
ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 2025ನೇ ವರ್ಷದಲ್ಲಿ ಅಪರಾಧ ಪ್ರಕರಣಗಳಲ್ಲಿ ಅಲ್ಪ ಇಳಿಕೆಯಾಗಿದೆ. ಕಳೆದ ವರ್ಷ ಜಿಲ್ಲೆಯ 23 ಪೊಲೀಸ್ ಠಾಣೆಗಳಲ್ಲಿ 5,103 ಪ್ರಕರಣಗಳು ದಾಖಲಾಗಿವೆ. 2024ರಲ್ಲಿ 5,170 ಪ್ರಕರಣಗಳು ದಾಖಲಾಗಿದ್ದವು. ಹಿಂದಿನ ವರ್ಷಕ್ಕೆ ಹೋಲಿಸಿದರೆ 2025ರಲ್ಲಿ 67 ಪ್ರಕರಣಗಳು ಕಡಿಮೆಯಾಗಿವೆ.
ಕೊಲೆ, ಕೊಲೆ ಯತ್ನ, ಸುಲಿಗೆ, ಸರಗಳ್ಳತನ, ಕಳ್ಳತನ, ದರೋಡೆ, ಡಕಾಯಿತಿ, ಜೂಜು, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆ ಯತ್ನ, ಪೋಕ್ಸೊ, ಅಪಘಾತ, ಎನ್‌ಡಿಪಿಎಸ್, ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಪರಿಶಿಷ್ಟರ ಮೇಲೆ ದೌರ್ಜನ್ಯ, ಅಕ್ರಮವಾಗಿ ಮದ್ಯ ಮಾರಾಟ ಸೇರಿದಂತೆ ಇತರ ಪ್ರಕರಣಗಳು ಇದರಲ್ಲಿ ಸೇರಿವೆ.
ಮತ್ತೊಂದೆಡೆ ವಿವಿಧ ಪ್ರಕರಣಗಳಲ್ಲಿ ಪೊಲೀಸರು ಸುಮಾರು ₹5.32 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಜಪ್ತಿ ಮಾಡಿದ್ದಾರೆ. ಕೊಲೆ, ಕಳ್ಳತನ, ಸರಗಳ್ಳತನ, ಡಕಾಯಿತಿ ಸೇರಿದಂತೆ ಕೆಲ ಪ್ರಕರಣಗಳು ಇಳಿಕೆ ಕಂಡಿವೆ. ಮತ್ತೊಂದೆಡೆ ಆರೋಪಿಗಳ ಪತ್ತೆ ಕಾರ್ಯಾಚರಣೆ ಚುರುಕುಗೊಂಡಿದೆ.
36 ಕೊಲೆ: ಕಳೆದ ವರ್ಷ ಜಿಲ್ಲೆಯಲ್ಲಿ 36 ಕೊಲೆಗಳಾಗಿದ್ದು, ಅಷ್ಟೂ ಪ್ರಕರಣಗಳ ಆರೋಪಿಗಳನ್ನು ತ್ವರಿತ ಕಾರ್ಯಾಚರಣೆಯೊಂದಿಗೆ ಬಂಧಿಸಲಾಗಿದೆ. 2024ರಲ್ಲಿ 38 ಕೊಲೆ ಪ್ರಕರಣಗಳು ದಾಖಲಾಗಿದ್ದವು. ಜೊತೆಗೆ 27 ಸರಗಳ್ಳತನ, 3 ಡಕಾಯಿತಿ ಹಾಗೂ 15 ಸುಲಿಗೆ ಪ್ರಕರಣಗಳ ಪೈಕಿ 13 ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗದು, ಚಿನ್ನಾಭರಣ ಕಳ್ಳತನ, ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಜಿಲ್ಲೆಯಾದ್ಯಂತ ₹5.32 ಕೋಟಿ ಮೌಲ್ಯದ ನಗದು ಮತ್ತು ಚಿನ್ನಾಭರಣ ಜಪ್ತಿ ಮಾಡಲಾಗಿದ. ಅದರಲ್ಲಿ ಲಾಭಕ್ಕಾಗಿ ನಡೆದ ಕೊಲೆ ಪ್ರಕರಣಗಳಲ್ಲಿ ₹56 ಲಕ್ಷ, ದರೋಡೆಯಲ್ಲಿ ₹65.47 ಲಕ್ಷ, ಸುಲಿಗೆಯಲ್ಲಿ ₹14.83 ಲಕ್ಷ, ಸರಗಳ್ಳತನದಲ್ಲಿ ₹37.25 ಲಕ್ಷ ಜಪ್ತಿ ಪ್ರಮುಖವಾಗಿವೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿ ಸಂಘಟಿತ ಪ್ರಯತ್ನದಿಂದ 2025ರಲ್ಲಿ ಅಪರಾಧ ಪ್ರಕರಣಗಳಲ್ಲಿ ಸ್ವಲ್ಪಮಟ್ಟಿಗೆ ಇಲಾಖೆಯಾಗಿದೆ. ಅಲ್ಲದೆ ಪ್ರಕರಣಗಳ ಪತ್ತೆ ಪ್ರಮಾಣವು ಏರಿಕೆಯಾಗಿದೆ– ಆರ್. ಶ್ರೀನಿವಾಸ ಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.