ADVERTISEMENT

ಕನಕಪುರ: ಅಸ್ಪೃಶ್ಯತೆ ವಿರುದ್ಧ ಜನ ಜಾಗೃತಿ ನಾಟಕ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 5:05 IST
Last Updated 23 ಜನವರಿ 2026, 5:05 IST
ಕನಕಪುರ ಏಳಗಳ್ಳಿಯಲ್ಲಿ ಅಸ್ಪೃಶ್ಯತಾ ನಿವಾರಣೆ ಕಾರ್ಯಕ್ರಮದಲ್ಲಿ ಕಲಾ ತಂಡ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿತು
ಕನಕಪುರ ಏಳಗಳ್ಳಿಯಲ್ಲಿ ಅಸ್ಪೃಶ್ಯತಾ ನಿವಾರಣೆ ಕಾರ್ಯಕ್ರಮದಲ್ಲಿ ಕಲಾ ತಂಡ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿತು   

ಕನಕಪುರ: ತಾಲ್ಲೂಕಿನ ಏಳಗಳ್ಳಿ ಮತ್ತು ಸೋಮೆದ್ಯಾಪನಹಳ್ಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಸ್ಪೃಶ್ಯತಾ ನಿವಾರಣ ಕಾರ್ಯಕ್ರಮ ಬುಧವಾರ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಟ್ರಸ್ಟ್‌ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಜಾತಿ ಮತ್ತು ಅಸ್ಪೃಶ್ಯತೆ ಆಚರಣೆಯು ಸಮಾಜದಲ್ಲಿ ವಿಷಪೂರಿತ ಕಳೆಗಳಾಗಿವೆ. ಇದನ್ನು ಸಂಪೂರ್ಣವಾಗಿ ತೊಳೆದು ಹಾಕಬೇಕಿದೆ ಎಂದು ತಿಳಿಸಿದರು.

ಪ್ರಪಂಚ ಇಂದು ನಾಗರಿಕತೆ ಉತ್ತುಂಗದಲ್ಲಿದೆ. ಆದರೂ, ದೇಶದಲ್ಲಿ ಇಂದು ಜಾತಿ ವ್ಯವಸ್ಥೆ, ಅಸ್ಪೃಶ್ಯ ಜೀವಂತವಾಗಿದೆ. ಸಮಾಜದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಜಾಗತಿಕ ಮಟ್ಟದಲ್ಲಿ ದೇಶ ತಲೆತಗ್ಗಿಸುವಂತಾಗಿದೆ ಎಂದು ವಿಷಾದಿಸಿದರು.

ADVERTISEMENT

ಸಂವಿಧಾನದಡಿ ಅಸ್ಪೃಶ್ಯತಾ ನಿಷೇಧ ಕಾಯ್ದೆ, ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಜಾರಿಯಲ್ಲಿದ್ದರೂ ಸಮಾಜದಲ್ಲಿ ದಲಿತರ ಮೇಲಿನ ದೌರ್ಜನ್ಯದ ಪ್ರಕರಣ ಮರುಕಳಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಮಾಜ ತಲೆತಗ್ಗಿಸುವ ವಿಚಾರವಾಗಿದೆ ಎಂದರು.

ಸರ್ಕಾರ ಅಂತರ್ಜಾತಿ ವಿವಾಹವನ್ನು ಬೆಂಬಲಿಸುತ್ತಿದ್ದರೂ ಪರಿಶಿಷ್ಟ ಜಾತಿ ಯುವಕರನ್ನು ವಿವಾಹವಾದ ಕಾರಣಕ್ಕೆ ಮರ್ಯಾದೆ ಹತ್ಯೆ ನಡೆಯುತ್ತಿದೆ. ದೇವಸ್ಥಾನ, ಜಾತ್ರೆಗಳಲ್ಲಿ ದಲಿತರಿಗೆ ಈಗಲೂ ನಿಷೇಧವಿದೆ. ಇವೆಲ್ಲವೂ ದೂರವಾಗಬೇಕೆಂದು ತಿಳಿಸಿದರು.

ಮುಖ್ಯ ಶಿಕ್ಷಕಿ ಪುಷ್ಪಲತಾ ಮಾತನಾಡಿ, ಸಮಾಜದಲ್ಲಿನ ಜಾತಿ ವ್ಯವಸ್ಥೆ, ಅಸ್ಪೃಶ್ಯ ಆಚರಣೆ ಕಾನೂನು ಕಾಯ್ದೆಯಿಂದಲೇ ಬದಲಾಗುವುದಿಲ್ಲ. ಅದರ ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಬೇಕು. ಯುವ ಸಮುದಾಯ ಜಾಗೃತವಾಗಬೇಕು ಎಂದು ತಿಳಿಸಿದರು.

ಧಮ್ಮ ದೀವಿಗೆ ಚಾರಿಟೇಬಲ್ ಟ್ರಸ್ಟ್ ಸಮಾಜವನ್ನು ಜಾಗೃತಗೊಳಿಸುತ್ತಿದೆ. ಸಾಮಾಜಿಕವಾಗಿ ಜಾತಿ ವ್ಯವಸ್ಥೆ ವಿರುದ್ಧ ಸಮಾನತೆಗಾಗಿ ಹೋರಾಟ ನಡೆಸಿದ ಜ್ಯೋತಿ ಬಾ ಫುಲೆ ದಂಪತಿ, ಛತ್ರಪತಿ ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತ ಮಹನೀಯರ ಬಗ್ಗೆ ಟ್ರಸ್ಟ್ ಮೂಲಕ ತಿಳಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ನೌಕರರಾದ ರವಿ ಮಂಜುನಾಥ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ, ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮುತ್ತುರಾಜು ಮತ್ತು ತಂಡವು ‘ಸಂಕೋಲೆ‘ ಎಂಬ ಬೀದಿ ನಾಟಕದ ಮೂಲಕ ಜಾತಿ ನಿರ್ಮೂಲನೆ ಮತ್ತು ಅಸ್ಪೃಶ್ಯ ಆಚರಣೆ ಬಗ್ಗೆ ಅಭಿನಯಿಸಿ ಸಾರ್ವಜನಿಕವಾಗಿ ಜಾಗೃತಿ ಮೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.