ADVERTISEMENT

ಶೋಷಿತರ ಶೌರ್ಯದ ದ್ಯೋತಕ ಕೋರೆಗಾಂವ್: ಪ್ರೊ. ಬೀರಯ್ಯ

ಭೀಮಾ ಕೋರೆಗಾಂವ್ ವಿಜಯೋತ್ಸವ; ಮಾತೆ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 6:42 IST
Last Updated 5 ಜನವರಿ 2026, 6:42 IST
ರಾಮನಗರದ ವಾಟರ್ ಟ್ಯಾಂಕ್ ವೃತ್ತದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮ ಜಯಂತಿ ಆಚರಿಸಲಾಯಿತು
ರಾಮನಗರದ ವಾಟರ್ ಟ್ಯಾಂಕ್ ವೃತ್ತದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮ ಜಯಂತಿ ಆಚರಿಸಲಾಯಿತು   

ರಾಮನಗರ: ‘ಭೀಮಾ ಕೋರೆಗಾಂವ್ ಯುದ್ದದಲ್ಲಿ ಮಹರ್ ಸೈನಿಕರು ಗಳಿಸಿದ ಜಯವು, ದೌರ್ಜನ್ಯದ ವಿರುದ್ದ ಶೋಷಿತರ ದಿಗ್ವಿಜಯವಾಗಿದೆ. ಚರಿತ್ರೆಯ ಪುಟಗಳಲ್ಲಿ ಹುದುಗಿದ್ದ ಶೋಷಿತ ಸಮುದಾಯದ ಈ ಶೌರ್ಯವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶಕ್ಕೆ ಸಾರಿದರು’ ಎಂದು ಪ್ರೊ. ಬೀರಯ್ಯ ಹೇಳಿದರು.

ವಿವಿಧ ಸಂಘಟನೆಗಳು ನಗರದ ವಾಟರ್ ಟ್ಯಾಂಕ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪೇಶ್ವೆ ಸೈನ್ಯವನ್ನು ಬಗ್ಗುಬಡಿದ ಮಹರ್ ಸೈನಿಕರು, ಅಸ್ಪೃಶ್ಯತೆ ಹೆಸರಿನಲ್ಲಿ ಶತಮಾನಗಳಿಂದ ನಡೆಯುತ್ತಿದ್ದ ಶೋಷಣೆ ವಿರುದ್ಧ ಸಿಡಿದೆದ್ದರು’ ಎಂದರು.

‘ಕೋರೆಗಾಂವ್ ಯುದ್ದದ ವಿಜಯೋತ್ಸವವು ದೇಶದ ಶೋಷಿತ ಸಮುದಾಯಗಳ ಸ್ವಾಭಿಮಾನ ಮತ್ತು ಅಸ್ಮೀತೆಯ ಪ್ರತೀಕವಾಗಿದೆ. ಅಂಬೇಡ್ಕರ್ ಅವರು ಪ್ರತಿ ವರ್ಷ ಕೋರೆಗಾಂವ್ ವಿಜಯ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸುತ್ತಿದ್ದರು. ನಾವು ಸಹ ನಮ್ಮ ಈ ಐತಿಹಾಸಿಕ ವಿಜಯದ ಸಂಭ್ರಮವನ್ನು ಆಚರಿಸುವ ಮೂಲಕ ಮುಂದಿನ ತಲೆಮಾರಿಗೂ ಅದರ ಮಹತ್ವ ಸಾರಬೇಕು’ ಎಂದು ತಿಳಿಸಿದರು.

ADVERTISEMENT

‘ಮಹಿಳೆಯರಿಗೆ ಅಕ್ಷರ ದೀಕ್ಷೆ ಕೊಟ್ಟ ಮಾತೆ ಸಾವಿತ್ರಿಬಾಯಿ ಫುಲೆ ಅವರು ಈ ದೇಶದ ನಿಜವಾದ ಸರಸ್ವತಿ. ತಮ್ಮ ಪತಿ ಜ್ಯೋತಿಬಾ ಫುಲೆ ಅವರಿಂದ ಶಿಕ್ಷಣ ಕಲಿತು, ಮಹಿಳೆಯರಿಗಾಗಿಯೇ ಶಾಲೆ ತೆರೆದು ಶಿಕ್ಷಣ ನೀಡಿದ ಸಾವಿತ್ರಿಬಾಯಿ ಅವರ ಕೊಡುಗೆ ಅನನ್ಯವಾದುದು. ಫುಲೆ ದಂಪತಿ ಮಾಡಿದ ಕ್ರಾಂತಿಯು ಅಂಬೇಡ್ಕರ್ ಅವರ ಅಗಾಧ ಪರಿಣಾಮ ಬೀರಿತ್ತು’ ಎಂದು ನೆನೆದರು.

ನಗರಸಭೆ ಸದಸ್ಯ ಗ್ಯಾಬ್ರಿಯಲ್, ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಹರೀಶ್ ಬಾಲು, ಬಿವಿಎಸ್ ಜಿಲ್ಲಾಧ್ಯಕ್ಷ ವೆಂಕಟೇಶ್, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಪರಮೇಶ್, ಡಿಎಸ್ಎಸ್ ಸಂಚಾಲಕ ಶಿವಶಂಕರ್, ಸಮತಾ ಸೈನಿಕ ದಳದ ಯುವ ಘಟಕದ ಅಧ್ಯಕ್ಷ ಸುರೇಶ್ಮ ವಿನೋದ್ ನಂಜುಂಡಯ್ಯ, ಕುಂಬಾಪುರ ಕಿರಣ್, ಕುಂಬಾಪುರ ಬಾಬು, ಚೆಲುವರಾಜು, ಗವಿಯಪ್ಪ, ಕಿರಣ್ ಸಾಗರ್, ದುರ್ಗಾ ಪ್ರಸಾದ್, ಹರೀಶ್, ಸಿದ್ದರಾಜು, ಚಿಕ್ಕ ವೆಂಕಟಯ್ಯ, ರಮೇಶ್ ಅರಕೆರೆ, ಸದಾಕುಮಾರ್, ಶ್ರೀನಿವಾಸ್ ಹಾಗೂ ಇತರರು ಇದ್ದರು.