ADVERTISEMENT

ಬಿಡದಿ | ಜನ ಸಹಭಾಗಿತ್ವದ ಉಪನಗರ; ಸಿಗಲಿದೆ ಭೂ ಪರಿಹಾರ

ಪಿಪಿಪಿ ಮಾದರಿಯ ಯೋಜನೆ; ಜಮೀನು ಕೊಟ್ಟವರಿಗೆ ಪರಿಹಾರವಾಗಿ ಅಭಿವೃದ್ಧಿಪಡಿಸಿದ ನಿವೇಶನ

ಓದೇಶ ಸಕಲೇಶಪುರ
Published 14 ಮೇ 2025, 4:24 IST
Last Updated 14 ಮೇ 2025, 4:24 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಮನಗರ: ನವ ಬೆಂಗಳೂರು ಪರಿಕಲ್ಪನೆಯ ಬಿಡದಿ ಸಮಗ್ರ ಉಪನಗರ ನಿರ್ಮಾಣ ಯೋಜನೆಯನ್ನು ಜನರ ಸಹಭಾಗಿತ್ವದ ಆಶಯದೊಂದಿಗೆ ರೂಪಿಸಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ (ಪಿಪಿಪಿ) ಈ ಯೋಜನೆಗಾಗಿ ಭೂಮಿ ಕಳೆದುಕೊಳ್ಳುವವರಿಗೆ ದೀರ್ಘಕಾಲಿಕ ಆರ್ಥಿಕ ಅನುಕೂಲಕ್ಕಾಗಿ ಭೂ ಪರಿಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ.

ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ– 1987 (ಕುಡಾ) ಕಲಂ 35 ಮತ್ತು 36ರ ಕೈಗೊಳ್ಳಲು ಹಾಗೂ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳು– 2009ರ ನಿಯಮಗಳ ಪ್ರಕಾರ, ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರವಾಗಿ ಅಭಿವೃದ್ಧಿಪಡಿಸಿದ ಬದಲಿ ನಿವೇಶನ ನೀಡಲು ಅವಕಾಶವಿದೆ.

ADVERTISEMENT

60:40 ಅನುಪಾತದಲ್ಲಿ ಪರಿಹಾರ: ಯೋಜನೆಗಾಗಿ ಗುರುತಿಸಿರುವ ಒಟ್ಟು 8,943 ಎಕರೆ ಭೂಮಿ ಪೈಕಿ, ಸರ್ಕಾರಿ ಜಮೀನು ಮತ್ತು ನದಿ– ಕೆರೆ ಪ್ರದೇಶ ಹೊರತುಪಡಿಸಿ 7,481 ಎಕರೆ ಭೂ ಸ್ವಾಧೀನಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವಸತಿ ಕಾಯ್ದೆ–2013ರಡಿ ನಗದು ಪರಿಹಾರ ಮತ್ತು 60:40 ಅನುಪಾತದಲ್ಲಿ ಅಭಿವೃದ್ಧಿ ಹೊಂದಿದ ಭೂಮಿಯನ್ನು ಪರಿಹಾರವಾಗಿ ಪಡೆಯಲು ಅವಕಾಶವಿದೆ. ಮಾಲೀಕರು ಇವೆರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ಅಭಿವೃದ್ಧಿಪಡಿಸಿದ ಪ್ರತಿ ಎಕರೆ ಭೂಮಿಯಲ್ಲಿ ಶೇ 40ರಷ್ಟು ಭೂಮಿಯನ್ನು ಮಾಲೀಕನಿಗೆ ಪರಿಹಾರವಾಗಿ ನೀಡಲಾಗುವುದು. ಸದರಿ ಜಾಗದಲ್ಲಿರುವ ಮರಗಳು ಹಾಗೂ ಕಟ್ಟಡಗಳಿಗೆ ಪ್ರಸಕ್ತ ಮಾರುಕಟ್ಟೆ ದರದಲ್ಲಿ ಪರಿಹಾರ ಪಾವತಿಸಲಾಗುವುದು. ಇದರಿಂದಾಗಿ ಜಮೀನು ಕಳೆದುಕೊಳ್ಳುವವರಿಗೆ ಧೀರ್ಘ ಕಾಲಾವಧಿಯ ಆರ್ಥಿಕ ಬೆಂಬಲ ಸಿಗಲಿದೆ ಎನ್ನುತ್ತವೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಡಿಎ) ಮೂಲಗಳು.

