ADVERTISEMENT

ಮಾಗಡಿ: ಹೈನುಗಾರಿಕೆ ಸ್ವಾವಲಂಬನೆ ಸಾಧಿಸಲು ಸಲಹೆ

ಪ್ರೋತ್ಸಾಹಧನ ಬಿಡುಗಡೆಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜನವರಿ 2025, 15:45 IST
Last Updated 6 ಜನವರಿ 2025, 15:45 IST
ಮಾಗಡಿ ತಾಲ್ಲೂಕಿನ ಮೋಟೇಗೌಡನಪಾಳ್ಯ ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಿರುವ  ಕೊಠಡಿಯನ್ನು ಸಂಸದ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಿದರು. ಮಾಜಿ ಶಾಸಕ ಎ.ಮಂಜುನಾಥ್ ಇದ್ದರು
ಮಾಗಡಿ ತಾಲ್ಲೂಕಿನ ಮೋಟೇಗೌಡನಪಾಳ್ಯ ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಿರುವ  ಕೊಠಡಿಯನ್ನು ಸಂಸದ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಿಸಿದರು. ಮಾಜಿ ಶಾಸಕ ಎ.ಮಂಜುನಾಥ್ ಇದ್ದರು   

ಮಾಗಡಿ: ಗ್ರಾಮೀಣ ರೈತರ ಬದುಕು ಹಸನಾಗಲು ಹೈನುಗಾರಿಕೆ ನೆರವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ಮೋಟೇಗೌಡನಪಾಳ್ಯ ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಿರುವ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, ಹಾಲು ಉತ್ಪಾದನೆ ಎನ್ನುವುದು ಅಕ್ಷಯಪಾತ್ರೆ ಇದ್ದ ಹಾಗೆ. ಇದರಿಂದ ಗ್ರಾಮೀಣ ಪ್ರದೇಶದ ಜನರು ಬದುಕು ಕಟ್ಟಿಕೊಳ್ಳಬಹುದು. ರಾಜ್ಯದಲ್ಲಿ ಹಾಲು ಉತ್ಪಾದಿಸುತ್ತಿರುವ ರೈತರಿಗೆ ಸರ್ಕಾರ ₹622ಕೋಟಿ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದ್ದು, ರೈತರಿಗೆ ಶೀಘ್ರ ಪ್ರೋತ್ಸಾಹಧನ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಹಾಲಿನ ಕ್ರಾಂತಿಯಾಗಲು ಎಚ್.ಡಿ.ದೇವೇಗೌಡ ನೇರ ಕಾರಣ. ಪ್ರಧಾನಿಯಾಗಿದ್ದ ಸಮಯದಲ್ಲಿ ಗುಜರಾತ್‌ಗೆ ಭೇಟಿ ನೀಡಿದ್ದರು. ಕ್ಷೀರ ಪಿತಾಮಹ ಕೋರಿಯನ್ ಅವರನ್ನು ಭೇಟಿಯಾಗಿ ಗುಜರಾತ್ ಮಾದರಿಯಲ್ಲಿಯೇ ಬೆಂಗಳೂರಿನಲ್ಲಿ ಮೆಗಾ ಡೇರಿ ಪ್ರಾರಂಭಿಸಲು ಸಹಕಾರ ನೀಡುವಂತೆ ಮನವಿ ಮಾಡಿದ್ದರು. ನಂತರ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಇನ್ನು ಮುಂತಾದ ಜಿಲ್ಲೆಗಳಲ್ಲಿ ಮೆಗಾ ಡೇರಿ ಪ್ರಾರಂಭಿಸಿ ಹಾಲಿನ ಉತ್ಪಾದನೆ ಹೆಚ್ಚು ಮಾಡಿದ್ದರು ಎಂದು ತಿಳಿಸಿದರು.

ಗ್ರಾಮೀಣ ಭಾಗದ ರೈತರು ಆರ್ಥಿಕವಾಗಿ ಸದೃಢವಾಗಲು ಹೈನು ಉತ್ಪಾದನೆ ಜತೆಗೆ ಪರ್ಯಾಯವಾಗಿ ಆಡು, ಕುರಿ ಸಾಕಾಣಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಕೃಷಿಯಲ್ಲಿ ವೈಜ್ಞಾನಿಕವಾಗಿ ತಂತ್ರಜ್ಞಾನ ಬಳಸಿಕೊಂಡು ಹೆಚ್ಚಿನ ಬೆಳೆ ಬೆಳೆಯಬೇಕು ಎಂದು ರೈತರಿಗೆ ಕಿವಿಮಾತು ಹೇಳಿದರು.

