ರಾಮನಗರ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ರಾಮನಗರ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದ 7 ವರ್ಷಗಳಲ್ಲಿ ಜಿಲ್ಲೆಯಲ್ಲಿ ಪರಿಶಿಷ್ಟರ ಮೇಲೆ ಬರೋಬ್ಬರಿ 346 ದೌರ್ಜನ್ಯ ಪ್ರಕರಣಗಳು ನಡೆದಿವೆ. ಸವರ್ಣಿಯರ ಕ್ರೌರ್ಯಕ್ಕೆ 19 ಮಂದಿ ಜೀವ ಕಳೆದುಕೊಂಡಿದ್ದರೆ, 45 ಮಹಿಳೆಯರು ಲೈಂಗಿಕ ದೌರ್ಜನ್ಯ ಅನುಭವಿಸಿದ್ದಾರೆ.
ಜಾತಿನಿಂದನೆ, ಕೊಲೆ ಯತ್ನ, ಹಲ್ಲೆ ಸೇರಿದಂತೆ ಇತರ ಕಾರಣಗಳಿಗಾಗಿ ನಡೆದ ದೌರ್ಜನ್ಯ ಪ್ರಕರಣಗಳು ಸುಮಾರು 28. ಊರಿನ ದೇವಾಲಯ ಪ್ರವೇಶ ಮಾಡಿದ್ದಕ್ಕೆ, ಸರ್ವಣೀಯರ ಎದುರು ಮಾತನಾಡಿದ್ದಕ್ಕೆ, ರಸ್ತೆ ಬದಿ ವಾಹನ ನಿಲ್ಲಿಸಿದ್ದಕ್ಕೆ, ಅನ್ಯಾಯ ಪ್ರಶ್ನಿಸಿದ್ದಕ್ಕೆ... ಹೀಗೆ ಕ್ಷುಲ್ಲಕ ಘಟನೆಗಳಿಂದಿಡಿದು ಗಂಭೀರ ಕಾರಣಗಳಿಗಾಗಿ ಪರಿಶಿಷ್ಟರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ.
ಅಡ್ಡ ಹಾಕಿ ಹೊಡೆಯುವುದ, ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡುವುದು, ಕೈ–ಕಾಲು ಕತ್ತರಿಸುವುದು, ಕೆಲಸ ಮಾಡುವ ಸ್ಥಳದಲ್ಲಿ ಕಿರುಕುಳ ನೀಡುವುದು, ಜಾತಿನಿಂದನೆ ಮಾಡುವುದು, ಲೈಂಗಿಕ ದೌರ್ಜನ್ಯ ಎಸಗುವುದು ಸೇರಿದಂತೆ ಹಲವು ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಲೇ ಇವೆ. ಆದರೆ, ಇದುವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಮಾತ್ರ ಶೂನ್ಯ.
ಕನಕಪುರದಲ್ಲಿ ಹೆಚ್ಚು: ‘ಜಿಲ್ಲೆಯ 4 ತಾಲ್ಲೂಕುಗಳ ಪೈಕಿ ಕನಕಪುರದಲ್ಲಿ (ಹಾರೋಹಳ್ಳಿ ಒಳಗೊಂಡಂತೆ) ಪರಿಶಿಷ್ಟರ ಮೇಲೆ ಹೆಚ್ಚಿನ ಅತಿ ಹೆಚ್ಚು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಪರಿಶಿಷ್ಟ ಸಮುದಾಯಗಳ ಅಭ್ಯುದಯಕ್ಕಾಗಿ ಇರುವ ಸಮಾಜ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ಕನಕಪುರದಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ 132 ಪ್ರಕರಣಗಳು ದಾಖಲಾಗಿದ್ದು, 171 ಜನರ ಮೇಲೆ ದೌರ್ಜನ್ಯ ನಡೆದಿದೆ’ ಎನ್ನುತ್ತವೆ ಪರಿಶಿಷ್ಟ ಸಮುದಾಯಗಳ ಅಭ್ಯುದಯಕ್ಕಾಗಿ ಇರುವ ಸಮಾಜ ಕಲ್ಯಾಣ ಇಲಾಖೆಯ ಅಂಕಿಅಂಶಗಳು.
‘ಎರಡನೇ ಸ್ಥಾನದಲ್ಲಿರುವ ರಾಮನಗರದಲ್ಲಿ 92 ಪ್ರಕರಣಗಳು ದಾಖಲಾಗಿದ್ದು 172 ಮಂದಿ ದೌರ್ಜನ್ಯಕ್ಕೊಳಗಾಗಿದ್ದಾರೆ. ಚನ್ನಪಟ್ಟಣದಲ್ಲಿ 83 ಪ್ರಕರಣಗಳಲ್ಲಿ 151 ಜನರು ಹಾಗೂ ಮಾಗಡಿಯಲ್ಲಿ 75 ಪ್ರಕರಣಗಳಲ್ಲಿ 100 ಮಂದಿ ಜಾತಿ ಕಾರಣಕ್ಕೆ ಜಾತಿ ದೌರ್ಜನ್ಯ ಅನುಭವಿಸಿದ್ದಾರೆ. ಒಟ್ಟು 594 ಸಂತ್ರಸ್ತರ ಪೈಕಿ, ಪರಿಶಿಷ್ಟ ಜಾತಿಯ 555 ಹಾಗೂ ಪರಿಶಿಷ್ಟ ಪಂಗಡದ 39 ಜನರಿದ್ದಾರೆ’ ಎಂಬುದನ್ನು ಅಂಕಿಅಂಶಗಳು ಬಹಿರಂಗಪಡಿಸಿವೆ.
