ADVERTISEMENT

ರಾಮನಗರ: ಅರ್ಕಾವತಿ, ವೃಷಭಾವತಿ ಪುನರುಜ್ಜೀವನ

​ಪ್ರಜಾವಾಣಿ ವಾರ್ತೆ
Published 20 ಮೇ 2025, 15:55 IST
Last Updated 20 ಮೇ 2025, 15:55 IST
ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಲ ಸಂಪನ್ಮೂಲ ಇಲಾಖೆ ತಾಂತ್ರಿಕ ಅಧ್ಯಯನ ಸಮಿತಿ ಅಧ್ಯಕ್ಷ ಕೆ.ಜೈಪ್ರಕಾಶ್ ಮಾತನಾಡಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಅಧಿಕಾರಿಗಳು ಹಾಜರಿದ್ದರು
ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಲ ಸಂಪನ್ಮೂಲ ಇಲಾಖೆ ತಾಂತ್ರಿಕ ಅಧ್ಯಯನ ಸಮಿತಿ ಅಧ್ಯಕ್ಷ ಕೆ.ಜೈಪ್ರಕಾಶ್ ಮಾತನಾಡಿದರು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಅಧಿಕಾರಿಗಳು ಹಾಜರಿದ್ದರು   

ರಾಮನಗರ: ವೃಷಭಾವತಿ ಹಾಗೂ ಅರ್ಕಾವತಿ ಕಣಿವೆಗಳ ಮಾಲಿನ್ಯ ನಿಯಂತ್ರಣ ಕುರಿತು ಪರಿಹಾರ ಮಾರ್ಗೋಪಾಯ ತಾಂತ್ರಿಕ ವರದಿ ಶೀಘ್ರದಲ್ಲೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಜಲ ಸಂಪನ್ಮೂಲ ಇಲಾಖೆ ತಾಂತ್ರಿಕ ಅಧ್ಯಯನ ಸಮಿತಿ ಅಧ್ಯಕ್ಷ ಕೆ.ಜೈಪ್ರಕಾಶ್ ತಿಳಿಸಿದರು.

ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮಂಚನಬೆಲೆ, ಬೈರಮಂಗಲ, ತಿಪ್ಪಗೊಂಡನಹಳ್ಳಿ ಮತ್ತು ಅರ್ಕಾವತಿ ಅಣೆಕಟ್ಟುಗಳಿಗೆ ಹರಿಯುವ ನೀರು ಕಲುಷಿತಗೊಳ್ಳುವುದನ್ನು ತಡೆಗಟ್ಟುವ ಮಾರ್ಗೋಪಾಯ ವರದಿಯು ಇದರಲ್ಲಿ ಸೇರಿದೆ ಎಂದರು.

ಈ ಕಣಿವೆಗಳಲ್ಲಿನ ನೀರು ಒಳಚರಂಡಿ ತ್ಯಾಜ್ಯ, ಘನತ್ಯಾಜ್ಯ, ಕೈಗಾರಿಕಾ ತ್ಯಾಜ್ಯ ಮತ್ತು ಇತರ ರೀತಿಯ ಮಾಲಿನ್ಯಕಾರಕ ಅಂಶಗಳಿಂದಾಗಿ ಕಲುಷಿತಗೊಳ್ಳುತ್ತಿರುವುದನ್ನು ಅಧ್ಯಯನದ ವೇಳೆ ಗಮನಿಸಲಾಗಿದೆ. ಮಾಲಿನ್ಯದ ಮೂಲ, ಮಾಲಿನ್ಯಕ್ಕೆ ಕಾರಣ ಹಾಗೂ ಪರಿಹಾರೋಪಾಯ ಅಧ್ಯಯನ ವರದಿಯಲ್ಲಿ ಇರಲಿದೆ ಎಂದರು.

