ADVERTISEMENT

‘ಮಠದ ಅಭಿವೃದ್ಧಿಗೆ ಶ್ರಮಿಸಿದ ಸ್ವಾಮೀಜಿ’

ಅವ್ವೇರಹಳ್ಳಿಯ ದಾಸೋಹ ಮಠದ ಬಸವಲಿಂಗರಾಜ ಶಿವಾಚಾರ್ಯ ಸ್ವಾಮೀಜಿ ಪುಣ್ಯಾರಾಧನೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 2:29 IST
Last Updated 8 ಜುಲೈ 2025, 2:29 IST
ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ರಂಭಾಪುರಿ ಶಾಖಾಮಠ ದಾಸೋಹ ಮಠದ ಬಸವಲಿಂಗರಾಜ ಶಿವಾಚಾರ್ಯ ಸ್ವಾಮೀಜಿ ಅವರ ಪುಣ್ಯಾರಾಧನಾ ಕಾರ್ಯಕ್ರಮ ಮಠದ ಆವರಣದಲ್ಲಿ ಜರುಗಿತು. ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಭಕ್ತರು ಭಾಗವಹಿಸಿದ್ದರು
ರಾಮನಗರ ತಾಲ್ಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ರಂಭಾಪುರಿ ಶಾಖಾಮಠ ದಾಸೋಹ ಮಠದ ಬಸವಲಿಂಗರಾಜ ಶಿವಾಚಾರ್ಯ ಸ್ವಾಮೀಜಿ ಅವರ ಪುಣ್ಯಾರಾಧನಾ ಕಾರ್ಯಕ್ರಮ ಮಠದ ಆವರಣದಲ್ಲಿ ಜರುಗಿತು. ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ಭಕ್ತರು ಭಾಗವಹಿಸಿದ್ದರು   

ರಾಮನಗರ: ‘ಬಸವಲಿಂಗರಾಜ ಸ್ವಾಮೀಜಿ ಅವರು ಎಲ್ಲಾ ಸಮುದಾಯಗಳ ಭಕ್ತರ ಪ್ರೀತಿ ಗಳಿಸಿದ್ದರು. ಮಠದ ಕೀರ್ತಿಯನ್ನು ಉಳಿಸಿ ಬೆಳೆಸಿದರು. ಈ ಭಾಗದ ಭಕ್ತರಿಗೆ ಸನ್ಮಾರ್ಗ ತೋರಿದರು. ಮಠದ ಹೆಸರು ನಾಡಿನೆಲ್ಲೆಡೆ ಕೇಳಿ ಬರುವಂತೆ ಅಭಿವೃದ್ಧಿ ಮಾಡಿದರು’ ಎಂದು ಬೇವೂರಿನ ಮೃತ್ಯುಂಜಯ ಸ್ವಾಮೀಜಿ ಬಣ್ಣಿಸಿದರು.

ಇತ್ತೀಚೆಗೆ ಲಿಂಗೈಕ್ಯರಾದ ತಾಲ್ಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ರಂಭಾಪುರಿ ಶಾಖಾಮಠ ದಾಸೋಹ ಮಠದ ಬಸವಲಿಂಗರಾಜ ಶಿವಾಚಾರ್ಯ ಸ್ವಾಮೀಜಿ ಅವರ 11ನೇ ದಿನದ ಪುಣ್ಯಾರಾಧನಾ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

‘ಮಠ ಮತ್ತು ಭಕ್ತರ ಸೇವೆಗಾಗಿ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟಿದ್ದ ಶ್ರೀಗಳು ಎಲ್ಲಾ ವರ್ಗದವರ ಪ್ರೀತಿಗೆ ಪಾತ್ರರಾಗಿದ್ದರು. ಶ್ರೀಗಳು ಮಾಡಿರುವ ಮಾದರಿ ಕೆಲಸಗಳು ಎಲ್ಲರಿಗೂ ಮಾರ್ಗದರ್ಶಿಯಾಗಿವೆ. ಅವರ ತತ್ವಾದರ್ಶಗಳನ್ನು ಎಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ADVERTISEMENT

ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಸ್. ಯೋಗಾನಂದ ಮಾತನಾಡಿ, ‘ಸ್ವಾಮೀಜಿ ಅವರು ಬಹಳ ಪರಿಶ್ರಮಪಟ್ಟು ಮಠಕ್ಕೆ ಹೊಸ ಸ್ವರೂಪ ನೀಡಿದರು. ಸಾರಿಗೆ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿ ದೂರದ ಭಕ್ತರ ಮನೆಗೆ ಮಳೆ–ಗಾಳಿ ಲೆಕ್ಕಿಸದೆ ಸ್ಕೂಟರ್‌ನಲ್ಲೇ ಹೋಗಿ ಬರುತ್ತಿದ್ದರು. ಹೀಗಾಗಿ ಸ್ಕೂಟರ್ ಸ್ವಾಮೀಜಿ ಎಂದೇ ಹೆಸರಾಗಿದ್ದ ಅವರು, ಮಠವನ್ನು ದಾಸೋಹ ಮಠವನ್ನಾಗಿ ಬೆಳೆಸಿದರು’ ಎಂದು ಸ್ಮರಿಸಿದರು.

ರಾಮನಗರ ತಾಲ್ಲೂಕು ವೀರಶೈವ ಸಂಘದ ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಪೋಲೀಸ್ ಎಂ.ಎಸ್. ಶಂಕರಪ್ಪ, ಸರಗೂರಿನ ಬಸವರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿ, ಮರಳೇ ಗವಿಮಠದ ಶಿವರುದ್ರ ಸ್ವಾಮೀಜಿ, ವಿರಕ್ತ ಮಠದ ಶಿವರುದ್ರ ಸ್ವಾಮೀಜಿ, ಅಂಕನಹಳ್ಳಿ ಗವಿಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಚಿಕ್ಕಕಲ್ಬಾಳು ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಗುರುವಿನಪುರ ಮಠದ ಜಗದೀಶ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪುಣ್ಯಾರಾಧನೆ ಅಂಗವಾಗಿ ಕನಕಪುರದ ಸುವರ್ಣಾ ನೇತ್ರಾಲಯದಿಂದ ಉಚಿತ ನೇತ್ರ ತಪಾಸಣೆ ಶಿಬಿರ, ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ರಕ್ತನಿಧಿ ಕೇಂದ್ರದಿಂದ ರಕ್ತದಾನ ಶಿಬಿರ ನಡೆಯಿತು. ದಾಸೋಹ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಶಿಬಿರಕ್ಕೆ ಚಾಲನೆ ನೀಡಿದರು. ಮುಖಂಡರಾದ ಪೈಂಟ್ ರಾಜಣ್ಣ, ಶಿವಸ್ವಾಮಿ, ವಿಭೂತಿಕೆರೆ ಶಿವಲಿಂಗಯ್ಯ, ಕನಕಪುರ ಕೈಲಾಶ್, ನಾಯಂಡಳ್ಳಿ ಷಡಕ್ಷರಿ, ಅವ್ವೇರಹಳ್ಳಿ ಶಿವಲಿಂಗಯ್ಯ, ಅಕ್ಕಮಹಾದೇವಮ್ಮ, ಶಂಕರ್, ಮಹೇಶ್, ರವಿ, ಲಿಂಗೇಗೌಡ, ಯತೀಶ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.