡೆಸಿದವರು. ಅಂತಹ ವ್ಯಕ್ತಿಯ ಆದರ್ಶಗಳನ್ನು ಸಮುದಾಯದ ಜನ ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯ ಗಂಗಮತಸ್ಥರ ಸಂಘದ ಅಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, ಅಂಬಿಗರ ಚೌಡಯ್ಯ ಅವರು ತಮ್ಮ ಜೀವಿತದ ಅವಧಿಯಲ್ಲಿ ಸಮಾಜ ಹಾಗೂ ಸಮುದಾಯದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅವರ ವಚನಗಳ ಆದರ್ಶಗಳು ಇಂದಿಗೂ ಪ್ರಸ್ತುತ ಎಂದರು.

ಸಮುದಾಯದ ಮುಖಮಡ ಡಾ.ಭಗತ್ ರಾಮ್ ಮಾತನಾಡಿ, ಸಮುದಾಯವು ಸಂಘಟಿತತವಾಗಬೇಕು. ಕುಲಕಸುಬಿನ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಪಡೆಯಲು ಮುಂದಾಗಬೇಕು ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರ್, ಸಮುದಾಯದ ಅಧ್ಯಕ್ಷ ರಾಜಣ್ಣ, ಶಿಕ್ಷಕ ರಾಮು, ಮುಖಂಡರಾದ ತಾರಕೇಶ್, ದೊಡ್ಡಯ್ಯ, ಮಲ್ಲಯ್ಯ, ಚಿಕ್ಕಯ್ಯ, ಕೆ.ಇ.ಬಿ. ಈಶ್ವರ್, ನೇತ್ರಾವತಿ, ಟಿ.ಮಲ್ಲಯ್ಯ, ಸಿದ್ದಲಿಂಗಯ್ಯ, ಬೋರಪ್ಪ, ರೇವಣ್ಣ, ಚೌಡಪ್ಪ ಹಾಜರಿದ್ದರು.

ಪಟ್ಟಣದ ಕೊಲ್ಲಾಪುರದಮ್ಮ ದೇವಾಲಯದಿಂದ ಬೆಳ್ಳಿ ರಥದಲ್ಲಿ ಅಂಬಿಗರ ಚೌಡಯ್ಯ ಅವರ ಭಾವಚಿತ್ರವನ್ನು ಇಟ್ಟು ವಿವಿಧ ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆಯಲ್ಲಿ ಗ್ರಾಮದವರೆಗೆ ತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.