ಪರಿಹಾರಕ್ಕೆ ಸೀಮಿತವಾದ ಇಲಾಖೆ: ಪರಿಶಿಷ್ಟರ ಕಲ್ಯಾಣಕ್ಕಾಗಿ ಇರುವ ಸಮಾಜ ಕಲ್ಯಾಣ ಇಲಾಖೆಯು, ದೌರ್ಜನ್ಯ ಪ್ರಕರಣ ದಾಖಲಾದಾಗ ಅವರಿಗೆ ಪರಿಹಾರ ಪಾವತಿಸುವುದಕ್ಕೆ ಮಾತ್ರ ಸೀಮಿತವಾಗಿವೆವೆ. ಘಟನೆ ನಡೆದಾಗ ಇಲಾಖೆ ನಡೆಸುವ ಶಾಂತಿಸಭೆಗಳು ದೌರ್ಜನ್ಯ ತಡೆಗಟ್ಟುವಲ್ಲಿ ವಿಫಲವಾಗಿವೆ ಎನ್ನುತ್ತಾರೆ ಜಿಲ್ಲೆಯ ದಲಿತ ಮುಖಂಡರು.
‘ಪ್ರಕರಣದ ಸ್ವರೂಪವನ್ನು ಆಧರಿಸಿ ಸಂತ್ರಸ್ತರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಹಾರ ನೀಡಲಾಗುತ್ತದೆ. ಕೊಲೆ ಪ್ರಕರಣಗಳಲ್ಲಿ ಎಫ್‌ಐಆರ್ ಮತ್ತು ಮರಣೋತ್ತರ ಪರೀಕ್ಷೆ ಬಳಿಕ ಹಾಗೂ ಆರೋಪಪಟ್ಟಿ ಸಲ್ಲಿಕೆಯಾದಾಗ ತಲಾ ಶೇ 50ರಂತೆ ಪರಿಹಾರವನ್ನು ಕುಟುಂಬದವರಿಗೆ ಪಾವತಿಸಲಾಗುತ್ತದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ಅತ್ಯಾಚಾರ, ಹಲ್ಲೆ, ಜಾತಿನಿಂದನೆ ಪ್ರಕರಣಗಳಲ್ಲಿ ಎಫ್‌ಐಆರ್ ಆದಾಗ ಶೇ 25ರಷ್ಟು, ಆರೋಪಟ್ಟಿ ಸಲ್ಲಿಕೆಯಾದಾಗ ಶೇ 50 ಹಾಗೂ ಅಪರಾಧಿಗಳಿಗೆ ಶಿಕ್ಷೆಯಾದಾಗ ಶೇ 25ರಷ್ಟು ಪರಿಹಾರವನ್ನು ನಿಯಮಾನುಸಾರ ನೀಡಲಾಗುತ್ತದೆ. ಯಾವುದೇ ಗ್ರಾಮದಲ್ಲಿ ದೌರ್ಜನ್ಯ ವರದಿಯಾದಾಗ ಇಲಾಖೆ ನೇತೃತ್ವದಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಜೊತೆ ಶಾಂತಿ ಸಭೆ ನಡೆಸುತ್ತೇವೆ. ದೌರ್ಜನ್ಯ ತಡೆ ಕಾಯ್ದೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ’ ಎಂದು ಹೇಳಿದರು.
ರಾಜಕೀಯ ಶಕ್ತಿ ಮತ್ತು ಅಧಿಕಾರದ ಮುಖ್ಯ ಹುದ್ದೆಗಳು ಒಂದು ಜಾತಿ ಕೈಯಲ್ಲಿ ಕೇಂದ್ರೀಕೃತವಾಗುತ್ತಿರುವುದು ತಳ ಸಮುದಾಯಗಳ ಮೇಲಿನ ದೌರ್ಜನ್ಯಕ್ಕೆ ಕಾರಣ. ಅಧಿಕಾರ ಆರ್ಥಿಕತೆ ಭೂಮಿ ಮಾಲೀಕತ್ವದಲ್ಲಿ ಪಾಲುದಾರಿಕೆ ಜೊತೆಗೆ ಸಾಮಾಜಿಕ ಒಳಗೊಳ್ಳುವಿಕೆ ಜಾತಿ ದೌರ್ಜನ್ಯ ತಡೆಗೆ ಇರುವ ದಾರಿ– ಬಂಜೆಗೆರೆ ಜಯಪ್ರಕಾಶ್ ಸಾಹಿತಿ ಹಾರೋಹಳ್ಳಿ
ಯಾರೂ ಮೇಲಲ್ಲ ಯಾರೂ ಕೀಳಲ್ಲ ಎಂಬ ಭಾವನೆ ನಮ್ಮಲ್ಲಿ ಮೊದಲು ಬರಬೇಕು. ಶೋಷಿತ ಸಮುದಾಯಗಳಲ್ಲಿ ಮುಂದುವರಿದವರು ತಮ್ಮವರಿಂದ ದೂರಾಗದೆ ಅವರ ಜೊತೆಗಿದ್ದು ಮೇಲಕ್ಕೆತ್ತುವ ಕೆಲಸ ಮಾಡಬೇಕು. ಆಗ ಮಾತ್ರ ಜಾತಿ ದೌರ್ಜನ್ಯವಿಲ್ಲದ ಸಮ ಸಮಾಜ ನಿರ್ಮಾಣ ಸಾಧ್ಯ– ಡಾ. ಎಂ. ಬೈರೇಗೌಡ ಸಾಹಿತಿ ರಾಮನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.