ADVERTISEMENT

ಅಸಂಘಟಿತ ಕಾರ್ಮಿಕರಿಗೆ ನೆರವು

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 5:31 IST
Last Updated 18 ಜುಲೈ 2021, 5:31 IST
ಉಯ್ಯಂಬಳ್ಳಿ ಕೆರೆಯಲ್ಲಿ ನರೇಗಾದಡಿ ಹೂಳು ತೆಗೆಯುತ್ತಿರುವ ಕೂಲಿ ಕಾರ್ಮಿಕರಿಗೆ ಸುರಕ್ಷತಾ ಕಿಟ್‌ ವಿತರಿಸಲಾಯಿತು
ಉಯ್ಯಂಬಳ್ಳಿ ಕೆರೆಯಲ್ಲಿ ನರೇಗಾದಡಿ ಹೂಳು ತೆಗೆಯುತ್ತಿರುವ ಕೂಲಿ ಕಾರ್ಮಿಕರಿಗೆ ಸುರಕ್ಷತಾ ಕಿಟ್‌ ವಿತರಿಸಲಾಯಿತು   

ಕನಕಪುರ: ಕಟ್ಟಡ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಉಚಿತವಾಗಿ ಕಾರ್ಮಿಕ ಸುರಕ್ಷತಾ ಕಿಟ್‌ ವಿತರಣೆ ಮಾಡಲಾಗುತ್ತಿದೆ ಎಂದು ಕಾರ್ಮಿಕ ನಿರೀಕ್ಷಕ ಮಂಜುನಾಥ್‌ ತಿಳಿಸಿದರು.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ವ್ಯಾಪ್ತಿಯ ಕೆರೆಗಳಲ್ಲಿ ನರೇಗಾ ಯೋಜನೆಯಡಿ ಹೂಳು ತೆಗೆಯುತ್ತಿರುವ ಕೂಲಿ ಕಾರ್ಮಿಕರಿಗೆ ಶನಿವಾರ ಕಿಟ್‌ ವಿತರಣೆ ಮಾಡಿ ಮಾತನಾಡಿದರು.

ಅಸಂಘಟಿತ ಕಾರ್ಮಿಕರನ್ನು ಇಲಾಖೆಯಡಿ ಗುರುತಿಸಿ ಕಾರ್ಮಿಕ ಕಲ್ಯಾಣ ಕಾರ್ಯಕ್ರಮದಡಿ ವಿಶೇಷ ಸೌಲಭ್ಯ ನೀಡಲಾಗುತ್ತಿದೆ. ಕಟ್ಟಡ ಮತ್ತು ಇನ್ನಿತರ ಕೆಲಸ ಮಾಡುವ ಕಾರ್ಮಿಕರು ಇಲಾಖೆಯಲ್ಲಿ ಸದಸ್ಯರಾಗುವ ಮೂಲಕ ಸರ್ಕಾರದಿಂದ ಸಿಗುವ ಈ ಅವಕಾಶವನ್ನು ಎಲ್ಲಾ ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

ADVERTISEMENT

ಕೂಲಿ ಕಾರ್ಮಿಕರಾಗಿ ಕೆಲಸ ಮಾಡುವ ಮಹಿಳೆಯರು ಮತ್ತು ಪುರುಷರು ಕೋವಿಡ್‌ ನಿಯಮ ಪಾಲನೆ ಮಾಡಬೇಕು. ಕೆಲಸ ಮಾಡುವ ವೇಳೆ ಸುರಕ್ಷಿತ ಕ್ರಮ ಅನುಸರಿಸಿ ಕೋವಿಡ್‌ ಬಾರದಂತೆ ಎಚ್ಚರವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ದಿಶಾ ಕಮಿಟಿ ಸದಸ್ಯ ಏಳಗಳ್ಳಿ ರವಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಸಂಸದ ಡಿ.ಕೆ. ಸುರೇಶ್‌ ಕಾರ್ಮಿಕ ಇಲಾಖೆಯಿಂದ ಕೂಲಿ ಕಾರ್ಮಿಕರಿಗೆ ಕೋವಿಡ್‌ ಸಂದರ್ಭದಲ್ಲಿ ದಿನಸಿ ಕಿಟ್‌ ಮತ್ತು ಸುರಕ್ಷಿತಾ ಕಿಟ್‌ ಕೊಡಬೇಕೆಂದು ಕಾರ್ಮಿಕ ಇಲಾಖೆ ಕಮೀಷನರ್‌ ಅವರನ್ನು ಭೇಟಿ ಮಾಡಿ ಎಲ್ಲಾ ಕಾರ್ಮಿಕರಿಗೆ ಹೋರಾಟ ನಡೆಸಿದ್ದರು ಎಂದು ಹೇಳಿದರು.

ಸರ್ಕಾರ ಒಂದು ಕ್ಷೇತ್ರಕ್ಕೆ 5 ಸಾವಿರ ಕಿಟ್‌ ಕೊಟ್ಟಿದ್ದು ಎಲ್ಲರಿಗೂ ಕೊಡಲು ಆಗುತ್ತಿಲ್ಲ. ನಮ್ಮ ತಾಲ್ಲೂಕು ಒಂದರಲ್ಲೇ 27 ಸಾವಿರ ಕಾರ್ಮಿಕರಿದ್ದಾರೆ. ಎಲ್ಲರಿಗೂ ಕಿಟ್‌ ಕೊಡಬೇಕೆಂದು ಸಂಸದರು ಹೋರಾಟ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಹೋಬಳಿಯಲ್ಲಿ 500 ಕೂಲಿ ಕಾರ್ಮಿಕರು ನರೇಗಾದಡಿ ಕೆಲಸ ಮಾಡುತ್ತಿದ್ದಾರೆ. ಮಂಜುನಾಥ್‌ ಅವರನ್ನು ಇಲ್ಲಿಗೆ ಕರೆ ತಂದು ಕಿಟ್‌ ಕೊಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವರಾಜು, ಮುಖಂಡರಾದ ಮಹೇಶ್‌
ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.