ADVERTISEMENT

ರಾಮನಗರ | ಭ್ರಷ್ಟಾಚಾರ ತಡೆ ಎಲ್ಲರ ಕರ್ತವ್ಯ: ಬಿ.ವಿ. ರೇಣುಕಾ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 2:56 IST
Last Updated 31 ಅಕ್ಟೋಬರ್ 2025, 2:56 IST
<div class="paragraphs"><p>ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-2025 ಕಾರ್ಯಕ್ರಮವನ್ನು&nbsp;ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ವಿ. ರೇಣುಕಾ ಉದ್ಘಾಟಿಸಿದರು. </p></div>

ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-2025 ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ವಿ. ರೇಣುಕಾ ಉದ್ಘಾಟಿಸಿದರು.

   

ರಾಮನಗರ: ‘ಭ್ರಷ್ಟಾಚಾರ ತಡೆಯುವುದು ಎಲ್ಲರ ಕರ್ತವ್ಯ. ಜನರು ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಪ್ರದರ್ಶಿಸಿದಾಗ ಮಾತ್ರ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಸಾಧ್ಯ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ವಿ. ರೇಣುಕಾ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಲೋಕಾಯುಕ್ತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಗುರುವಾರ ಆಯೋಜಿಸಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಭ್ರಷ್ಟಚಾರದ ವಿರುದ್ಧ ಜನರು ಹೋರಾಡಲು ಈ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ADVERTISEMENT

ಸರ್ಕಾರಿ ಕಚೇರಿಗಳಲ್ಲಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಹಾಗೂ ಅನ್ಯಾಯದ ಚಟುವಟಿಕೆಗಳನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದು ಹಾಗೂ ಹೋರಾಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ಈ ವಿಷಯದಲ್ಲಿ ಎಲ್ಲರೂ ತಮ್ಮ ಜವಾಬ್ದಾರಿ ಮೆರೆಯಬೇಕು ಎಂದರು.

‘ಭ್ರಷ್ಟಾಚಾರದ ಕಾರಣದಿಂದಾಗಿ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಕಡಿಮೆಯಾಗುತ್ತದೆ. ಅದು ಸಾರ್ವಜನಿಕ ಯೋಜನೆಗಳ ಬಲಹೀನತೆ ಹಾಗೂ ಆರ್ಥಿಕ ಕುಸಿತಕ್ಕೆ ಕಾರಣವಾಗಬಹುದು. ಇದರಿಂದ‌ ಜನಸಾಮಾನ್ಯರ ಹಕ್ಕುಗಳಿಗೆ ಹಾನಿಯಾಗುತ್ತದೆ. ಆದ್ದರಿಂದ ಎಲ್ಲರೂ ಒಕ್ಕೊರಲಿನಿಂದ ಭ್ರಷ್ಟಾಚಾರವನ್ನು ತಿರಸ್ಕರಿಸಿ, ನಿಷ್ಠೆಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಲೋಕಾಯುಕ್ತ ಸಂಸ್ಥೆಯೊಂದಿಗೆ ಸಾರ್ವಜನಿಕರು ಸಹ ಸಾಮೂಹಿಕವಾಗಿ ಹೋರಾಟಕ್ಕಿಳಿದಲ್ಲಿ ಮಾತ್ರ ಬದಲಾವಣೆ ಸಾಧ್ಯ. ಲಂಚ ತೆಗೆದುಕೊಳ್ಳುವುದಾಗಲಿ, ಕೊಡುವುದಾಗಲಿ ಮಾಡಬಾರದು. ಯುವಜನರು ಈ ದೇಶದ ಭವಿಷ್ಯ. ಅವರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ಈಗಿನಿಂದಲೇ ಭ್ರಷ್ಟಾಚಾರದ ವಿರುದ್ಧ ಅರಿವು ಮೂಡಿಸಬೇಕು’ ಎಂದ ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ ಪಿ.ಆರ್ ಭ್ರಷ್ಟಾಚಾರದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ವಿಶೇಷ ಸರ್ಕಾರಿ ಅಭಿಯೋಜಕ ಬಿ.ಸಿ. ವೆಂಕಟೇಶ್ ಉಪನ್ಯಾಸ ನೀಡಿದರು. ಜಿ.ಪಂ. ಉಪ ಕಾರ್ಯದರ್ಶಿ ಧನರಾಜ್, ಸಹಾಯಕ ಕಾರ್ಯದರ್ಶಿ ಶಿವಕುಮಾರ್, ರಾಮನಗರ ಡಿವೈಎಸ್ಪಿ ಬಿ.ಎನ್. ಶ್ರೀನಿವಾಸ್ ಇದ್ದರು.

ಲೋಕಾಯುಕ್ತ ಡಿವೈಎಸ್‌ಪಿ ಶಿವಪ್ರಸಾದ್ ಸ್ವಾಗತಿಸಿದರು. ಮತ್ತೊಬ್ಬ ಡಿವೈಎಸ್‌ಪಿ ಕೆ. ರಾಜೇಶ್ ನಿರೂಪಣೆ ಮಾಡಿದರು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಾನೂನು ವಿದ್ಯಾರ್ಥಿಗಳು ಇದ್ದರು.

ಪ್ರಾಮಾಣಿಕತೆ ಬೆಳೆಸಿಕೊಳ್ಳಲ ಸಲಹೆ

‘ಭ್ರಷ್ಟಾಚಾರ ತಡೆಗಟ್ಟಬೇಕಾದರೆ ಜನರು ಪ್ರಾಮಾಣಿಕತೆ ಮತ್ತು ಪಾರದರ್ಶಕ ಮನೋಭಾವನೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಭ್ರಷ್ಟಾಚಾರ ಮುಕ್ತ ಸಮಾಜದ ನಿರ್ಮಾಣ ಸಾಧ್ಯ. ಲಂಚಗುಳಿತನ ತಡೆಯುವುದಕ್ಕಾಗಿ ಇರುವ ಲೋಕಾಯುಕ್ತ ಸಂಸ್ಥೆಗೆ ಜನರು ಸಾಥ್ ಕೊಟ್ಟಾಗ ಮಾತ್ರ ಅದಕ್ಕೆ ಕಡಿವಾಣ ಹಾಕಲು ಸಾಧ್ಯ. ಇದು ಒಬ್ಬರಿಂದ ಆಗುವ ಕೆಲಸವಲ್ಲ. ಮುಂದಿನ ಪೀಳಿಗೆಗೆ ಭ್ರಷ್ಟಾಚಾರವಿಲ್ಲದ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು’ ಪ್ರಾಸ್ತಾವಿಕ ಮಾತುಗಳನ್ನಾಡಿದ ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಪಿ.ವಿ. ಸ್ನೇಹ ಹೇಳಿದರು.