ADVERTISEMENT

ಸಮಾಜದಲ್ಲಿ ಬಸವ ಪ್ರಜ್ಞೆ ಜಾಗೃತಿಯಾಗಲಿ: ಶಿವಸಿದ್ದೇಶ್ವರ ಸ್ವಾಮೀಜಿ

ಬಸವ ಜಯಂತಿ - ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ; ವೇದಿಕೆಯಲ್ಲಿ ವಿವಿಧ ಮಠಾಧೀಶರ ಸಂಗಮ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 4:58 IST
Last Updated 27 ಸೆಪ್ಟೆಂಬರ್ 2025, 4:58 IST
<div class="paragraphs"><p>ರಾಮನಗರದ ಆರ್.ವಿ.ಸಿ.ಎಸ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಬಸವ ಜಯಂತಿ ಮತ್ತು ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮವನ್ನು&nbsp;ತುಮಕೂರಿನ ಸಿದ್ದಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ, ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಗಣ್ಯರು ಉದ್ಘಾಟಿಸಿದರು</p></div>

ರಾಮನಗರದ ಆರ್.ವಿ.ಸಿ.ಎಸ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಬಸವ ಜಯಂತಿ ಮತ್ತು ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮವನ್ನು ತುಮಕೂರಿನ ಸಿದ್ದಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ, ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಗಣ್ಯರು ಉದ್ಘಾಟಿಸಿದರು

   

ರಾಮನಗರ: ‘ಬಸವಣ್ಣ ಎಂದರೆ ಶಕ್ತಿ ಮತ್ತು ತತ್ವ. ಸಾರ್ವಕಾಲಿಕವಾದ ಅವರ ತತ್ವಾದರ್ಶದಲ್ಲಿ ಎಲ್ಲದಕ್ಕೂ ಪರಿಹಾರವಿದೆ. ಆ ನಿಟ್ಟಿನಲ್ಲಿ ಸಮಾಜದಲ್ಲಿ ಬಸವ ಪ್ರಜ್ಞೆ ಜಾಗೃತಿಯಾಗಬೇಕಿದೆ. ಆಗ ಮಾತ್ರ ಬಸವ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ’ ಎಂದು ತುಮಕೂರಿನ ಸಿದ್ಧಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದ ರಾಯರದೊಡ್ಡಿ ವೃತ್ತದಲ್ಲಿರುವ ಆರ್.ವಿ.ಸಿ.ಎಸ್ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ವೀರಶೈವ ಲಿಂಗಾಯತ ಸಂಘಟನೆಗಳು ಮತ್ತು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಮತ್ತು ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಆಶೀವರ್ಚನ ನೀಡಿದರು.

ADVERTISEMENT

‘ಬಸವಣ್ಣ ಪವಾಡ ಪುರುಷರೇನಲ್ಲ. 12ನೇ ಶತಮಾನದಲ್ಲಿ ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದ ಅವರು ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಮಹಾನ್ ವ್ಯಕ್ತಿಯಾಗಿ ರೂಪುಗೊಂಡರು. ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಕ್ರಾಂತಿ ಮಾಡಿದರು’ ಎಂದು ಅಭಿಪ್ರಾಯಪಟ್ಟರು.

‘ದಯೆಯೇ ಧರ್ಮದ ಮೂಲವಯ್ಯ ಎಂದ ಬಸವಣ್ಣ, ಧರ್ಮಕ್ಕೆ ಹೊಸ ಭಾಷ್ಯ ಬರೆದರು. ಕಳಬೇಡ, ಕೊಲಬೇಡ ಎಂಬ ವಚನದ ಮೂಲಕ ಉತ್ತಮ ಬದುಕಿನ ಮೂಲತತ್ವಗಳನ್ನು ಸಾರಿದರು. ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರು ಬಸವ ತತ್ವದ ಹಾದಿಯಲ್ಲಿ ಸಾಗಿದರು. ಜಾತಿ ಮತ್ತು ಧರ್ಮ ಮೀರಿ ಹಳ್ಳಿಗಳಿಗೆ ಬಸವ ಚಿಂತನೆಯನ್ನು ತಲುಪಿಸಿದರು’ ಎಂದು ಹೇಳಿದರು.

ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ‘ವಿಶ್ವ ಗುರು ಬಸವಣ್ಣನವರು ಈ ನಾಡಿಗೆ ಕೊಟ್ಟಿರುವ ಸಾಂಸ್ಕೃತಿಕ ಮತ್ತು ಸಾಹಿತ್ಯಕ ಕೊಡುಗೆ ಪರಿಗಣಿಸಿ ಕರ್ನಾಟಕ ಸರ್ಕಾರ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಒಂದು ವರ್ಷವಾಗಿದೆ. ಆ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಅಭಿಯಾನ ಹಮ್ಮಿಕೊಂಡು ಬಸವ ತತ್ವ ಮತ್ತು ಸಂಸ್ಕೃತಿಯ ಅರಿವು ಮೂಡಿಸಲಾಗುತ್ತಿದೆ’ ಎಂದರು.

ಗಮನ ಸೆಳೆದ ಸ್ತಬ್ಧಚಿತ್ರ: ನಗರಕ್ಕೆ ಬಂದ ಅಭಿಯಾನವನ್ನು ಅರ್ಚಕರಹಳ್ಳಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬಸವಣ್ಣ ಸೇರಿದಂತೆ ಶರಣರನ್ನು ಒಳಗೊಂಡ ಸ್ತಬ್ಧಚಿತ್ರಗಳು ಜನರ ಗಮನ ಸೆಳೆದವು. ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿದಂತೆ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದವು.

ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಮರಳೇ ಗವಿಮಠದ ಶಿವರುದ್ರ ಸ್ವಾಮೀಜಿ, ಮಾಗಡಿಯ ಗದ್ದಿಗೆ ಮಠದ ಮಹಾಂತ ಸ್ವಾಮೀಜಿ, ಚನ್ನಪಟ್ಟಣದ ವಿರಕ್ತ ಮಠದ ಶಿವರುದ್ರ ಸ್ವಾಮೀಜಿ, ಬೇವೂರಿನ ಮಹಾಂತ ಶ್ರೀ ಮಲ್ಲಿಕಾರ್ಜುನ ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಜಿಲ್ಲೆಯ ವಿವಿಧ ಮಠಗಳ ಸ್ವಾಮಿಜಿಗಳು, ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡ ಗೌತಮ್ ಗೌಡ, ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಶಂಕರಪ್ಪ ಎಂ.ಎಸ್., ಪ್ರಚಾರ ಸಮಿತಿ ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ ಹಾಗೂ ಇತರರು ಇದ್ದರು.

ಕಾರ್ಯಕ್ರಮಕ್ಕೆ ಮುಂಚೆ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನ
ಮೆರವಣಿಗೆಯಲ್ಲಿ ಗಮನ ಸೆಳೆದ ಬಸವಣ್ಣನವರ ಮೂರ್ತಿಯ ಸ್ತಬ್ಧಚಿತ್ರ. ಸಂಸದ ಡಾ. ಸಿ.ಎನ್. ಮಂಜುನಾಥ್ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ವಕ್ತಾರ ರುದ್ರದೇವರು ಹಾಗೂ ಇತರರು ಇದ್ದಾರೆ
ಕಾರ್ಯಕ್ರಮದ ಮೆರವಣಿಗೆಯಲ್ಲಿ ಗಮನ ಸೆಳೆದ ಬಸವಾದಿ ಶರಣರ ಸ್ತಬ್ಧಚಿತ್ರಗಳು

‘ಮಾನವ ಧರ್ಮ ಚಳವಳಿಗೆ ಸ್ಫೂರ್ತಿ’

