ADVERTISEMENT

ವೃಷಭಾವತಿಯೇ ಈ ಊರಿಗೆ ವರ–ಶಾಪ

ಬೈರಮಂಗಲ ಗ್ರಾಮಕ್ಕೆ ಬೇಕು ಇನ್ನಷ್ಟು ಸೌಲಭ್ಯ l ಅಧಿಕಾರಶಾಹಿ ನಿರ್ಲಕ್ಷ್ಯಕ್ಕೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 2:40 IST
Last Updated 8 ಜೂನ್ 2022, 2:40 IST
ಬೈರಮಂಗಲ ಮಧ್ಯೆ ಇರುವ ನಾಲ್ಕು ಪಥದ ರಸ್ತೆ
ಬೈರಮಂಗಲ ಮಧ್ಯೆ ಇರುವ ನಾಲ್ಕು ಪಥದ ರಸ್ತೆ   

ಬಿಡದಿ: ಬೈರಮಂಗಲ ಎಂದರೆ ಮೊದಲಿಗೆ ನೆನಪಾಗುವುದು ವೃಷಭಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೆರೆ.

ಒಂದು ಕಾಲದಲ್ಲಿ ಬೈರಮಂಗಲವು ಹೆಚ್ಚು ಕಬ್ಬನ್ನು ಬೆಳೆಯುವ ಪ್ರದೇಶವಾಗಿತ್ತು. ಇಲ್ಲಿ ಬೆಳೆದ ಬೆಲ್ಲಕ್ಕೆ ಉತ್ತಮ ಹೆಸರಿತ್ತು.

ಇಂದಿಗೂ ಈ ಪ್ರದೇಶದಲ್ಲಿ ಹೆಚ್ಚಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಇಡೀ ವರ್ಷ ಪೂರ್ತಿಯಾಗಿ ವೃಷಭಾವತಿ ಹರಿಯುತ್ತಿದ್ದು, ಕೃಷಿಗೆ ಆಧಾರವಾಗಿದೆ. ಆದರೆ, ಅದೇ ಅನೇಕ ತೊಡಕುಗಳಿಗೂ ಕಾರಣವಾಗಿದೆ. ಈ ಗ್ರಾಮದಲ್ಲಿ ಸುಮಾರು 550 ಕುಟುಂಬಗಳಿದ್ದು, 1,750 ಜನಸಂಖ್ಯೆಯನ್ನು ಹೊಂದಿದೆ. ಕಾಲ ಬದಲಾವಣೆ ಆದಂತೆಲ್ಲ ನದಿಗೆ ರಾಸಾಯನಿಕ ಮಿಶ್ರಿತ ನೀರಿನಿಂದ ವೃಷಭಾವತಿ ವಿಷದ ಒಡಲಾಗಿದ್ದು, ಕೃಷಿ ಚಟುವಟಿಕೆಗಳು ರೈತನ ಕೈ ಹಿಡಿಯುತ್ತಿಲ್ಲ. ಇಲ್ಲಿ ಹೆಚ್ಚು ಜನರು ರೇಷ್ಮೆ ಮತ್ತು ಹೈನುಗಾರಿಕೆಯನ್ನು ಅವಲಂಬಿತರಾಗಿದ್ದಾರೆ. ಬೈರಮಂಗಲದಿಂದ ಪೂರ್ವಕ್ಕೆ 8 ಕಿ.ಮೀ ದೂರದಲ್ಲಿ ಹಾರೋಹಳ್ಳಿ ಕೈಗಾರಿಕಾ ಪ್ರದೇಶ, ಪಶ್ಚಿಮಕ್ಕೆ ಇರುವ ಬಿಡದಿ ಕೈಗಾರಿಕಾ ಪ್ರದೇಶವಿದ್ದು, ಇಲ್ಲಿನ ಯುವಕರು ಉದ್ಯೋಗ ಅರಸಿ ಹೋಗುತ್ತಿದ್ದಾರೆ.

