ಚನ್ನಪಟ್ಟಣ: ನಗರದ ಬಡ ಬೀಡಿ ಕಾರ್ಮಿಕರಿಗೆ ಮನೆಗಳನ್ನು ನೀಡಲು ಚನ್ನಪಟ್ಟಣದ ಆಸುಪಾಸಿನಲ್ಲಿ ತಲೆ ಎತ್ತುತ್ತಿರುವ ವಸತಿಗೃಹಗಳ ಕಾಮಗಾರಿ ವೇಗವಾಗಿ ಸಾಗುತ್ತಿದೆ. ವರ್ಷಗಳಿಂದ ನೆಲೆಯೂರುವ ನಿರೀಕ್ಷೆಯಲ್ಲಿರುವ ಬೀಡಿ ಕಾರ್ಮಿಕರ ಸೂರು ಪಡೆಯುವ ಬಹುದಿನಗಳ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿವೆ.
ನಗರದ ಯಾರಬ್ ನಗರದ ಹಿಂಭಾಗ ಹೊನಗನಹಳ್ಳಿ ಬಳಿ ಸುಮಾರು 302 ಮನೆ, ಲಾಳಾಘಟ್ಟ ರಸ್ತೆಯ ಕೊತ್ತನಹಳ್ಳಿ ಬಳಿ ಸುಮಾರು 286 ಮನೆ ಸೇರಿದಂತೆ, ಒಟ್ಟು 588 ವಸತಿಗೃಹಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಜಿ+2 ಎರಡು ಅಂತಸ್ತಿನ ಒಂದೊಂದು ಕಟ್ಟಡದಲ್ಲಿ 12 ಮನೆಗಳು ಇರಲಿವೆ.
ಇಂತಹ ಹಲವು ಕಟ್ಟಡಗಳನ್ನು ಒಂದು ನಿರ್ದಿಷ್ಟ ಜಾಗದಲ್ಲಿ ಅಪಾರ್ಟ್‌ಮೆಂಟ್ ರೀತಿ ನಿರ್ಮಿಸಲಾಗುತ್ತಿದೆ. ಪ್ರತಿ ಮನೆಯಲ್ಲಿ ಒಂದು ಹಾಲ್, ಅಡುಗೆ ಮನೆ, ಒಂದು ಮಲಗುವ ಕೊಠಡಿ, ಅಟ್ಯಾಚ್ ಶೌಚಾಲಯ ಇರಲಿವೆ. ಸುಸಜ್ಜಿತವಾಗಿ ಕಟ್ಟಡ ನಿರ್ಮಾಣ ಮಾಡಲು ಯೋಜಿಸಲಾಗಿದ್ದು, ಕಾಮಗಾರಿ ಭರದಿಂದ ನಡೆಯುತ್ತಿದೆ.
ನಗರದಲ್ಲಿ ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ವಾಸಿಸುವ ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿತ್ತು. ಸಾಧಾರಣ ಮಳೆ ಬಂದರೂ ತಗ್ಗು ಪ್ರದೇಶದಲ್ಲಿರುವ ಕಾಲೊನಿಯ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗುತ್ತಿತ್ತು. ‘ನಮಗೊಂದು ಸೂರು ಕೊಡಿ’ ಎನ್ನುವ ಬೇಡಿಕೆಯನ್ನು ಕಾರ್ಮಿಕರು ಹಲವು ವರ್ಷಗಳಿಂದ ಸರ್ಕಾರ, ರಾಜಕಾರಣಿಗಳು, ಅಧಿಕಾರಿಗಳ ಮುಂದಿಟ್ಟು ಬೇಡುತ್ತಲೇ ಬಂದಿದ್ದಾರೆ.
ಕಳೆದ 2024ರಲ್ಲಿ ಚನ್ನಪಟ್ಟಣಕ್ಕೆ ಕಾರ್ಯಕ್ರಮ ನಿಮಿತ್ತ ಬಂದಿದ್ದ ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರನ್ನು ಭೇಟಿಯಾಗಿದ್ದ ಬೀಡಿ ಕಾರ್ಮಿಕರ ನಿಯೋಗವು, ಸೂರು ಕಲ್ಪಿಸುವಂತೆ ಮನವಿ ಮಾಡಿತ್ತು. ಆಗ ಸಚಿವರು, ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದ್ದರು. ಅದರಂತೆ, ವಸತಿ ಗೃಹಗಳು ನಿರ್ಮಾಣವಾಗುತ್ತಿವೆ.
