ADVERTISEMENT

‘ಶ್ರಮ ಜೀವನಕ್ಕೆ ಭೋವಿ ಸಮಾಜ ಮಾದರಿ’

ಜಿಲ್ಲಾಡಳಿತದಿಂದ ಸಿದ್ದರಾಮೇಶ್ವರ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 6:31 IST
Last Updated 8 ಫೆಬ್ರುವರಿ 2023, 6:31 IST
ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಉದ್ಘಾಟಿಸಿದರು. ಸಿದ್ದರಾಮೇಶ್ವರ ಸ್ವಾಮೀಜಿ ಮತ್ತಿತರರು ಇದ್ದರು
ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಉದ್ಘಾಟಿಸಿದರು. ಸಿದ್ದರಾಮೇಶ್ವರ ಸ್ವಾಮೀಜಿ ಮತ್ತಿತರರು ಇದ್ದರು   

ರಾಮನಗರ: ‘ಮಾನವನಿಗೆ ಬೇಕಾದ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಅವಶ್ಯವಾದ ಸಾಮಗ್ರಿಗಳನ್ನು ಒದಗಿಸಲು ಭೋವಿ ಸಮುದಾಯವು ಶ್ರಮ ವಹಿಸುತ್ತಿರುವುದು ಹೆಮ್ಮೆಯ ವಿಚಾರ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರು ತಿಳಿಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯಾವುದೇ ಒಂದು ಮನೆ, ಕಟ್ಟಡ, ದೇವಸ್ಥಾನ ವಿಧಾನಸೌಧ, ರಸ್ತೆ ಅಥವಾ ಪಾರ್ಲಿಮೆಂಟ್ ಹೌಸ್‌ಗಳನ್ನು ಕಟ್ಟಬೇಕಾದರೆ ಕಲ್ಲಿನ ಉಪಯೋಗವಿಲ್ಲದೆ ಮಾಡಲು ಸಾಧ್ಯವಿಲ್ಲ. ಈ ಸಮುದಾಯ ಕಷ್ಟಪಡದಿದ್ದರೆ ಸಮಾಜ ಕಟ್ಟಲು ಅವಕಾಶವಾಗುವುದಿಲ್ಲ. ಈ ಸಮುದಾಯವನ್ನು ಎಲ್ಲರೂ ಗೌರವಿಸೋಣ ಎಂದರು.

ADVERTISEMENT

ಇಲ್ಲಿ ಯಾವುದೇ ಜಾತಿ, ಮತವೆಂಬ ಭೇದವಿಲ್ಲ. ಎಲ್ಲರೂ ಸಹ ಸಮಾನರೇ. ಮೇಲರಿಮೆ, ಕೀಳರಿಮೆ ಎಂಬ ಭಾವನೆಯನ್ನು ಬಿಟ್ಟರೆ ಎಲ್ಲ ಸಮುದಾಯದವರು ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಭೋವಿ ಸಮುದಾಯವು ಅತ್ಯಂತ ಶ್ರಮಿಕ ಸಮುದಾಯವಾಗಿದೆ. ಇಂತಹ ಶ್ರಮಿಕ ವರ್ಗದವರಿಗೆ ಸಾಮಾಜಿಕವಾಗಿ, ಧಾರ್ಮಿಕವಾಗಿ ಒಳಪಟ್ಟಿರುವಂತಹ ಶೋಷಿತ ಸಮಾಜಕ್ಕೆ ಅಲೆಮಾರಿಗಳ ಜೊತೆಯಲ್ಲಿ ಅರೆ ಅಲೆಮಾರಿ ಜೀವನವನ್ನು ನಡೆಸುತ್ತಾರೆ ಎಂದರು. ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಸ್ವಾಮಿ ಅವರ ಜೀವನದ ಕುರಿತು ತಿಳಿಸಿದರು. ಉಪನ್ಯಾಸಕ ಪ್ರಸನ್ನ ಶಿವಯೋಗಿ ಸಿದ್ದರಾಮೇಶ್ವರರ ಕುರಿತು ಉಪನ್ಯಾಸ ನೀಡಿದರು. ನಗರದ ಜಿಲ್ಲಾ ಕ್ರೀಡಾಂಗಣದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಮೆರವಣಿಗೆ ಏರ್ಪಡಿಸಲಾಗಿತ್ತು.

ರೇಷ್ಮೆ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೌತಮ್ ಗೌಡ, ಸಮುದಾಯದ ಜಿಲ್ಲಾ ಅಧ್ಯಕ್ಷ ಕನಕರಾಜು, ನಗರಸಭೆ ಸದಸ್ಯರಾದ ಗೋವಿಂದರಾಜು, ಸೋಮಶೇಖರ್ ಮಣಿ, ಸಮುದಾಯದ ಮುಖಂಡರಾದ ಆರ್. ಕೃಷ್ಣಪ್ಪ, ಕೃಷ್ಣಪ್ಪ, ವಾಸು, ಗೋಪಿ, ಗಿರಿಯಪ್ಪ, ಎಚ್. ನರಸಿಂಹಯ್ಯ, ನರಸಿಂಹಮೂರ್ತಿ, ರವಿ, ಶ್ರೀನಿವಾಸ ಮೂರ್ತಿ, ಯೋಜನಾ ನಿರ್ದೇಶಕ ಚಿಕ್ಕವೀರಯ್ಯ, ಜವಳಿ ಇಲಾಖೆಯ ಉಪನಿರ್ದೇಶಕ ರಂಗಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಜಿ. ರಮೇಶ್ ಬಾಬು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಉದ್ಘಾಟಿಸಿದರು. ಸಿದ್ದರಾಮೇಶ್ವರ ಸ್ವಾಮೀಜಿ ಮತ್ತಿತರರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.