ADVERTISEMENT

ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಕೈಗಾರಿಕೆಗಾಗಿ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆಗೆ ತೊಡಕಾಗುತ್ತಿದೆ. ಬಿಡದಿ, ಡಾಬಸ್‌ಪೇಟೆ, ಹಾರೋಹಳ್ಳಿ ಮುಂತಾದ ಕೈಗಾರಿಕಾ ಪ್ರದೇಶಗಳಲ್ಲಿ ಅರ್ಧದಷ್ಟು ಜಾಗ ಬಳಕೆ ಮಾಡಿಕೊಂಡಿಲ್ಲ. ಕೆಲವರು ಕೈಗಾರಿಕಾ ನಿವೇಶನ ಪಡೆದು ಅಲ್ಲಿ ಯಾವುದೇ ಚಟುವಟಿಕೆ ನಡೆಸುತ್ತಿಲ್ಲ. ಖಾಲಿ ಇರುವ ಕೈಗಾರಿಕಾ ನಿವೇಶನ ಭರ್ತಿ ಮಾಡಬೇಕೆ ಹೊರತು; ಸರ್ಕಾರ ಹೊಸದಾಗಿ ಕೈಗಾರಿಕಾ ಪ್ರದೇಶ ನಿರ್ಮಿಸಲು ಕೃಷಿಭೂಮಿ ಸ್ವಾಧೀನಪಡಿಸಿಕೊಳ್ಳಬಾರದು ಎಂದು ಹೇಳಿದರು.

ಸೋಲೂರು ಹೋಬಳಿ ಮಾಗಡಿ ತಾಲ್ಲೂಕಿನ ಅವಿಭಾಜ್ಯ ಅಂಗ. ಇದನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸದೆ ಮಾಗಡಿ ತಾಲ್ಲೂಕಿನಲ್ಲಿಯೇ ಉಳಿಸಬೇಕು. ಒಂದು ವೇಳೆ ಸೋಲೂರು ನೆಲಮಂಗಲ ತಾಲ್ಲೂಕಿಗೆ ಸೇರ್ಪಡೆಯಾದರೆ ಇಲ್ಲಿನ ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ದೇವನಹಳ್ಳಿಗೆ ತಿರುಗಾಡಬೇಕಾಗುತ್ತದೆ ಎಂದರು.

ಡಾಬಸ್‌ಪೇಟೆಯಿಂದ ತಮಿಳುನಾಡಿನ ಹೊಸೂರುವರೆಗೆ ಎಸ್‌ಟಿಆರ್‌ಆರ್ ವರ್ತುಲ ರಸ್ತೆ ನಿರ್ಮಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿಶ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದು, ವರ್ತುಲ ರಸ್ತೆಗೆ ಅನುಮೋದನೆ ದೊರೆತಿದೆ. ದಾಬಸ್‌ಪೇಟೆಯಿಂದ ಮಾಗಡಿ, ರಾಮನಗರ, ಹಾರೋಹಳ್ಳಿ, ಹೊಸೂರು ಮಾರ್ಗವಾಗಿ ವರ್ತುಲ ರಸ್ತೆ ನಿರ್ಮಾಣಕ್ಕೆ ₹4750 ಕೋಟಿ ಅಂದಾಜು ಪಟ್ಟಿ ತಯಾರಿಸಲಾಗಿದೆ ಎಂದು ತಿಳಿಸಿದರು.

ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಹಾಲು ಉತ್ಪಾದನೆಯಲ್ಲಿ ಮಹಿಳೆಯರ ಶ್ರಮ ಸಾಕಷ್ಟಿದೆ. ಹಾಲು ಉತ್ಪಾದನೆ ಪ್ರತಿಫಲವನ್ನು ಮಹಿಳೆಯರು ಪಡೆಯುತ್ತಿದ್ದಾರೆ. ಹಸುಗಳನ್ನು ಮಗುವಿನಂತೆ ಜೋಪಾನ ಮಾಡಬೇಕು. ಹಸುಗಳಿಗೆ ಯಾವುದೇ ರೋಗ ಬಾರದಂತೆ ಜಾಗ್ರತೆ ವಹಿಸಬೇಕು ಎಂದರು.

ಬಿಜೆಪಿ ಯುವ ಮುಖಂಡ ಪ್ರಸಾದ್ ಗೌಡ, ಜೆಡಿಎಸ್ ಮುಖಂಡ ತಮ್ಮಣ್ಣಗೌಡ, ತಗ್ಗೀಕುಪ್ಪೆ ಗ್ರಾ.ಪಂ ಅಧ್ಯಕ್ಷೆ ತೇಜಸ್ವಿನಿ ರಾಮು, ತಾ.ಪಂ ಮಾಜಿ ಅಧ್ಯಕ್ಷ ನಾರಾಯಣಪ್ಪ, ಧವಳಗಿರಿ ಚಂದ್ರಣ್ಣ, ಹನುಮಾಪುರ ಚಿಕ್ಕಣ್ಣ, ರಾಮಣ್ಣ, ಕುಮಾರ್, ಹೊಸಳ್ಳಿ ರಂಗಣ್ಣಿ, ಮೂರ್ತಿ, ರಾಜಣ್ಣ, ಕೃಷ್ಣಮೂರ್ತಿ, ಮುನಿರಾಜು, ಹನುಮಾಪುರ ಕೃಷ್ಣ ಮತ್ತಿತರರು ಭಾಗವಹಿಸಿದ್ದರು.

ಮಾಗಡಿ ತಾಲ್ಲೂಕಿನ ಮೋಟೇಗೌಡನಪಾಳ್ಯ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನ ಸಮಾರಂಭದಲ್ಲಿ ಹಾಲು ಉತ್ಪಾದಿಕರಿಗೆ ಉಚಿತ ಉಡುಗೊರೆಯನ್ನು ಸಂಸದರು ವಿತರಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.