ADVERTISEMENT

ಮಹಿಳೆ ಮೇಲೆ ಹಲ್ಲೆ: ಆರೋಪ, ಪ್ರತ್ಯಾರೋಪ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 4:03 IST
Last Updated 19 ಜೂನ್ 2021, 4:03 IST

ರಾಮನಗರ: ಲಂಬಾಣಿ ಸಮುದಾಯಕ್ಕೆ ಸೇರಿದ 58 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ರಾಮನಗರ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದೆಡೆ, ತಮ್ಮ ಮೇಲೆ ಗುಂಪೊಂದು ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿದೆ ಎಂದು ಪ್ರಕರಣದ ಆರೋಪಿಗಳು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎರಡು ದಿನದ ಹಿಂದಷ್ಟೇ ಈ ಘಟನೆ ನಡೆದಿದೆ. ‘ಮನೆಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ನನ್ನ ಮೇಲೆ ಅತ್ಯಾಚಾರ ನಡೆಸಿದರು. ನಂತರ ನನ್ನ ಮೇಲೆ ಹಲ್ಲೆ ನಡೆಸಿ ಕೊಲೆಗೂ ಯತ್ನಿಸಿದರು. ಈ ಸಂದರ್ಭ ನಾನು ಕೂಗಿಕೊಂಡಿದ್ದು, ಅಕ್ಕಪಕ್ಕದ ಮನೆಯಲ್ಲಿದ್ದಸಂಬಂಧಿಕರು ಧಾವಿಸಿ ನನ್ನನ್ನು ರಕ್ಷಣೆ ಮಾಡಿದರು’ ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಮೋಹನ ನಾಯ್ಕ, ಅಪ್ಪು ನಾಯ್ಕ ಎಂಬುವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರತಿ ದೂರು: ‘ಮೂರು ಜನರ ಗುಂಪೊಂದು ಮನೆಯಲ್ಲಿ ಮಲಗಿದ್ದ ನಮ್ಮನ್ನು ಎಬ್ಬಿಸಿ, ಹೊರಗೆ ಕರೆತಂದು ಹಲ್ಲೆ ನಡೆಸಿತು. ಜೊತೆಗೆ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಇಲ್ಲಸಲ್ಲದ ಆರೋಪವನ್ನೂ ಹೊರಿಸಿದೆ’ ಎಂದು ಮೋಹನ ನಾಯ್ಕ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ಆರೋಪಿಗಳಿಗೆ ಅಪರಾಧ ಹಿನ್ನೆಲೆಯೂ ಇದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ‘ಮಹಿಳೆ ನೀಡಿದ ದೂರು ಆಧರಿಸಿ ಐಪಿಸಿ ಸೆಕ್ಷನ್‌ 376ಡಿ, 307 ಅಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿಗಳ ವಿಚಾರಣೆ ನಡೆಸಿದ್ದು, ತನಿಖೆ ಮುಂದುವರಿಸಲಾಗುವುದು’ ಎಂದು ರಾಮನಗರ ಎಸ್ಪಿ ಎಸ್. ಗಿರೀಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.