ADVERTISEMENT

ಪಡುವಣಗೆರೆ: ಪ್ರಸಾದ ತಿಂದ 200 ಮಂದಿ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 5:48 IST
Last Updated 31 ಜುಲೈ 2022, 5:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕನಕಪುರ: ತಾಲ್ಲೂಕಿನ ಮರಳವಾಡಿ ಹೋಬಳಿಯ ಪಡುವಣಗೆರೆಯಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ದೇವಾಲಯದಲ್ಲಿ ಮಾಡಿದ್ದ ಪ್ರಸಾದ ಸೇವಿಸಿದ 200ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ.

ಗ್ರಾಮದ ದೇಗುಲ ಮಠದ ಗದ್ದುಗೆ ದೇವಸ್ಥಾನದಲ್ಲಿ ಗುರುವಾರ ಸಿಹಿ ಅನ್ನ ಮತ್ತು ಪಲಾವ್ ಮಾಡಲಾಗಿತ್ತು. ಜನರು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದ್ದರು.ಪ್ರಸಾದ ತಿಂದವರಿಗೆ ನಿಧಾನವಾಗಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಬೆಳಿಗ್ಗೆ ಆರೋಗ್ಯದಲ್ಲಿ ವ್ಯತ್ಯಯ ಕಾಣಿಸಿಕೊಂಡಿದೆ. ವಾಂತಿ, ಬೇಧಿ, ಮೈಕೈ ನೋವು, ಚಳಿ, ಜ್ವರಕ್ಕೆ ತುತ್ತಾಗಿದ್ದಾರೆ. ಮಕ್ಕಳಲ್ಲಿ ಮೊದಲಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ನಂತರ ದೊಡ್ಡವರಿಗೆ ವ್ಯಾಪಿಸಿದೆ.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರು ತಕ್ಷಣವೇ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ಇನ್ನೂ ಕೆಲವರು ಕನಕಪುರದ ಜನನಿ ಆಸ್ಪತ್ರೆಯಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

‘ಜನರಲ್ಲಿ ಆರೋಗ್ಯ ವ್ಯತ್ಯಯವಾಗಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಯಿತು. ದೇವಸ್ಥಾನದಲ್ಲಿ ನೀಡಿದ ಪ್ರಸಾದದಿಂದ ಈ ರೀತಿ ಆಗಿದೆ ಎನ್ನಲಾಗಿದೆ. ಗ್ರಾಮದಲ್ಲಿ ಪೂರೈಕೆಯಾಗುವ ನೀರನ್ನು ಪರೀಕ್ಷೆ ಮಾಡಿಸಿದ್ದು ಅದರಲ್ಲಿ ಯಾವುದೇ ಸಮಸ್ಯೆ ಕಂಡಿಲ್ಲ. ಪ್ರಸಾದಕ್ಕೆ ಬಳಸಿದ್ದ ಬೆಲ್ಲದಿಂದಲೇ ಈ ರೀತಿ ಆಗಿರಬಹುದೆಂಬ ಅನುಮಾನವಿದೆ’ ಎಂದು ಟಿ. ಹೊಸಳ್ಳಿ ಗ್ರಾಮ ಪಂಚಾಯಿತಿ ಪಿಡಿಒಸತೀಶ್‌ ತಿಳಿಸಿದರು.‘ಪ್ರಸಾದ ಸೇವಿಸಿದ ಬಳಿಕ 200ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡರು. ನೂರಕ್ಕೂ ಹೆಚ್ಚು ಜನರು ಗ್ರಾಮದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ಲೋಕೋಸ್‌ ನೀಡಿ ಔಷಧಿ ಕೊಟ್ಟ ಮೇಲೆ ಸರಿಹೋಗಿದೆ. ಕೆಲವರಲ್ಲಿ ನಿಧಾನವಾಗಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು ಶನಿವಾರ ಆಸ್ಪತ್ರೆಗೆ ಹೋದರೆ ಅಲ್ಲಿ ವೈದ್ಯರು ಇರಲಿಲ್ಲ. ಅನಿವಾರ್ಯವಾಗಿ ಕನಕಪುರಕ್ಕೆ ಆಟೊ, ಬೈಕ್‌ಗಳಲ್ಲಿ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಗ್ರಾಮಸ್ಥ ಮರಿಯಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.