ರಾಮನಗರ: ನಗರದ ಮಂಡಿಪೇಟೆಯಲ್ಲಿರುವ ನಗರದ ಶಕ್ತಿ ದೇವತೆ ಬನ್ನಿ ಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ ಮತ್ತು ಅಗ್ನಿಕೊಂಡ ಮಹೋತ್ಸವ ಇಂದು ಮತ್ತು ನಾಳೆ ನಡೆಯಲಿದೆ. ನಗರದಲ್ಲಿ ಮೊದಲು ಪ್ರಾರಂಭವಾಗಿದ್ದು ಬನ್ನಿ ಮಹಾಂಕಾಳಿ ಕರಗ. ಈಗ ನಗರದಲ್ಲಿ ಒಂಬತ್ತು ಕರಗಗಳ ಉತ್ಸವ ನಡೆಯುತ್ತದೆ.
ಮೊದಲು ಕರಗ ಮಧ್ಯರಾತ್ರಿ 2 ಗಂಟೆಗೆ ಪ್ರಾರಂಭವಾಗಿ, ನಗರದಲ್ಲಿ ಸಂಚರಿಸಿ ಬೆಳಿಗ್ಗೆ 5 ಗಂಟೆಗೆ ಎಲ್ಲಾ ಅಗ್ನಿಕೊಂಡ ಪ್ರವೇಶ ಮಾಡುತಿತ್ತು. ಆದರೆ, ಈಗ ನಗರದ ವ್ಯಾಪ್ತಿ ಹೆಚ್ಚಾಗಿದೆ. ಈಗ ರಾತ್ರಿ 10 ಗಂಟೆಗೆ ಕರಗ ದೇವಾಲಯದಿಂದ ಹೊರಟರೆ ಅಗ್ನಿಕೊಂಡ ಪ್ರವೇಶಿಸುವುದು ಬೆಳಿಗ್ಗೆ 8 ಗಂಟೆಯಾಗುತ್ತದೆ ಎಂದು ದೇವಾಲಯದ ಅರ್ಚಕ ಎಂ.ಎಸ್. ವಿನಯ್ ಕುಮಾರ್ ತಿಳಿಸಿದರು.
ಹಿನ್ನೆಲೆ: 400 ವರ್ಷಗಳ ಹಿಂದೆ ಮೈಸೂರು ಮಹಾರಾಜರ ಆಸ್ಥಾನದಲ್ಲಿದ್ದ ಭಕ್ಷಿ ಬಾಲಾಜಿ ಅವರು ಕೊಲ್ಲಾಪುರಕ್ಕೆ ಹೋಗಿದ್ದರು. ರಾತ್ರಿ ಅವರ ಕನಸಿನಲ್ಲಿ ದೇವಿ ಕಾಣಿಸಿಕೊಂಡು ತನಗೊಂದು ನೆಲೆ ಕಾಣಿಸುವಂತೆ ಬಾಲಾಜಿ ಅವರಲ್ಲಿ ಕೇಳಿದಳು. ಇದರಿಂದ ಸಂತೋಷಗೊಂಡ ಅವರು, ಎಲ್ಲಿ ಎಂದು ಕೇಳಿದರು. ದೇವಿಯು ‘ನಾನು ನಿನ್ನ ಬಂಡಿ ಹಿಂದೆ ಬರುತ್ತೇನೆ. ಎಲ್ಲಿ ನನ್ನ ಗೆಜ್ಜೆನಾದ ನಿಲ್ಲುತ್ತದೊ ಅಲ್ಲಿ ನನಗೆ ಗುಡಿ ಕಟ್ಟಿಸು’ ಎಂದು ತಿಳಿಸಿದಳು.
ಕೊಲ್ಲಾಪುರದಿಂದ ಮೈಸೂರಿಗೆ ಎತ್ತಿನಬಂಡಿಯಲ್ಲಿ ಹಿಂದಿರುಗುವಾಗ ಬಂಡಿ ಹಿಂದೆ ಬರುತ್ತಿದ್ದ ಗೆಜ್ಜೆನಾದ ಅಂದಿನ ಕ್ಲೋಸ್‌ಪೇಟೆ ಬಳಿ ಇದ್ದ ಬನ್ನಿಮರದ ಕೆಳಗೆ ನಿಂತಿತು. ಅದೇ ಸ್ಥಳದಲ್ಲಿ ತನ್ನನ್ನು ಪ್ರತಿಷ್ಠಾಪನೆ ಮಾಡುವಂತೆ ದೇವಿಯು ಬಾಲಾಜಿ ಅವರಿಗೆ ಸೂಚಿಸಿದಳು. ಆದ್ದರಿಂದ, ಬನ್ನಿ ಮರದ ಕೆಳಗೆ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ದೇವಿಯನ್ನು ಬಂಡಿ ಹಿಂದೆ ಬಂದ ಕಾರಣ ‘ಬಂಡಿ ಮಹಾಂಕಾಳಿ’ ಎಂತಲೂ ಮತ್ತು ಬನ್ನಿ ಮರದ ಕೆಳಗೆ ಸ್ಥಾಪಿತವಾಗಿದ್ದರಿಂದ ‘ಬನ್ನಿ ಮಹಾಂಕಾಳಿ’ ಎಂದೂ ಕರೆಯುತ್ತಾರೆ.
ಅಂದಿನಿಂದ ಇಂದಿನವರೆಗೂ ಕರಗದ ಮೂಲಕ ಅಮ್ಮನವರನ್ನು ವರ್ಷಕ್ಕೊಮ್ಮೆ ಆರಾಧಿಸಲಾಗುತ್ತದೆ. ಪ್ರಾರಂಭದಲ್ಲಿ ಧರ್ಮಲಿಂಗು ಎನ್ನುವವರು ಬೆಟ್ಟದ ಮಲ್ಲಿಗೆ ಮತ್ತು ಬೇವಿಸೊಪ್ಪಿನ ಕಳಸ ಹೊತ್ತು ಅಗ್ನಿಕೊಂಡ ಪ್ರವೇಶ ಮಾಡುತಿದ್ದರು. ಈಗ ಆರ್.ಎನ್. ಯೋಗೇಶ್ ಅವರುಜ ಕರಗವನ್ನು 21ನೇ ಬಾರಿಗೆ ಧರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.