ADVERTISEMENT

ರೈತ ವಿರೋಧಿ ನೀತಿ ಸಲ್ಲದು: ನಲ್ಲಹಳ್ಳಿ ಶ್ರೀನಿವಾಸ್

ರೈತ ಸಂಘ–ಹಸಿರು ಸೇನೆಯಿಂದ ರೈತ ಹುತಾತ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 2:02 IST
Last Updated 23 ಜುಲೈ 2025, 2:02 IST
ರಾಮನಗರದ ಎಪಿಎಂಸಿಯಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ  46ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಮುಖಂಡರು ಹುತಾತ್ಮರಿಗೆ ಗೌರವ ಸಲ್ಲಿಸಿದರು
ರಾಮನಗರದ ಎಪಿಎಂಸಿಯಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ  46ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಮುಖಂಡರು ಹುತಾತ್ಮರಿಗೆ ಗೌರವ ಸಲ್ಲಿಸಿದರು   

ರಾಮನಗರ: ‘ಆಳುವ ಸರ್ಕಾರಗಳು ಇತ್ತೀಚೆಗೆ ರೈತ ವಿರೋಧಿ ನೀತಿಗೆ ಹೆಚ್ಚು ಒತ್ತು ನೀಡುತ್ತಿವೆ. ಇದೇ ಕಾರಣಕ್ಕೆ ಕೃಷಿ ಕ್ಷೇತ್ರವು ಬಡವಾಗುತ್ತಿದೆ. ಕೃಷಿಯು ಈ ದೇಶದ ಬೆನ್ನೆಲುಬು ಎಂಬುದನ್ನು ಸರ್ಕಾರ ಮರೆತಿದೆ. ರೈತ ಉಳುಮೆ ಮಾಡಿದರಷ್ಟೇ ತಿನ್ನಲು ಆಹಾರ ಸಿಗುತ್ತದೆಯೇ ಹೊರತು, ಯಾವುದೊ ಸಾಫ್ಟ್‌ವೇರ್‌ನಿಂದ ಆಹಾರ ಉತ್ಪಾದಿಸಲು ಆಗದು’ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನಲ್ಲಹಳ್ಳಿ ಶ್ರೀನಿವಾಸ್ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಎಪಿಎಂಸಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 46ನೇ ರೈತ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ನಗರೀಕರಣ, ಬೆಲೆ ಕುಸಿತ, ಸರ್ಕಾರಿ ಕಚೇರಿಗಳಲ್ಲಿ ಮಿತಿ ಮೀರಿದ ಭ್ರಷ್ಟಾಚಾರ, ಅಭಿವೃದ್ಧಿ ಹೆಸರಿನಲ್ಲಿ ಫಲವತ್ತಾದ ಭೂಮಿ ಸ್ವಾಧೀನವು ರೈತರು ಮತ್ತು ಕೃಷಿ ಕ್ಷೇತ್ರವನ್ನು ಬಿಕ್ಕಟ್ಟಿಗೆ ಸಿಲುಕಿಸಿವೆ’ ಎಂದರು.

‘ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಹುಟ್ಟುವ ಮಲಪ್ರಭಾ ನದಿಯ ಅಣೆಕಟ್ಟೆಯ ಜಲಾನಯನ ಪ್ರದೇಶಗಳಿಗೆ ನೀರುಣಿಸುವ ನೀರಾವರಿ ಯೋಜನೆಯನ್ನು ಸರ್ಕಾರ 1960ರಲ್ಲಿ ಘೋಷಿಸಿ ಶಂಕುಸ್ಥಾಪನೆ ಮಾಡಿತ್ತು. ಆದರೆ ಕಾಮಗಾರಿ ನಿಗದಿ ಅವಧಿಯಲ್ಲಿ ಮುಗಿಯಲಿಲ್ಲ. ಇದರ ಬೆನ್ನಲ್ಲೇ ಸರ್ಕಾರ ತೆರಿಗೆಯ ಬರೆ ಹಾಕಿತ್ತು. ಈ ವಿಷಯವನ್ನು ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಗಮನಕ್ಕೆ ತಂದರೂ ನಿರ್ಲಕ್ಷಿಸಿದರು’ ಎಂದು ತಿಳಿಸಿದರು.

ADVERTISEMENT

‘ರೈತರು ಸಮಿತಿ ರಚಿಸಿಕೊಂಡು ನಿರಂತರವಾಗಿ ಸತ್ಯಾಗ್ರಹ, ಅರೆಬೆತ್ತಲೆ ಮೆರವಣಿಗೆ, ಬಾರುಕೋಲು ಚಳುವಳಿ, ಇಡೀ ದಿನ ಒಂಟಿ ಕಾಲಿನ ಚಳುವಳಿ ಹೀಗೆ ಅನೇಕ ಹೋರಾಟಗಳನ್ನು ಮಾಡಿದರು. ಸರ್ಕಾರವು ರೈತರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ಆಗ ರೈತರು, 1980 ಜುಲೈ 21ರಂದು ಏಕಕಾಲಕ್ಕೆ ನರಗುಂದ, ಸವದತ್ತಿ, ರಾಯದುರ್ಗದ ತಹಶೀಲ್ದಾರ್ ಕಚೇರಿ ಸೇರಿದಂತೆ ಇತರ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು’ ಎಂದು ಹೇಳಿದರು.

‘ಈ ವೇಳೆ ನಡೆದ ಗಲಾಟೆಯಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ರೈತರು ಬಲಿಯಾದರು. ಅವರ ಸ್ಮರಣಾರ್ಥ ರಾಜ್ಯದಾದ್ಯಂತ ರೈತ ಸಂಘವು ಹುತಾತ್ಮ ರೈತ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡು ರೈತರ ಸಮಸ್ಯೆಗಳ ಕುರಿತು 46 ವರ್ಷಗಳಿಂದ ಚರ್ಚಿಸುತ್ತಾ ಬರುತ್ತಿದೆ. ಕಾರ್ಯಕರ್ತರು ರೈತ ಹೋರಾಟದ ಹಿನ್ನೆಲೆಗಳನ್ನು ಅರಿತುಕೊಂಡಾಗ ಮಾತ್ರ ಸಂಘ ಬಲಿಷ್ಠವಾಗಲು ಸಾಧ್ಯ’ ಎಂದು ತಿಳಿಸಿದರು.

ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಮಾತನಾಡಿ, ‘ ಹೆಚ್ಚುತ್ತಿರುವ ನಗರೀಕರಣ, ರಿಯಲ್ ಎಸ್ಟೇಟ್‌ ಹಾಗೂ ಭೂಗಳ್ಳರ ಕಾಟದಿಂದಾಗಿ ರೈತರು ತಮ್ಮ ಬೆಲೆಬಾಳುವ ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ. ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ರೈತನನ್ನೇ ರಾಜಕಾರಣದ ವಸ್ತುವಾಗಿ ಬಳಸಿಕೊಳ್ಳುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕೊಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘದ ಪದಾಧಿಕಾರಿಗಳಾದ ರಮೇಶ್ ಶಿವರಾಜು, ರಾಜೇಗೌಡ, ಗಂಗಣ್ಣ, ದುಂಡಪ್ಪ, ದೇವರಾಜು, ತಿಮ್ಮೇಗೌಡ, ಗೌರಮ್ಮ, ಶೋಭಾ, ತಾರಾ, ಸುನೀತಾ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.