
ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಎ.ಬಿ. ಲೋಕೇಶ್ ಅವರ ಮನೆಯಲ್ಲಿ ‘ಅರಿವು ಭಾರತ’ ಸಂಘಟನೆ ಹಮ್ಮಿಕೊಂಡಿದ್ದ ‘ನಮ್ಮ ನಡೆ ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ’ ಅಭಿಯಾನದಲ್ಲಿ ಲೋಕೇಶ್ ಮತ್ತು ವಿನುತಾ ದಂಪತಿಯನ್ನು ಸನ್ಮಾನಿಸಲಾಯಿತು
ಚನ್ನಪಟ್ಟಣ (ರಾಮನಗರ): ‘ದೇಶದಲ್ಲಿ ಜಾತಿ ಮತ್ತು ಅಸ್ಪೃಶ್ಯತೆ ವಿರುದ್ಧದ ಹೋರಾಟ ಬುದ್ಧನ ಕಾಲದಿಂದಲೇ ಆರಂಭಗೊಂಡಿದೆ. ಬಸವಣ್ಣ, ಜ್ಯೋತಿಬಾ ಫುಲೆ, ಡಾ. ಬಿ.ಆರ್. ಅಂಬೇಡ್ಕರ್‌ವರೆಗೆ ಅದು ಸಾಗುತ್ತಾ ಬಂದಿದೆ. ಅದೇ ಹಾದಿಯಲ್ಲಿ ಅರಿವು ಭಾರತ ತಂಡ ಮಾಡುತ್ತಿರುವ ಕೆಲಸವು ಅಸ್ಪೃಶ್ಯತೆ ವಿರುದ್ಧದ ಮೌನ ಕ್ರಾಂತಿಯಾಗಿದೆ’ ಎಂದು ಎಂದು ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ ಗೋಪಾಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕಿನ ಅರಳಾಳುಸಂದ್ರ ಗ್ರಾಮದ ಎ.ಬಿ. ಲೋಕೇಶ್ ಅವರ ಮನೆಯಲ್ಲಿ ‘ಅರಿವು ಭಾರತ’ ತಂಡ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ನಮ್ಮ ನಡಿಗೆ ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ’ ಅಭಿಯಾನದಲ್ಲಿ ಅವರು ಮಾತನಾಡಿದರು.
‘ಪ್ರಾಣಿ, ಪಕ್ಷಿ, ಗಿಡ– ಮರಗಳನ್ನು ನೋಡಿದ ತಕ್ಷಣ ಜಾತಿ ಕಾಣುತ್ತದೆ. ಆದರೆ, ಮನುಷ್ಯನಲ್ಲಿ ಮೇಲ್ನೋಟಕ್ಕೆ ಜಾತಿ ಕಂಡುಹಿಡಿಯಲು ಸಾಧ್ಯವಿಲ್ಲ. ಯಾಕೆಂದರೆ, ಅದನ್ನು ಹೇರಲಾಗಿದೆ ಎಂದು ಬುದ್ಧ ಹೇಳಿದ್ದಾರೆ. ಕುವೆಂಪು ಅಸ್ಪೃಶ್ಯತೆ ವಿರುದ್ಧ ನಡೆಸಿದ ಚಳುವಳಿಗೆ ಅವರ ಸಮುದಾಯದಿಂದಲೇ ಬೆಂಬಲ ಸಿಗಲಿಲ್ಲ. ಅವರ ಸಿದ್ದಾಂತ ಜಾರಿಯಾಗಿದ್ದರೆ ರಾಜ್ಯದ ಚಿತ್ರಣ ಬದಲಾಗುತ್ತಿತ್ತು’ ಎಂದರು.