‘ವಸತಿ ಗೃಹಗಳ ನಿರ್ಮಾಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಡಿ.ಕೆ. ಸುರೇಶ್, ಬೀಡಿ ಕಾರ್ಮಿಕರ ಸಹಕಾರ ಸಂಘದ ಅಧ್ಯಕ್ಷರು ಆಗಿರುವ ಶಾಸಕ ಸಿ.ಪಿ. ಯೋಗೇಶ್ವರ್, ಬಿಎಂಐಸಿ ಅಧ್ಯಕ್ಷ ರಘುನಂದನ್ ರಾಮಣ್ಣ, ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸೊಸೈಟಿ ಅಧ್ಯಕ್ಷ ರಹಮತ್ ಉಲ್ಲಾ ಸಖಾಫ್ ಸೇರಿದಂತೆ ಹಲವು ಗಣ್ಯರ ಸತತ ಪರಿಶ್ರಮವಿದೆ’ ಎಂದು ಬೀಡಿ ಕಾರ್ಮಿಕರ ಸಹಕಾರ ಸಂಘದ ಉಪಾಧ್ಯಕ್ಷ ಮಹಮದ್ ಆಲಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೇವಲ ಒಂದೇ ವರ್ಷದಲ್ಲಿ ಕಟ್ಟಡ ನಿರ್ಮಾಣ ಮಾಡಿ ಹಲವು ಮನೆಗಳಿಗೆ ಕಾಂಕ್ರೀಟ್ ಕೆಲಸ ಮುಗಿಸಿ ಸುಣ್ಣ ಬಳಿಯಲಾಗಿದೆ. ಕೆಲ ಮನೆಗಳ ಕೆಲಸ ಇನ್ನೂ ನಡೆಯುತ್ತಿದೆ. ಬೀಡಿ ಕಾರ್ಮಿಕರಿಗೆ ಶೀಘ್ರ ಮನೆಗಳನ್ನು ನೀಡುವ ಉದ್ದೇಶ ಹೊಂದಿರುವ ಕಾರಣ, ಕಾಮಗಾರಿಯನ್ನು ವೇಗವಾಗಿ ಮಾಡಲಾಗುತ್ತಿದೆ’ ಎಂದು ಹೇಳಿದರು.
ಪ್ರತಿ ಮನೆ ನಿರ್ಮಾಣಕ್ಕೆ ₹9.30 ಲಕ್ಷ ಖರ್ಚಾಗುತ್ತಿದೆ. ಪ್ರತಿ ಮನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಿಗುತ್ತಿರುವ ಅನುದಾನ ₹2.70 ಲಕ್ಷ ಮಾತ್ರ. ಉಳಿಕೆ ಮೊತ್ತ ₹6.60 ಲಕ್ಷವನ್ನು ಮನೆಯ ಫಲಾನುಭವಿಗಳಿಂದಲೇ ಸರ್ಕಾರ ಸಂಗ್ರಹಿಸಲಿದೆ. ಇಷ್ಟು ಮೊತ್ತವನ್ನು ಹೇಗೆ ಭರಿಸುವುದು ಎಂಬ ಚಿಂತೆ ಕಾರ್ಮಿಕರದ್ದಾಗಿದೆ.
‘ಪ್ರತಿದಿನ ಬೀಡಿಗಳನ್ನು ಸುತ್ತಿ ₹200–₹300 ಸಂಪಾದಿಸುವ ನಾವು ಜೀವನ ನಡೆಸುವುದೇ ಕಷ್ಟಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆ ಪಡೆಯಲು ₹6.60 ಲಕ್ಷ ಹಣವನ್ನು ಎಲ್ಲಿಂದ ತಂದು ಕೊಡುವುದು ಎಂಬ ಚಿಂತೆ ಶುರುವಾಗಿದೆ. ಸಾಲ ಮಾಡೋಣವೆಂದರೆ, ನಮಗೆ ಬ್ಯಾಂಕುಗಳ ಸೇರಿದಂತೆ ಎಲ್ಲೂ ಸಿಗದು. ಬಡ್ಡಿ ಸಾಲ ಮಾಡಿದರೆ ಬೀದಿಗೆ ಬರೋದು ಗ್ಯಾರಂಟಿ. ಹಾಗಾಗಿ, ಸರ್ಕಾರವೇ ಇದಕ್ಕೆ ಏನಾದರೂ ಪರಿಹಾರ ಹುಡುಕಬೇಕು’ ಎಂದು ಬೀಡಿ ಕಾರ್ಮಿಕರಾದ ಮಹಮದ್ ಸಲೀಂ, ಅಜೀಜ್, ಹಬೀಬ್ ನೋವು ತೋಡಿಕೊಂಡರು.
