ADVERTISEMENT

ಬೆಲೆ ಕುಸಿತ; ಪಚ್ಚೆ ಬಾಳೆ ಬೆಳೆದು ಪೆಚ್ಚಾದ ಮಾಗಡಿ ರೈತ!

ಕಂಗಾಲಾದ ಬೆಳೆಗಾರ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 2:36 IST
Last Updated 3 ನವೆಂಬರ್ 2025, 2:36 IST
<div class="paragraphs"><p>ರೈತ ನರಸಿಂಹಮೂರ್ತಿ ಬೆಳೆ ಪಚ್ಚ ಬಾಳೆ ಕೊನೆ ತೋರಿಸುತ್ತಿರುವುದು</p></div>

ರೈತ ನರಸಿಂಹಮೂರ್ತಿ ಬೆಳೆ ಪಚ್ಚ ಬಾಳೆ ಕೊನೆ ತೋರಿಸುತ್ತಿರುವುದು

   

ಮಾಗಡಿ: ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿನ ಬೆಲೆಯಲ್ಲಿ ಭಾರಿ ಏರಿಳಿತದಿಂದಾಗಿ ಅತಿ ಹೆಚ್ಚು ಬಾಳೆ ಬೆಳೆಯುವ ತಾಲ್ಲೂಕಿನ ಬೆಳೆಗಾರರು ಕಂಗಾಲಾಗಿದ್ದಾರೆ. 

ಈ ಬಾರಿ ಪಚ್ಚೆ ಬಾಳೆ ಭರ್ಜರಿ ಫಸಲು ಬಂದಿದೆ. ಆದರೆ, ಮಾರುಕಟ್ಟೆಯಲ್ಲಿ ಕೇಳುವವರು ಇಲ್ಲದಂತಾಗಿದೆ. ಮಂಡಿಗೆ ಬಾಳೆಹಣ್ಣಿನ ಗೊನೆ ಸಾಗಿಸಲು ಕೆ.ಜಿಗೆ ಆರು ರೂಪಾಯಿ ಕೂಲಿ ಕೇಳುತ್ತಿದ್ದಾರೆ. 

ADVERTISEMENT

ಮಾರುಕಟ್ಟೆಗೂ ಸಾಗಿಸುವ ವೆಚ್ಚ ಭರಿಸಲಾಗದ ರೈತರು ಕಟಾವಿಗೆ ಬಂದಿರುವ ಎಕರೆ ಗಟ್ಟಲೆ ಬಾಳೆಯನ್ನು ಕಟಾವು ಮಾಡದೆ ಕೈಚೆಲ್ಲಿದ್ದಾರೆ.

ತಾಲ್ಲೂಕಿನ ಚಕ್ರಬಾವಿ ಸಮೀಪ ನರಸಿಂಹಮೂರ್ತಿ ಎಂಬುವರು ನಾಲ್ಕು ಎಕರೆ ತೋಟದಲ್ಲಿ ₹2.50 ಲಕ್ಷ ವೆಚ್ಚದಲ್ಲಿ ಸಾವಯವ ಪದ್ಧತಿಯಲ್ಲಿ ಪಚ್ಚೆ ಬಾಳೆ ಬೆಳೆದಿದ್ದು, ಉತ್ತಮ ಫಸಲು ಬಂದಿದೆ. ಒಂದು ಬಾಳೆಗೊನೆ ಅಂದಾಜು 40 ರಿಂದ 50 ಕೆ.ಜಿ ತೂಗುತ್ತದೆ.

ನಾಲ್ಕು ಎಕರೆ ತೋಟದಲ್ಲಿ 2,500 ಬಾಳೆ ಗಿಡಿ ಬೆಳೆದಿದ್ದ ನರಸಿಂಹಮೂರ್ತಿ ₹20 ಲಕ್ಷ ಆದಾಯ ನಿರೀಕ್ಷಿಸಿದ್ದರು. ಒಂದು ಬಾಳೆ ಗೊನೆ 40 ಕೆ.ಜಿ ತೂಕವಿದ್ದು ಕೆ.ಜಿಗೆ ಇಪ್ಪತ್ತು ರೂಪಾಯಿ ಸಿಕ್ಕಿದ್ದರೂ ಗೊನೆಗೆ ₹800 ಸಿಗುತ್ತಿತ್ತು. ಎರಡೂವರೆ ಲಕ್ಷ ವೆಚ್ಚ ಕಳೆದರೆ ₹17 ಲಕ್ಷ ಲಾಭವಾಗುತ್ತಿತ್ತು. ಈಗ ನೋಡಿದರೆ ಹಾಕಿದ ಬಂಡವಾಳ ಕೂಡ ಬಾರದಂತಾಗಿದೆ ಎನ್ನುತ್ತಾರೆ ನರಸಿಂಹಮೂರ್ತಿ.