‘ಮನುಷ್ಯ ಮನುಷ್ಯನನ್ನು ಗೌರವಿಸುವುದೇ ಸಮ ಸಮಾಜ. ಪ್ರೀತಿ, ವಿಶ್ವಾಸದಿಂದ ಮಾತ್ರ ಮನಸ್ಸು ಗೆಲ್ಲಲು ಸಾಧ್ಯ. ಅದಕ್ಕಾಗಿ ಅರಿವು ಭಾರತ ಸಂಘರ್ಷವಿಲ್ಲದ ಚಳವಳಿ ಮಾಡುತ್ತಿದೆ. ಇದು ಪ್ರತಿ ಮನೆಯಲ್ಲಿ ನಡೆಯುವಂತಾಗಬೇಕು. ಜಾತಿ ಮುಕ್ತ ಸಮಾಜ ನಿರ್ಮಾಣವಾದರೆ ಮುಂದೆ ಅದು ದೊಡ್ಡ ಬದಲಾವಣೆಗೆ ಕಾರಣವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ರೈತ ಸಂಘದ ಮುಖಂಡ ಸಿ. ಪುಟ್ಟಸ್ವಾಮಿ ಮಾತನಾಡಿ, ‘ಪಕ್ಷ ರಾಜಕಾರಣವು ವ್ಯವಸ್ಥಿತವಾಗಿ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿದೆ. ಅದರ ನಡುವೆಯೂ ಅಂಬೇಡ್ಕರ್, ಫುಲೆ, ಬಸವಣ್ಣ, ಕುವೆಂಪು ಮಾರ್ಗದಲ್ಲಿ ಅಸ್ಪೃಶ್ಯತೆ ಮತ್ತು ಜಾತಿ ವಿರುದ್ಧ ಚಳುವಳಿ ಮಾಡಬೇಕಿದೆ. ಇದು ಸಮಾಜದ ಋಣ ತೀರಿಸುವ ಕೆಲಸ’ ಎಂದು ಹೇಳಿದರು.
ಕಾರ್ಯಕ್ರಮದ ಬಳಿಕ ಲೋಕೇಶ್ ಅವರ ಮನೆಯಲ್ಲಿ ಸರ್ವ ಜಾತಿಗಳ ಸಹಭೋಜನ ಜರುಗಿತು. ಅರಳಾಳುಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೊಡ್ಡಮ್ಮ ಸಿದ್ದಯ್ಯ, ಪ್ರಾಧ್ಯಾಪಕ ಡಾ. ರುದ್ರೇಶ್ ಅದರಂಗಿ, ಟಿ. ವಿಜಯಕುಮಾರ್, ಪಿ. ರಮೇಶ್, ಓಂ ಪ್ರಕಾಶ್, ಶಿವಮಲ್ಲಮ್ಮ , ರಾ.ಸಿ. ರಮೇಶ್, ಕೋಲಾರ ದೊರೆಸ್ವಾಮಿ, ಕೆ.ವಿ. ರಮೇಶ್, ರೂಪೇಶ್ , ರವೀಶ್ , ಸುರೇಶ್, ಶಿವಮಲ್ಲೇಗೌಡ, ಪ್ರದೀಪ್, ರಾಜೇಶ್ ಹಾಗೂ ಇತರರು ಇದ್ದರು.
ದೇವರ ದೃಷ್ಟಿಯಲ್ಲಷ್ಟೇ ಮನುಷ್ಯರೆಲ್ಲಾ ಒಂದು ಎಂಬ ಮಾತು ಮನುಷ್ಯರ ದೃಷ್ಟಿಯಲ್ಲೂ ಸಾಕಾರವಾಗಬೇಕು. ಮನುಷ್ಯ ಸಂಬಂಧಗಳು ಸಮಾಜವನ್ನು ಪ್ರಗತಿ ಕಡೆಗೆ ಕರೆದೊಯ್ಯಬೇಕೇ ಹೊರತು ಒಡೆಯಬಾರದು– ಎಚ್.ಕೆ. ವಿವೇಕಾನಂದ ಅಂತರಂಗ ಚಳವಳಿ ನೇತಾರ
ಅಸ್ಪೃಶ್ಯತೆ ಮತ್ತು ಜಾತಿಯನ್ನು ಕಾನೂನಿನಿಂದ ಮಾತ್ರ ನಿವಾರಿಸಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ ಅರಿವು ಭಾರತದಂತಹ ಕಾರ್ಯಕ್ರಮಗಳು ನಡೆಯಬೇಕು. ಆಗ ಮಾತ್ರ ತಾರತಮ್ಯವಿಲ್ಲದ ಸಮಾಜ ನಿರ್ಮಾಣ ಸಾಧ್ಯ– ಪಂಡಿತ್ ಮುನಿವೆಂಕಟಪ್ಪ ಹಿರಿಯ ದಲಿತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.