‘ಮನೆಯಲ್ಲಿರುವ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಬೀಡಿ ಸುತ್ತುತ್ತೇವೆ. ಬರುವ ಹಣದಲ್ಲಿ ಜೀವನ ನಡೆಸುವುದೇ ಕಷ್ಟ. ಉಳಿಕೆ ಹಣವನ್ನು ಸರ್ಕಾರವೇ ಭರಿಸಿದರೆ ನಮಗೂ ಒಂದು ಸೂರು ದೊರೆಯುತ್ತದೆ’ ಎಂದು ಮಹಿಳಾ ಬೀಡಿ ಕಾರ್ಮಿಕರಾದ ಜುಬೇದಾ, ಖಮರ್ ಬಾನು ಮನವಿ ಮಾಡಿದರು.
ಬೀಡಿ ಕಾರ್ಮಿಕ ಕುಟುಂಬಗಳಿಗೆ ನೀಡಲು ಸುಸಜ್ಜಿತ ಕಟ್ಟಡಗಳೊಂದಿಗೆ ಮನೆಗಳನ್ನು ನಿರ್ಮಿಸುತ್ತಿದ್ದರೂ, ಅವು ಶೀಘ್ರ ದೊರೆಯುತ್ತವೆ ಎನ್ನುವ ನಂಬಿಕೆ ಇಲ್ಲ. ಮನೆ ಪಡೆಯಲು ಫಲಾನುಭವಿಗಳು ಭರಿಸಬೇಕಾದ ಹಣವನ್ನು ಸಕಾಲದಲ್ಲಿ ಪಾವತಿಸಬೇಕು. ಆದರೆ, ಈ ಮೊತ್ತ ಭರಿಸುವುದು ಕಾರ್ಮಿಕರ ಪಾಲಿಗೆ ದೊಡ್ಡ ಸವಾಲಾಗಿದೆ. ಇಂತಹ ವಿಘ್ನಗಳು ದೂರವಾಗಿ ಬೀಡಿ ಕಾರ್ಮಿಕರ ಸೂರು ದೊರೆಯಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
2026ರ ಮಾರ್ಚ್ ವೇಳೆಗೆ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಕಾರ್ಮಿಕರು ಭರಿಸಲು ಬೇಕಾದ ಹೆಚ್ಚುವರಿ ಹಣಕ್ಕೆ ಬ್ಯಾಂಕುಗಳ ಮೊರೆ ಹೋಗಲಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ಬೀಡಿ ಕಾರ್ಮಿಕರ ಕನಸು ಮಾರ್ಚ್‌ನಲ್ಲಿ ನನಸಾಗಲಿದೆ– ಮಹಮದ್ ಆಲಿ ಉಪಾಧ್ಯಕ್ಷ ಬೀಡಿ ಕಾರ್ಮಿಕರ ಸಹಕಾರ ಸಂಘ ಚನ್ನಪಟ್ಟಣ
ನಮ್ಮ ಕುಟುಂಬಗಳಿಗೆ ಮನೆ ನೀಡುವ ಯೋಜನೆಯಿಂದ ಹೊಸ ಆಸೆ ಚಿಗುರಿದೆ. ಆದರೆ ಸರ್ಕಾರ ನಿಗದಿಪಡಿಸಿರುವ ₹6.60 ಲಕ್ಷ ನೀಡುವುದು ನಮಗೆ ಹೊರೆಯಾಗುತ್ತದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ನಮ್ಮ ಮೇಲಿನ ಹೊರೆ ಇಳಿಸಬೇಕು– ಹಬೀದಾ ಬಾನು ಬೀಡಿ ಕಾರ್ಮಿಕರು ಚನ್ನಪಟ್ಟಣ
ಬೀಡಿ ಕಾರ್ಮಿಕರು ಬರಿಸಬೇಕಾದ ಹೆಚ್ಚುವರಿ ಹಣದ ಬಗ್ಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಲ್ಲಿ ಮನವಿ ಮಾಡಿದ್ದೇವೆ. ಅವರು ಆದಷ್ಟು ಅನುದಾನ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಅಂದುಕೊಂಡಂತೆ ನಡೆದರೆ ಒಂದು ವರ್ಷದಲ್ಲಿ ಕಟ್ಟಡ ನಿರ್ಮಾಣ ಮಾಡುವ ಗುರಿ ಹೊಂದಿದ್ದೇವೆ.
ಸಿ. ಪಿ. ಯೋಗೇಶ್ವರ್, ಶಾಸಕರು, ಅಧ್ಯಕ್ಷ, ಬೀಡಿ ಕಾರ್ಮಿಕರ ಸಹಕಾರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.