ADVERTISEMENT

ಹೈನುಗಾರಿಕೆ ಅವಲಂಬಿಸಿರುವ ಕುಟುಂಬಗಳು ಹೆಚ್ಚಿದ್ದು, ನಿತ್ಯ ಒಂದು ಸಾವಿರ ಲೀಟರ್‌ಗೂ ಹೆಚ್ಚು ಹಾಲು ಸಂಗ್ರಹ ಆಗುತ್ತಿದೆ. ಜೊತೆಗೆ, ರೇಷ್ಮೆ ಕೃಷಿ ಕೂಡ ಹೆಚ್ಚಿನ ಪ್ರಮಾಣದಲ್ಲಿದೆ. ಕಾಲ ಕಳೆದಂತೆಲ್ಲ ಈ ಊರು ಕೈಗಾರಿಕೀಕರಣಕ್ಕೆ ತನ್ನನ್ನು ಹೆಚ್ಚು ತೆರೆದುಕೊಳ್ಳುತ್ತಿದೆ. ಬೈರಮಂಗಲ ಹೋಬಳಿ ಕೇಂದ್ರವಾಗಿದ್ದರೂ ಇಲ್ಲಿ ಯಾವುದೇ ರೀತಿಯ ಬಸ್ ನಿಲ್ದಾಣ ಇಲ್ಲ. ಪುರಾತನ ಒಂದು ಸರ್ಕಾರಿ ಶಾಲೆಯಿದ್ದು, ಅದು ಶಿಥಿಲಾವಸ್ಥೆ ತಲುಪಿದೆ. ಹೀಗಾಗಿ, ಪ್ರೌಢಶಾಲೆಯಲ್ಲಿಯೇ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೂ ಪಾಠ ಹೇಳಿಕೊಡಲಾಗುತ್ತಿದೆ.

ಈ ಗ್ರಾಮದಲ್ಲಿ ಎರಡು ಕೈಗಾರಿಕಾ ಪ್ರದೇಶಗಳನ್ನು ಸೇರಿಸುವ ರಸ್ತೆ ಸಂಪರ್ಕ ಉತ್ತಮವಾಗಿ ಇರುವುದು ಬಿಟ್ಟರೆ ಬೇರೆ ಏನು ಗುರುತಿಸುವಂತಹ ಪ್ರಗತಿ ಆಗಿಲ್ಲ. ಇತ್ತೀಚೆಗಷ್ಟೇ ಸರ್ಕಾರಿ ಪದವಿಪೂರ್ವ ಕಾಲೇಜು ಆರಂಭ ಆಗಿದೆ. ವಾಣಿಜ್ಯ ಬ್ಯಾಂಕ್, ಅಂಚೆ ಕಚೇರಿ ಮೊದಲಾದ ಸೌಲಭ್ಯಗಳು ಇವೆ. ಖಾಸಗಿ ಕಂಪನಿಗಳ ನೆರವಿನೊಂದಿಗೆ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣ ಆಗಿದ್ದು, ಇದರಿಂದ ಜನರಿಗೆ ಅನುಕೂಲ ಆಗಿದೆ. ಇದು ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು, ಸಂಪೂರ್ಣವಾಗಿ ಬಯಲು ಮುಕ್ತ ಶೌಚಾಲಯವನ್ನು ಯಶಸ್ವಿಯತ್ತ ಮುನ್ನಡಿಸುತ್ತಿದೆ. ವೃಷಭಾವತಿ ವಿಚಾರದಲ್ಲಿ ಈ ಗ್ರಾಮವನ್ನು ಶಾಪಗ್ರಸ್ಥ ಗ್ರಾಮವೆಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮಳೆ ಬಿದ್ದರೆ, ಅಲ್ಲಿರುವ ರಾಸಯನಿಕ ಮಿಶ್ರಿತ ನೀರು ಹಾಗೂ ಕಾರ್ಖಾನೆಗಳ ಕಲುಷಿತ ನೀರು ಈ ಕೆರೆಗೆ ಸೇರಿ ತನ್ನ ನೈಜ ಸ್ಥಿತಿಯನ್ನೇ ಕಳೆದುಕೊಂಡಿದೆ. ಸದ್ಯ ಕೆರೆಯ ನವೀಕರಣ ಕಾಮಗಾರಿ ನಡೆದಿದ್ದು, ಈ ಮೂಲಕವಾದರೂ ಗ್ರಾಮದ ಶಾಪ ವಿಮೋಚನೆ ಆಗಲಿ ಎಂಬುದು ಜನರ ಆಶಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.