ADVERTISEMENT

2 ತಿಂಗಳಿಂದ ಬಂದಿಲ್ಲ ಅನ್ನಭಾಗ್ಯ ಹಣ

ಚುನಾವಣೆ ನೆಪ: ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ ವಿಳಂಬ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 5:16 IST
Last Updated 22 ಮಾರ್ಚ್ 2024, 5:16 IST
<div class="paragraphs"><p>‘</p></div>

   

ರಾಮನಗರ: ‘ಅನ್ನಭಾಗ್ಯ’ ಗ್ಯಾರಂಟಿ ಯೋಜನೆಯಡಿ ರಾಜ್ಯ ಸರ್ಕಾರವು ಫಲಾನುಭವಿಗಳಿಗೆ ನೀಡುವ ಹೆಚ್ಚುವರಿ 5 ಕೆ.ಜಿ ಅಕ್ಕಿ ಮೊತ್ತವು ಕಳೆದ ಎರಡು ತಿಂಗಳಿಂದ ಪಾವತಿಯಾಗಿಲ್ಲ. ಇತ್ತ ಹೆಚ್ಚುವರಿ ಅಕ್ಕಿಯೂ ಸಿಗದೆ, ಅತ್ತ ಹಣವೂ ಸಿಗದಿರುವುದರಿಂದ ಫಲಾನುಭವಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಪ್ರತಿ ತಿಂಗಳು 15ನೇ ತಾರೀಖಿನೊಳಗೆ ಅನ್ನಭಾಗ್ಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪ್ರತಿ ಕೆ.ಜಿ.ಗೆ ₹34ರಂತೆ ಒಟ್ಟು ₹170 ಮೊತ್ತವನ್ನು ಡಿಬಿಟಿ (ನೇರ ನಗದು ವರ್ಗಾವಣೆ) ಮಾಡಲಾಗುತ್ತದೆ. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದರಿಂದ, ಫೆಬ್ರುವರಿ ಮತ್ತು ಮಾರ್ಚ್ ತಿಂಗಳ ಹಣ ಬಿಡುಗಡೆ ವಿಳಂಬವಾಗಿದೆ.

ADVERTISEMENT

ಸದ್ಯದಲ್ಲೇ ಬರಲಿದೆ: ‘ಡಿಬಿಟಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ (ಎನ್ಐಸಿ) ಪ್ರತಿ ತಿಂಗಳು ಫಲಾನುಭವಿಗಳ ಮಾಹಿತಿ ಬರುತ್ತದೆ. ಅಲ್ಲಿಂದ ಬಂದ ತಕ್ಷಣ ನಾವು ಡಿಬಿಟಿಗೆ ಚಾಲನೆ ನೀಡುತ್ತೇವೆ’ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಜಿಲ್ಲಾ ಉಪ ನಿರ್ದೇಶಕಿ ರಮ್ಯ ಸಿ.ಆರ್. ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾಹಿತಿ ರವಾನೆಗೆ ಸಂಬಂಧಿಸಿದ ಆನ್‌ಲೈನ್‌ ವ್ಯವಸ್ಥೆಯಲ್ಲಿ ವ್ಯತ್ಯಯವಾಗಿರುವುದರಿಂದ ಮಾಹಿತಿ ಬರುವುದು ತಡವಾಗಿದೆ. ವಿಳಂಬ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಎರಡ್ಮೂರು ದಿನದೊಳಗೆ ಮಾಹಿತಿ ಬರಲಿದೆ. ನಂತರ, ಫಲಾನುಭವಿಗಳ ಖಾತೆಗೆ ಹಣ ಪಾವತಿಯಾಗಲಿದೆ’ ಎಂದು ಹೇಳಿದರು.

ಕನಕಪುರದಲ್ಲೇ ಹೆಚ್ಚು: ಯೋಜನೆಗೆ ಕನಕಪುರದಲ್ಲೇ ಹೆಚ್ಚು ಅರ್ಹ ಫಲಾನುಭವಿಗಳಿದ್ದಾರೆ. ಇಲ್ಲಿ 92,853 ಫಲಾನುಭವಿಗಳಿದ್ದರೆ, ರಾಮನಗರದಲ್ಲಿ 66,354, ಚನ್ನಪಟ್ಟಣದಲ್ಲಿ 65,813 ಹಾಗೂ ಮಾಗಡಿಯಲ್ಲಿ 52,631 ಫಲಾನುಭವಿಗಳಿದ್ದಾರೆ. ಇದುವರೆಗೆ ಶೇ 96.09ರಷ್ಟು ಹಣ ಪಾವತಿಯಾಗಿದ್ದು, ಶೇ 3.91ರಷ್ಟು ಬಾಕಿ ಇದೆ.

ರಾಜ್ಯ ಸರ್ಕಾರ ಕಳೆದ ಜುಲೈ 9ರಂದು ಪ್ರತಿ ಕೆ.ಜಿ ಅಕ್ಕಿಗೆ ₹34ರಂತೆ ಫಲಾನುಭವಿ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆಗೆ ಚಾಲನೆ ನೀಡಿತ್ತು. ‘ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ ಕುಟುಂಬಗಳ (ಬಿಪಿಎಲ್) ಪಡಿತರ ಚೀಟಿದಾರರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣವು ವರ್ಗಾವಣೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.