ADVERTISEMENT

400 ವರ್ಷಗಳಿಂದ ಭಕ್ತರ ಆರಾಧನೆ

ನಾಳೆ ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 22 ಜುಲೈ 2018, 15:39 IST
Last Updated 22 ಜುಲೈ 2018, 15:39 IST
ಮಂಡಿಪೇಟೆಯಲ್ಲಿರುವ ಬನ್ನಿಮಹಾಂಕಾಳಿ ಅಮ್ಮನವರ ದೇವಾಲಯ
ಮಂಡಿಪೇಟೆಯಲ್ಲಿರುವ ಬನ್ನಿಮಹಾಂಕಾಳಿ ಅಮ್ಮನವರ ದೇವಾಲಯ   

ರಾಮನಗರ : ಇಲ್ಲಿನ ಮಂಡಿಪೇಟೆಯಲ್ಲಿರುವ ಬನ್ನಿಮಹಾಂಕಾಳಿ ನಗರದ ಶಕ್ತಿ ದೇವತೆ. ಸುಮಾರು 400 ವರ್ಷಗಳಿಂದ ಇಲ್ಲಿನ ಭಕ್ತರು ಆರಾಧಿಸುತ್ತಾ ಬಂದಿದ್ದಾರೆ.

ಇದೇ 24ರಂದು ಬನ್ನಿಮಹಾಂಕಾಳಿ ಅಮ್ಮನವರ ಕರಗ ಮಹೋತ್ಸವ, 25ರಂದು ಅಗ್ನಿಕೊಂಡ ಮಹೋತ್ಸವ ನಡೆಯಲಿದೆ.

ಹಿನ್ನೆಲೆ: ಮೈಸೂರು ರಾಜರ ಆಸ್ಥಾನದಲ್ಲಿದ್ದ ಭಕ್ಷಿ ಬಾಲಾಜಿ ಅವರು ಕೊಲ್ಲಾಪುರಕ್ಕೆ ಹೋಗಿದ್ದ ಸಂದರ್ಭದಲ್ಲಿ ರಾತ್ರಿಯ ವೇಳೆಯಲ್ಲಿ ಅವರಿಗೆ ಕನಸೊಂದು ಬಿದ್ದಿತ್ತು. ಅವರ ಕನಸಿನಲ್ಲಿ ದೇವಿ ಕಾಣಿಸಿಕೊಂಡು ತನಗೊಂದು ನೆಲೆ ಕಾಣಿಸುವಂತೆ ಭಕ್ಷಿ ಬಾಲಾಜಿ ಅವರಲ್ಲಿ ಕೋರಿದಳು.

ADVERTISEMENT

ಇದರಿಂದ ಸಂತೋಷಗೊಂಡ ಅವರು ಎಲ್ಲಿ ಎಂದು ಕೇಳಲಾಗಿ ದೇವಿಯು ‘ನಾನು ನಿನ್ನ ಬಂಡಿಯ ಹಿಂದೆ ಬರುತ್ತೇನೆ. ಎಲ್ಲಿ ನನ್ನ ಗೆಜ್ಜೆಯ ನಾದ ನಿಲ್ಲುತ್ತದೆಯೋ ಅಲ್ಲಿ ನನಗೆ ಗುಡಿಯನ್ನು ಕಟ್ಟಿಸು’ ಎಂದು ತಿಳಿಸಿದಳು ಎಂದು ಹಿರಿಯರು ಹೇಳುತ್ತಾರೆ.

ಕೊಲ್ಲಾಪುರದಿಂದ ಮೈಸೂರಿಗೆ ಎತ್ತಿನ ಬಂಡಿಯಲ್ಲಿ ಹಿಂದಿರುಗುವಾಗ ಎತ್ತಿನ ಬಂಡಿ ಹಿಂದೆ ಬರುತ್ತಿದ್ದ ಗೆಜ್ಜೆಯ ನಾದ ಅಂದಿನ ಕ್ಲೋಸ್ ಪೇಟೆ ಬಳಿಯಲ್ಲಿದ್ದ ಬನ್ನಿ ಮರದ ಕೆಳಗೆ ನಿಂತಿತು. ಈ ಸ್ಥಳದಲ್ಲಿ ತನ್ನನ್ನು ಪ್ರತಿಷ್ಠಾಪನೆ ಮಾಡುವಂತೆ ದೇವಿ ಭಕ್ಷಿ ಬಾಲಾಜಿಯನ್ನು ಕೋರಿದಳು. ಆದ್ದರಿಂದ ಬನ್ನಿ ಮರದ ಕೆಳಗೆ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಅಂದಿನಿಂದ ದೇವಿಯನ್ನು ಬಂಡಿ ಹಿಂದೆ ಬಂದ ಕಾರಣ ‘ಬಂಡಿ ಮಹಾಂಕಾಳಿ’ ಎಂತಲೂ ಮತ್ತು ಬನ್ನಿ ಮರದ ಕೆಳಗೆ ಸ್ಥಾಪಿತವಾಗಿದ್ದರಿಂದ ‘ಬನ್ನಿ ಮಹಾಂಕಾಳಿ’ ಎಂತಲೂ, ಎರಡು ಹೆಸರಿನಿಂದ ಕರೆಯುತ್ತಾರೆ ಎಂದುಅವರು ತಿಳಿಸುತ್ತಾರೆ.