ಕಟಾವಿಗೆ ಬಂದ ಸಮಯದಲ್ಲಿ ಸಗಟು ಮಾರುಕಟ್ಟೆಯಲ್ಲಿ ಪಚ್ಚೆ ಬಾಳೆ ಬೆಲೆ ಕುಸಿದಿದೆ. ಇದೇ ಬೆಲೆಗೆ ಮಾರಾಟ ಮಾಡಿದರೆ ಬಂಡವಾಳ ಮರಳಿ ಬರುವುದು ದೂರದ ಮಾತು. ಕೂಲಿ ಮತ್ತು ಸಾಗಾಣಿಕೆ ವೆಚ್ಚ ಕೂಡ ಮರಳಿ ಬರಲ್ಲ ಎನ್ನುವ ಸ್ಥಿತಿ ಇದೆ.

ಮಾಗಡಿ ತಾಲ್ಲೂಕಿನಲ್ಲಿ ಕೆಲವು ದಿನಗಳಿಂದ ಮೋಡ ಮುಸುಕಿದ ವಾತಾವರಣ ಮತ್ತು ತುಂತುರು ಮಳೆ ಇದ್ದು ಗ್ರಾಹಕರು ಬಾಳೆ ಹಣ್ಣು ಖರೀದಿಸಲು ಹಿಂಜರಿಯುತ್ತಿದ್ದಾರೆ.

ನೆಲಕ್ಕೆ ಬಾಗಿರುವ ಬಾಳೆಗೊನೆಗಳನ್ನು ಹಾಗೆಯೇ ತೋಟದಲ್ಲಿ ಬಿಟ್ಟರೆ ನೊಣಗಳ ಕಾಟ ಹೆಚ್ಚಾಗಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ತೋಟಕ್ಕೆ ಕಾಲಿಡಲಾಗದ ಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ನೆಂಟರು, ಪರಿಚಿತರು ಮತ್ತು ಸ್ನೇಹಿತರಿಗೆ ಉಚಿತವಾಗಿ ಬಾಳೆ ಗೊನೆಗಳನ್ನು ಕೊಡುತ್ತಿದ್ದೇವೆ ಎಂದು ಬೆಳೆಗಾರರು ಹೇಳುತ್ತಾರೆ.

ಕೃಷಿಗೆ ಬಳಸುವ ರಸಗೊಬ್ಬರ ಕೀಟನಾಶಕಗಳಿಗೆ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ನಿಗದಿ ಮಾಡಿರುವ ಸರ್ಕಾರ ಅದೇ ರೀತಿ ರೈತರ ಬೆಳೆಗಳಿಗೂ ಎಂಆರ್‌ಪಿ ನಿಗದಿ ಮಾಡಬೇಕು. ಈ ರೀತಿ ಬೆಲೆ ಕುಸಿದಾಗ ಸರ್ಕಾರ ರೈತರ ನೆರವಿಗೆ ನಿಲ್ಲಬೇಕು.

-ಗೋವಿಂದರಾಜುತಾಲ್ಲೂಕು ಅಧ್ಯಕ್ಷ ರೈತ ಸಂಘ 

ಹಾಪ್‌ಕಾಮ್ಸ್‌ ಬಾಳೆಯನ್ನು ನಿಗದಿತ ಬೆಲೆಯಲ್ಲಿ ಕೊಂಡು ಸರ್ಕಾರಿ ಆಸ್ಪತ್ರೆ ಮತ್ತು ಜೈಲುಗಳಿಗೆವಿತರಿಸಬೇಕು. ಇದರಿಂದ ರೈತರಿಗೆ ನುಕೂಲವಾಗುತ್ತದೆ. ಇಲ್ಲವಾದರೆ ಮಾಗಡಿ ಮತ್ತು ರಾಮನಗರ ತಾಲ್ಲೂಕಿನ ಬಾಳೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ.

-ಹೊಸಪಾಳ್ಯ ಲೋಕೇಶ್ ಬಾಳೆ ಬೆಳೆಗಾರರು 

ಬಾಳೆಚಿಕ್ಕುಟೊಮ್ಯಾಟೊ ಹಾಗೂ ಇತರ ತೋಟಗಾರಿಕೆ ಬೆಳೆಗಳಿಗೆ ಸರ್ಕಾರ ಸಿ 2/50 ಅನುದಾನ ಬಿಡುಗಡೆ ಮಾಡಬೇಕು. ಶೇ.50 ವೆಚ್ಚ ಭರಿಸುವ ಮೂಲಕ ರೈತರ ನೆರವಿಗೆ ಸರ್ಕಾರ ನಿಲ್ಲಬೇಕು. ರೈತರಿಂದ ಸರ್ಕಾರ ನೇರವಾಗಿ ಬಾಳೆ ಖರೀದಿಸಿ ಸರ್ಕಾರಿ ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಜೊತೆ ಕೊಡುವ ಕೆಲಸ ಮಾಡಬೇಕು.

-ಬಗಿನಗೆರೆ ರಂಗಸ್ವಾಮಿ ಪ್ರಗತಿಪರ ರೈತ