ರಾಮನಗರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ–275ರಲ್ಲಿ ಶೇ 5ರಿಂದ ಶೇ 10ರವರೆಗೆ ಟೋಲ್ ಹೆಚ್ಚಳ ಮಾಡಿದೆ. ಪರಿಷ್ಕೃತ ದರ ಮಂಗಳವಾರದಿಂದಲೇ (ಏಪ್ರಿಲ್ 1) ಜಾರಿಗೆ ಬಂದಿದೆ.
ಬೆಂಗಳೂರು ನಗರ ಜಿಲ್ಲೆಯ ಕಣಿಮಿಣಿಕೆ ಹಾಗೂ ರಾಮನಗರ ಜಿಲ್ಲೆಯ ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಿಂದ ನಿಡಘಟ್ಟವರೆಗೆ ಶೇ 9ರಷ್ಟು ಹಾಗೂ ಮಂಡ್ಯ ಜಿಲ್ಲೆಯ ನಿಡಘಟ್ಟದಿಂದ ಶ್ರೀರಂಗಪಟ್ಟಣದ ಗಣಂಗೂರು ಟೋಲ್ ಪ್ಲಾಜಾವರೆಗೆ (ಮೈಸೂರುವರೆಗೆ) ಶೇ 5ರಷ್ಟು ಪರಿಷ್ಕರಿಸಲಾಗಿದೆ.
ಕಾರು, ವ್ಯಾನ್, ಜೀಪು, ಲಘು ವಾಹನ, ಮಿನಿ ಬಸ್, ಟ್ರಕ್, ಬಸ್, 2 ಆ್ಯಕ್ಸಲ್ ವಾಹನ, ಮೂರು ಆ್ಯಕ್ಸಲ್ ವಾಣಿಜ್ಯ ವಾಹನ, ಕಟ್ಟಡ ನಿರ್ಮಾಣ ಭಾರಿ ವಾಹನ (4–6 ಆಕ್ಸಲ್), 7 ಅಥವಾ ಅದಕ್ಕಿಂತ ಹೆಚ್ಚಿನ ಆ್ಯಕ್ಸಲ್ ವಾಹನದ ಟೋಲ್ ಪರಿಷ್ಕರಣೆಯಾಗಿದೆ.
ತಿಂಗಳ 50 ಏಕಮುಖ ಸಂಚಾರ ಪಾಸ್ ದರವೂ ಏರಿಕೆಯಾಗಿದೆ. ಕಾರು, ವ್ಯಾನ್ ಹಾಗೂ ಜೀಪುಗಳ ಸ್ಥಳೀಯ ಮಾಸಿಕ ಬಸ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಹಣ ಪಾವತಿಸಿದ ಸಮಯದಿಂದ ಎಲ್ಲಾ ಮಾದರಿಯ ವಾಹನಗಳು 24 ತಾಸಿನೊಳಗೆ ಮರಳಿ ಸಂಚಾರ ಮಾಡಿದರೆ ಶೇ 25ರಷ್ಟು ಹಾಗೂ ಹಣ ಪಾವತಿಸಿದ ಸಮಯದಿಂದ ಒಂದು ತಿಂಗಳಲ್ಲಿ 50 ಸಲ ಪ್ರಯಾಣಿಸಿದಲ್ಲಿ ಶೇ 33ರಷ್ಟು ರಿಯಾಯಿತಿ ಸಿಗಲಿದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
2023ರ ಏಪ್ರಿಲ್ 1ರಿಂದ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಆರಂಭಿಸಿದ್ದ ಪ್ರಾಧಿಕಾರ, ಅದಾದ ಎರಡೇ ತಿಂಗಳಲ್ಲಿ (2023 ಜೂನ್ 1) ಏಕಾಏಕಿಯಾಗಿ ಶೇ 22ರಷ್ಟು ಹೆಚ್ಚಿಸಿತ್ತು. ಈ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಹೆಚ್ಚಳ ನಿರ್ಧಾರ ಹಿಂದಕ್ಕೆ ಪಡೆದಿತ್ತು. ನಂತರ ಪ್ರತಿ ವರ್ಷ ಏಪ್ರಿಲ್ 1ರಿಂದ ವಾರ್ಷಿಕ ಶೇ 5ರಷ್ಟು ಟೋಲ್ ಹೆಚ್ಚಳ ಮಾಡುವುದಾಗಿ ಹೇಳಿತ್ತು.
ಬೆಂಗಳೂರು ನಗರ ಜಿಲ್ಲೆಯ ಕುಂಬಳಗೋಡಿನಿಂದ ಆರಂಭವಾಗುವ 118 ಕಿ.ಮೀ. ಉದ್ದದ ಹೆದ್ದಾರಿಯು ರಾಮನಗರ ಜಿಲ್ಲೆಯಲ್ಲಿ 55 ಕಿ.ಮೀ., ಮಂಡ್ಯದಲ್ಲಿ 58 ಕಿ.ಮೀ. ಹಾಗೂ ಮೈಸೂರು ಜಿಲ್ಲೆಯಲ್ಲಿ 5 ಕಿ.ಮೀ. ವ್ಯಾಪ್ತಿ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.