ADVERTISEMENT

ಕಲುಷಿತ ನೀರು ಕಣಿವೆಗಳಲ್ಲಿ ಸೇರುತ್ತಿರುವುದರಿಂದ ಜನ ಜಾನುವಾರು ಆರೋಗ್ಯ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುವ ಜತೆಗೆ ಬೆಳೆಗಳ ಮೇಲೂ ಪರಿಣಾಮ ಬೀರುತ್ತಿದೆ. ಅಣೆಕಟ್ಟು, ಕೆರೆ ಮತ್ತು ನದಿ ಕಣಿವೆಗಳ ಪರಿವೀಕ್ಷಣೆ ಮಾಡುವುದರ ಜತೆಗೆ ಈಗಾಗಲೇ ಕೆಲ ಇಲಾಖೆಗಳು ಕಾಲಾನುಕಾಲಕ್ಕೆ ಮಾಲಿನ್ಯ ಸುಧಾರಿಸಲು ಕೆಲವು ಕ್ರಮಕೈಗೊಳ್ಳಲಾಗಿದೆ. ಈ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದ್ದು,‌ ಸರ್ಕಾರಕ್ಕೆ ನೈಜ ವರದಿ ಸಿದ್ಧಪಡಿಸಿ ನೀಡಲಾಗುವುದು ಎಂದು ತಿಳಿಸಿದರು.

ನೀರಿನ ಗುಣಮಟ್ಟ ಪರೀಕ್ಷೆ ಮಾಡುವುದರ ಜತೆಗೆ ನೀರಿನ ಸದ್ಬಳಕೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಹಾಗೂ ನದಿ ನೀರಿನ ಗುಣಮಟ್ಟ ಸುಧಾರಿಸಲು ತೆಗೆದುಕೊಳ್ಳಬೇಕಾದ ಮಾರ್ಗೋಪಾಯಗಳನ್ನು ವರದಿಯಲ್ಲಿ ಶಿಫಾರಸು ಮಾಡಲಾಗವುದು ಎಂದರು.

ಕಳೆದ ಮಾರ್ಚ್ 6ರಂದು ರಚನೆಗೊಂಡ ಅಧ್ಯಯನ ಸಮಿತಿಯಿಂದ ಎರಡು ಸಭೆ ನಡೆಸಲಾಗಿದೆ. ಹೆಸರುಘಟ್ಟ ಕೆರೆಯಿಂದ ಬೆಂಗಳೂರು ರಸ್ತೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸೇತುವೆವರೆಗೆ, ಮಾರನಾಯಕನಹಳ್ಳಿ ಅರ್ಕಾವತಿ ಕಣಿವೆ ಪರಿಶೀಲನೆ ನಡೆಸಲಾಗಿದೆ. ಶೀಘ್ರವೇ ಅರ್ಕಾವತಿ ಡ್ಯಾಂನಿಂದ ಕನಕಪುರ ಸಂಗಮದವರೆಗೆ ಪರಿವೀಕ್ಷಣೆ ನಡೆಸುವುದಾಗಿ ತಿಳಿಸಿದರು.

ಈಗ ಬೆಂಗಳೂರು ನಗರವನ್ನು ಗ್ರೇಟರ್ ಬೆಂಗಳೂರು ಎಂದು ವಿಂಗಡಿಸಲಾಗಿದೆ. ಇದಕ್ಕೆ ಪೂರಕವಾಗಿ ಬೆಂಗಳೂರನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದು ಆದ್ಯತೆ ಅಂಶವಾಗಿದೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ವೃಷಭಾವತಿ ಮತ್ತು ಅರ್ಕಾವತಿ ಕಣಿವೆಗಳು ಇದ್ದು, ಈ ಕಣಿವೆ ಈ ನದಿಗಳನ್ನು ಪುನರುಜ್ಜೀವನಗೊಳಿಸುವುದು ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಿರಿಯ ಅಧಿಕಾರಿಗಳು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪುಂಡರೀಕ, ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಸಿ.ಆರ್.ಮಂಜುನಾಥ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.