ಉಪನಗರಕ್ಕೆ ಭೂಮಿ ನೀಡುವವರಿಗೆ ‘ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ವಸತಿ ಕಾಯ್ದೆ–2013’ರ ಪ್ರಕಾರ ಪರಿಹಾರ ಪಾವತಿಸಲಾಗುತ್ತದೆ. ಯಾವುದೇ ಅಭಿವೃದ್ಧಿ ಯೋಜನೆಗೆ ಜನರಿಂದ ಸ್ವಾಧೀನಪಡಿಸಿಕೊಳ್ಳುವ ಭೂಮಿಯ ಮಾರುಕಟ್ಟೆ ಮೌಲ್ಯದ ನಾಲ್ಕು ಪಟ್ಟು ನಗದು ಪರಿಹಾರ ನೀಡಬೇಕು ಎಂದು ಕಾಯ್ದೆ ಹೇಳುತ್ತದೆ. ಅದರ ಅನ್ವಯವೇ, ಉಪನಗರಕ್ಕೆ ಭೂಮಿ ನೀಡುವವರಿಗೆ ಪರಿಹಾರ ನೀಡಲು ಜಿಬಿಡಿಎ ಸಿದ್ಧತೆ ಮಾಡಿಕೊಂಡಿದೆ.

ಅನುಪಾತ ಹೆಚ್ಚಳಕ್ಕೆ ಚಿಂತನೆ: ಯೋಜನೆಗೆ ಭೂಮಿ ಕೊಡುವವರಿಗೆ ನಿಗದಿಪಡಿಸಿರುವ ಭೂ ಪರಿಹಾರದ 60:40 ಅನುಪಾತವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ. ತಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ಮೊದಲ ಉಪನಗರ ನಿರ್ಮಾಣಕ್ಕೆ ಹೆಚ್ಚಿನ ಆಸಕ್ತಿ ತೋರಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸ್ಥಳೀಯ ಶಾಸಕ ಎಚ್.ಸಿ. ಬಾಲಕೃಷ್ಣ ಅವರು, ಭೂ ಪರಿಹಾರದ ಅನುಪಾತ ಹೆಚ್ಚಿಸುವ ಕುರಿತು ಪರಿಶೀಲಿಸುವಂತೆ ಸೂಚಿಸಿದ್ದಾರೆ.

ಭೂ ಸ್ವಾಧೀನ ಅಧಿಸೂಚನೆಯ ಬಳಿಕ ರೈತರಿಂದ ಸ್ವೀಕರಿಸಿರುವ ಆಕ್ಷೇಪಣೆಗಳಲ್ಲೂ ನಗದು ಪರಿಹಾರದ ಮೊತ್ತ ಮತ್ತು ಭೂ ಪರಿಹಾರದ ಅನುಪಾತ ಹೆಚ್ಚಿಸುವ ಒತ್ತಾಯಗಳು ಕೇಳಿ ಬಂದಿವೆ. ಈ ಒತ್ತಾಯದ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಜಿಬಿಡಿಎ ಮೂಲಗಳು ತಿಳಿಸಿವೆ.

ಒಕ್ಕಲೆಬ್ಬಿಸದೆ ಗ್ರಾಮಾಭಿವೃದ್ಧಿ

‘ಯೋಜನೆ ವ್ಯಾಪ್ತಿಗೆ ಒಳಪಟ್ಟಿರುವ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂಬ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಕೆಲವರು ಇದನ್ನು ನಿಜವೆಂದು ನಂಬಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಯೋಜನೆಯಿಂದ ಹಾಲಿ ಗ್ರಾಮಗಳ ಮೂಲಸ್ವರೂಪಕ್ಕೆ ಧಕ್ಕೆಯಾಗದು. ಗ್ರಾಮಗಳಲ್ಲಿರುವ ಶಾಲಾ–ಕಾಲೇಜು, ದೇವಸ್ಥಾನ, ಸ್ಮಶಾನ, ರಸ್ತೆ, ಉದ್ಯಾನ, ಸಮುದಾಯ ಭವನ ವಿವಿಧ ಸಾರ್ವಜನಿಕ ಬಳಕೆಯ ಸ್ಥಳಗಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದು. ಇಡೀ ಗ್ರಾಮವನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಂಡು ಉಪನಗರ ಪರಿಕಲ್ಪನೆಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗುವುದು’ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.