ಅಂದಿನಿಂದ ಇಂದಿನವರೆಗೂ ಅಮ್ಮನವರನ್ನು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಕರಗದ ಮೂಲಕ ಆರಾಧಿಸಲಾಗುತ್ತದೆ. ಪ್ರಾರಂಭದಲ್ಲಿ ಧರ್ಮಲಿಂಗು ಎನ್ನುವವರು ಬೆಟ್ಟದ ಮಲ್ಲಿಗೆ ಮತ್ತು ಬೇವಿಸೊಪ್ಪಿನ ಕಳಸ ಹೊತ್ತು ಅಗ್ನಿಕೊಂಡ ಪ್ರವೇಶ ಮಾಡುತಿದ್ದರು. ಈಗ ಆರ್‌.ಎನ್. ಯೋಗೇಶ್‌ ಕರಗವನ್ನು ಧರಿಸುತ್ತಿದ್ದಾರೆ.

‘ರಾಮನಗರದಲ್ಲಿ ಬನ್ನಿಮಹಾಂಕಾಳಿ ಕರಗವೇ ಮೊದಲು ಪ್ರಾರಂಭವಾಗಿದ್ದು, ಈಗ ನಗರದಲ್ಲಿ ಒಂಬತ್ತು ಕರಗಗಳ ಉತ್ಸವ ನಡೆಯುತ್ತದೆ. ಮೊದಲು ಕರಗ ಮಧ್ಯರಾತ್ರಿ 2 ಗಂಟೆಗೆ ಪ್ರಾರಂಭವಾಗಿ ನಗರದಲ್ಲಿ ಸಂಚರಿಸಿ ಬೆಳಿಗ್ಗೆ 5 ಗಂಟೆಗೆಲ್ಲಾ ಅಗ್ನಿಕೊಂಡ ಪ್ರವೇಶ ಮಾಡುತಿತ್ತು’ ಎಂದು ದೇವಾಲಯದ ಅರ್ಚಕ ಎಂ.ಎಸ್. ವಿನಯ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ರಾಮನಗರ ನಗರ ವ್ಯಾಪ್ತಿ ಹೆಚ್ಚಾಗಿ ಬೆಳೆಯುತ್ತಿದೆ. ಈಗ ರಾತ್ರಿ 10 ಗಂಟೆಗೆ ಕರಗ ದೇವಾಲಯದಿಂದ ಹೊರಟರೆ ಅಗ್ನಿಕೊಂಡ ಪ್ರವೇಶಿಸುವುದು ಬೆಳಿಗ್ಗೆ 8 ಗಂಟೆಯಾಗುತ್ತದೆ’ ಎಂದರು.

ರೋಗರುಜಿನ ಬರುವುದಿಲ್ಲ : ‘ಬನ್ನಿಮಹಾಂಕಾಳಿ ದೇವಿಯು ಪ್ರತಿಷ್ಠಾಪನೆಗೊಂಡಾಗಿನಿಂದಲೂ ಇದುವರೆಗೆ ಹಳೆ ರಾಮನಗರ ಪ್ರಾಂತ್ಯದ ಭಾಗದಲ್ಲಿ ಯಾವುದೇ ಸಾಮೂಹಿಕ ಕಾಯಿಲೆಗಳಾಗಲಿ ಅಥವಾ ರೋಗ ರುಜಿನಗಳಾಗಲಿ ಬರುವುದಿಲ್ಲ ಎಂಬುದು ಇಲ್ಲಿನ ನಾಗರಿಕರ ನಂಬಿಕೆಯಾಗಿದೆ’ ಎಂದು ಹಿರಿಯ ಅರ್ಚಕ ಎಂ.ಎಸ್. ಸತ್ಯನಾರಾಯಣ ತಿಳಿಸಿದರು.

ಸ್ಮಾರಕ: ‘ರಾಮನಗರಕ್ಕೆ ಕ್ಲೋಸ್ ಪೇಟೆ ಎಂದು ನಾಮಕರಣವಾದ ಬಗ್ಗೆ ತಿಳಿಸುವ ಶಾಸನವನ್ನು ಈಗಿನ ಮಂಡಿಪೇಟೆಯ ಬನ್ನಿಮಹಾಂಕಾಳಿ ಅಮ್ಮನವರ ದೇಗುಲದ ಮುಂಭಾಗದಲ್ಲಿ ಕಾಣಬಹುದು. ಶಾಸನವನ್ನು ಮಣ್ಣು ಮತ್ತು ಗಾರೆಯಿಂದ ನಿರ್ಮಿಸಲಾಗಿದೆ. ಇಲ್ಲಿ ಕಂಬವೊಂದನ್ನು ಇರಿಸಲಾಗಿದೆ’ ಎಂದು ಉಪನ್ಯಾಸಕ ಜಿ.ಶಿವಣ್ಣ ಕೊತ್ತೀಪುರ ತಿಳಿಸಿದರು.

‘ಕ್ಲೋಸ್ ಪೇಟೆ ಶಾಸನದ ಶಿಲಾಸ್ಮಾರಕವನ್ನು ಕರ್ನಾಟಕ ರಾಜ್ಯ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯ ನಿರ್ದೇಶನಾಲಯ ಸಂರಕ್ಷಿಸಿ ಪ್ರಾಚೀನ ಸ್ಥಳವಸ್ತು (ಮಾನ್ಯುಮೆಂಟ್) ಎಂದು ಘೋಷಿಸಿದೆ. ವಿದ್ಯಾರ್ಥಿಗಳು, ಸಂಶೋಧಕರು ಈ ಸ್ಮಾರಕದ ಅಧ್ಯಯನ ಕೈಗೊಂಡರೆ ರಾಮನಗರದ ಮತ್ತಷ್ಟು ಇತಿಹಾಸ ತಿಳಿಯಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.