ADVERTISEMENT

ರಾಮನಗರ | ಹಿಂದುಳಿದವರು ರಾಜಕೀಯ ಶಕ್ತಿಯಾಗಲಿ: ಕೆ. ಶೇಷಾದ್ರಿ ಶಶಿ

ಹಿಂದುಳಿದ ಜಾತಿಗಳ ಮಹಾ ಒಕ್ಕೂಟದಿಂದ ಸಭೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 2:30 IST
Last Updated 19 ಸೆಪ್ಟೆಂಬರ್ 2025, 2:30 IST
   

ರಾಮನಗರ: ‘ಹಿಂದುಳಿದ ವರ್ಗದವರು ಪಕ್ಷಾತೀತವಾಗಿ ಒಗ್ಗಟ್ಟಾಗಬೇಕು. ಆಗ ಮಾತ್ರ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಾಧ್ಯ. ಅದಕ್ಕಾಗಿ ಎಲ್ಲಾ ಜಾತಿಗಳು ಸಂಘಟಿತರಾಗಬೇಕು. ಆಗ ಮಾತ್ರ ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಹಿಂದುಳಿದವರನ್ನು ಕಡೆಗಣಿಸದೆ, ನಮ್ಮ ಆಶೋತ್ತರಗಳಿಗೆ ಸ್ಪಂದಿಸುತ್ತವೆ’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜಯಂತಿ ಆಚರಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ, ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಜಿಲ್ಲಾ ಘಟಕವು ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಸಮುದಾಯಗಳನ್ನು ಸಂಘಟಿಸಿಕೊಂಡು, ಅವರ ದನಿಯಾಗಿ ಕೆಲಸ ಮಾಡಿರಷ್ಟೇ ಒಕ್ಕೂಟ ಬಲಿಷ್ಠವಾಗಿ ಬೆಳೆಯಲಿದೆ. ಸಂಘಟನೆ ಆರಂಭಿಸುವುದು ಸುಲಭ. ಆದರೆ, ಮುಂದುವರಿಸಿಕೊಂಡು ಹೋಗುವುದು ಕಷ್ಟದ ಕೆಲಸ. ಎಲ್ಲವನ್ನು ತಾಳ್ಮೆಯಿಂದ ನಿಭಾಯಿಸಬೇಕು’ ಎಂದು ಹೇಳಿದರು.

ADVERTISEMENT

‘ಹಿಂದುಳಿದವರ ಮೇರು ನಾಯಕ ಅರಸು ಅವರು ಎಷ್ಟೇ ಸಮಾಜಮುಖಿ ಹಾಗೂ ಕ್ರಾಂತಿಕಾರಕ ಕೆಲಸ ಮಾಡಿದರೂ ಕೊನೆಗಾಲದಲ್ಲಿ ಕಷ್ಟಕ್ಕೆ ಸಿಲುಕಿದರು. ಸಂಘಟನೆಗಳು ಸದೃಢವಾಗಿ ನಿಸ್ವಾರ್ಥವಾಗಿ ಹೋರಾಡುವ ಸಮುದಾಯದ ನಾಯಕರ ಬೆನ್ನಿಗೆ ನಿಂತು ಶಕ್ತಿ ತುಂಬಬೇಕು. ಜಿಲ್ಲೆಯಾದ್ಯಂತ ಕುರುಬ, ಬೆಸ್ತ, ಕುಂಬಾರ, ಸವಿತ, ಗೊಲ್ಲ, ಬಲಿಜ, ಈಡಿಗ ಸೇರಿದಂತೆ ಹಿಂದುಳಿದ 103 ಸಣ್ಣಪುಟ್ಟ ಜಾತಿಗಳನ್ನು ಸಹ ಒಕ್ಕೂಟದ ವ್ಯಾಪ್ತಿಗೆ ತಂದು ಸಂಘಟಿಸಬೇಕು’ ಎಂದು ಸಲಹೆ ನೀಡಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜ್ ಮಾತನಾಡಿ, ‘ಕಾರ್ಯಕ್ರಮವು ಹಿಂದುಳಿದ ವರ್ಗಗಳ ಒಗ್ಗಟ್ಟಿನ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ. ಅಂದು ಎಲ್ಲಾ ಹಿಂದುಳಿದ ಸಮುದಾಯಗಳ ಸಂಸ್ಕೃತಿ ಪ್ರತಿಬಿಂಬಿಸುವ ಸ್ತಬ್ಧಚಿತ್ರ ಪ್ರದರ್ಶಿಸಲಾಗುವುದು. ಅರಸು ಭಾವಚಿತ್ರದ ಮೆರವಣಿಗೆ ನಡೆಸಲಾಗುವುದು. ಕಾರ್ಯಕ್ರಮದಲ್ಲಿ 25 ಸಾವಿರ ಜನ ಸೇರುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

ಕುಂಬಾರ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಡಾ. ಶಿವಕುಮಾರ ಚೌಡಶೆಟ್ಟಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ವಿ. ನಾರಾಯಣ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಶಿಕಲಾ ಚೌಡಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ಜೆಡಿಎಸ್ ವಕ್ತಾರ ಬಿ. ಉಮೇಶ್, ಬಿಜೆಪಿ ಮುಖಂಡ ಸುರೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್, ಮುಖಂಡರಾದ ಶ್ರೀನಿವಾಸ್, ಮಾದೇಶ್, ಬಸವರಾಜ್, ಟಿ. ಕೃಷ್ಣಪ್ಪ, ರಂಗಪ್ಪ, ಕರವೇ ರಾಜು ಹಾಗೂ ಇತರರು ಇದ್ದರು.

‘ಸಾಮಾಜಿಕ ನ್ಯಾಯಕ್ಕಾಗಿ ಸಮೀಕ್ಷೆ’

‘ಸಾಮಾಜಿಕ ನ್ಯಾಯದ ಸಾಕಾರಕ್ಕಾಗಿ ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದೆ. ಪ್ರತಿ ಕುಟುಂಬದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ ಗೊತ್ತಾದಾಗ ಮಾತ್ರ ಸರ್ಕಾರಿ ಸೌಲಭ್ಯಗಳನ್ನು ಎಲ್ಲರಿಗೂ ಸಮರ್ಪಕವಾಗಿ ಹಂಚಲು ಸಾಧ್ಯ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕ್ರಾಂತಿಕಾರಕ ತೀರ್ಮಾನ ಕೈಗೊಂಡಿದೆ. ಇತ್ತೀಚೆಗೆ ಪ್ರಬಲ ಸಮುದಾಯಗಳು ಸಹ ಮೀಸಲಾತಿಗೆ ಹೋರಾಟ ಮುಂದುವರೆಸಿವೆ. ಈ ಎಲ್ಲ ಬೆಳವಣಿಗೆಗಳ ನಿಟ್ಟಿನಲ್ಲಿ ಹಿಂದುಳಿದವರ ಸಂಘಟನೆ ಅತಿ ಅಗತ್ಯ. ಅರಸು ಜಯಂತಿ ಕಾರ್ಯಕ್ರಮವು ಜಿಲ್ಲೆಯ ಹಿಂದುಳಿದ ಸಮುದಾಯಗಳ ಸಂಗಮ ಮತ್ತು ಜಾಗೃತಿಗೆ ವೇದಿಕೆಯಾಗಲಿ’ ಎಂದು ಕೆ. ಶೇಷಾದ್ರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.