ADVERTISEMENT

Expressway: ದ್ವಿಚಕ್ರ, ತ್ರಿಚಕ್ರ ವಾಹನಕ್ಕೆ ಇಂದಿನಿಂದ‌ ನಿಷೇಧ

ಉಲ್ಲಂಘನೆ ವಿರುದ್ಧ ಪೊಲೀಸರ ಕಣ್ಗಾವಲು: ₹500 ದಂಡದ ಬಿಸಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 5:21 IST
Last Updated 1 ಆಗಸ್ಟ್ 2023, 5:21 IST
   

ರಾಮನಗರ: ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ (ರಾಷ್ಟ್ರೀಯ ಹೆದ್ದಾರಿ–75) ದ್ವಿಚಕ್ರ ವಾಹನ, ಆಟೊ, ಕೃಷಿ ವಾಹನಗಳು ಸೇರಿದಂತೆ ವಿವಿಧ ಬಗೆಯ ವಾಹನಗಳ ಸಂಚಾರವನ್ನು ಇಂದಿನಿಂದ ನಿಷೇಧಿಸಲಾಗಿದೆ‌.

ನಿಯಮ ಉಲ್ಲಂಘನೆ ವಿರುದ್ಧ ಹೆದ್ದಾರಿಯುದ್ದಕ್ಕೂ ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ್ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಹೆದ್ದಾರಿ ಪ್ರವೇಶ- ನಿರ್ಗಮನ ಸ್ಥಳಗಳಲ್ಲಿ ಬೆಳಿಗ್ಗೆಯಿಂದಲೇ ಬೀಡು ಬಿಟ್ಟಿದ್ದಾರೆ.

ಎಚ್ಚರಿಕೆ: ಪ್ರವೇಶ ನಿಷೇದ ಕುರಿತು ಕೆಲವರಿಗೆ ಮಾಹಿತಿ ಕೊರತೆ ಇದೆ. ಹಾಗಾಗಿ, ಮೊದಲ ದಿನ ಹೆದ್ದಾರಿ ಪ್ರವೇಶಿಸುವವರಿಗೆ ಸಿಬ್ಬಂದಿ ಎಚ್ಚರಿಕೆ ನೀಡಿ‌, ಸರ್ವೀಸ್ ರಸ್ತೆಯಲ್ಲಿ ಕಳಿಸುತ್ತಿದ್ದಾರೆ. ಅದನ್ನು ಮೀರಿಯೂ ಕೆಲವರು ಹೆದ್ದಾರಿ ಪ್ರವೇಶಿಸಿದರೆ ಅಂತಹವರಿಗೆ ನಿರ್ಗಮನ ಸ್ಥಳಗಳಲ್ಲಿ ₹500 ದಂಡ ಹಾಕಲಾಗುತ್ತಿದೆ ಎಂದು‌ ಪೊಲೀಸರು ತಿಳಿಸಿದರು.

ADVERTISEMENT

ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ನಿಷೇಧದ ಪೋಸ್ಟರ್ ಗಳನ್ನು ಹಾಕಿ ಜಾಗೃತಿ ಮೂಡಿಸಲಾಗಿದೆ. ಆದರೂ, ಕೆಲವರು ಅದನ್ನು ಗಮನಿಸದೆ ಹೆದ್ದಾರಿ ಪ್ರವೇಶಿಸುತ್ತಿದ್ದಾರೆ. ಒಂದೆರಡು ದಿನ ವಾಹನ ತಡೆದು ಎಚ್ಚರಿಕೆ ನೀಡಿದರೆ ಹಾಗೂ ದಂಡ ಹಾಕಿದರೆ ಎಲ್ಲರೂ ಸರ್ವೀಸ್ ರಸ್ತೆಯನ್ನೇ ಬಳಸುತ್ತಾರೆ ಎಂದು ಹೇಳಿದರು.

ಎಕ್ಸ್‌ಪ್ರೆಸ್‌ ವೇನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾದ ಬೆನ್ನಲ್ಲೇ, ಪ್ರಾಧಿಕಾರವು ದ್ವಿಚಕ್ರ, ತ್ರಿಚಕ್ರ ಹಾಗೂ ಕೃಷಿ ಬಳಕೆಯ ವಾಹನಗಳಿಗೆ ನಿಷೇಧ ಹೇರುವ ತೀರ್ಮಾನ ಕೈಗೊಂಡಿತ್ತು. ನಿಯಮವು ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಜುಲೈ 12ರಂದೇ ನಿಷೇಧ ಕುರಿತು ಅಧಿಸೂಚನೆ ಹೊರಡಿಸಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.