‘ಬಸವಣ್ಣನ ಹೆಸರು ಸಾಮಾಜಿಕ ಮತ್ತು ಮಾನವ ಧರ್ಮದ ಚಳವಳಿಗೆ ಸ್ಫೂರ್ತಿಯಾಗಿದೆ. ಅವರ ಆಶಯಗಳೇ ನಮ್ಮ ಸಂವಿಧಾನದಲ್ಲಿ ಅಡಕವಾಗಿವೆ. ಅವರು ಸ್ಥಾಪಿಸಿದ ಅನುಭವ ಮಂಟಪ ಈ ದೇಶದ ಮೊದಲ ಸಂಸತ್ತು. ಇಂದು ಮನುಷ್ಯರ ನಡುವೆ ಕಂದಕಗಳು ಸೃಷ್ಟಿಯಾಗಿವೆ. ಅದಕ್ಕೆ ಕಾಲವನ್ನು ದೂರಬಾರದು.‌‌ ಬದಲಿಗೆ ಮನುಷ್ಯ ಬದಲಾಗಿದ್ದಾನೆ. ಆತನ ಅಪೇಕ್ಷೆ ನಿರೀಕ್ಷೆ ಜೀವನ ಶೈಲಿ ಬದಲಾಗಿದೆ. ನೆಮ್ಮದಿಯ ಬದುಕಿಗಾಗಿ ಬಸವಣ್ಣನವರ ತತ್ವಗಳ ಒಡನಾಟದ ಅಗತ್ಯವಿದೆ’ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.

‘ಹೆಣ್ಣಿಗೆ ಮೊದಲು ಸ್ವಾತಂತ್ರ್ಯ ಕೊಟ್ಟರು’

‘ವರ್ಣ ವ್ಯವಸ್ಥೆಯಿಂದ ನಲುಗಿದ್ದ ಸಮಾಜದ ಕೆಳ ವರ್ಗದವರು ಹಾಗೂ ಮಹಿಳೆಯರಿಗೆ ಮೊದಲಿಗೆ ಸ್ವಾತಂತ್ರ್ಯ ಕೊಟ್ಟವರು ಬಸವಣ್ಣ. ಅವರು ಮಾಡಿದ ಸಾಮಾಜಿಕ ಕ್ರಾಂತಿಯ ಪರಿಣಾಮ ದೊಡ್ಡದು. ಮೇಲು -ಕೀಳೆನ್ನದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ ಸಮ ಸಮಾಜ ನಿರ್ಮಾಣದ ಕನಸನ್ನು ಅಂದೇ ಕಂಡಿದ್ದರು. ಬಸವಣ್ಣನವರು ಈ ನಾಡಲ್ಲಿ ಜನಿಸದೆ‌ ಇದ್ದಿದ್ದರೆ ನಾವ್ಯಾರೂ ಇಂದು ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ’ ಎಂದು ನಾಗನೂರಿನ ಗುರುಬಸವ ಮಠದ ಬಸವಗಿತಾ ತಾಯಿ ಉಪನ್ಯಾಸ ನೀಡಿದರು.

ಮಾನವ ಧರ್ಮ ಸಾರಿದ ಮಹನೀಯ ಬಸವಣ್ಣ. ಕಾಯಕವೇ ಕೈಲಾಸ ಎಂದು ಸ್ವಾವಲಂಬನೆಯ ಬದುಕಿನ ಸಂದೇಶ ಕೊಟ್ಟರು. ಅವರ ಹಾಕಿಕೊಟ್ಟ ಹಾದಿಯಲ್ಲಿ ಸಮುದಾಯ ಸಾಗಬೇಕು.
– ಸಚ್ಚಿದಾನಂದ ಮೂರ್ತಿ, ಉಪಾಧ್ಯಕ್ಷ ಅಖಿಲ ಭಾರತ ವೀರಶೈವ ಲಿಂಗಾಯತ ಮಹಸಾಭಾ ಕೇಂದ್ರ ಸಮಿತಿ
ಕಾಯಕ ಮತ್ತು ದಾಸೋಹದ ಮಹತ್ವ ಸಾರಿದ ಬಸವಣ್ಣನವರು ಎಲ್ಲರನ್ನೂ ಒಳಗೊಂಡ ಸಾಮಾಜಿಕ ನ್ಯಾಯದ ಚಳವಳಿಗೆ ಅಂದೇ ಚಾಲನೆ ಕೊಟ್ಟಿದ್ದರು. ಅವರ ಚಿಂತನೆಗಳು ಸಾರ್ವಕಾಲಿಕ
– ಕೆ. ಶೇಷಾದ್ರಿ ಶಶಿ, ಅಧ್ಯಕ್ಷ ರಾಮನಗರ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.