ADVERTISEMENT

‘ಬಿಗ್‌ ಬಾಸ್’ ಮನೆಯಿದ್ದ ಜಾಲಿವುಡ್‌ಗೆ ಬೀಗ: ಸ್ಪರ್ಧಿಗಳು ರೆಸಾರ್ಟ್‌ಗೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 0:30 IST
Last Updated 8 ಅಕ್ಟೋಬರ್ 2025, 0:30 IST
ರಾಮನಗರ ತಾಲ್ಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ಮಂಗಳವಾರ ಬೀಗಮುದ್ರೆ ಹಾಕಲಾಯಿತು
ರಾಮನಗರ ತಾಲ್ಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ಮಂಗಳವಾರ ಬೀಗಮುದ್ರೆ ಹಾಕಲಾಯಿತು   

ರಾಮನಗರ: ‘ಬಿಗ್‌ಬಾಸ್’ ರಿಯಾಲಿಟಿ ಷೋ ನಡೆಯುತ್ತಿರುವ ಬಿಡದಿಯ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ತಾಲ್ಲೂಕು ಆಡಳಿತ ಮಂಗಳವಾರ ಬೀಗಮುದ್ರೆ ಹಾಕಿದೆ. ಈ ದಿಢೀರ್ ಬೆಳವಣಿಗೆಯಿಂದಾಗಿ ಬಿಗ್‌ಬಾಸ್ ಷೋ ಅತಂತ್ರ ಸ್ಥಿತಿ ತಲುಪಿದೆ ಎನ್ನಲಾಗಿದೆ.

‘ಬಿಗ್‌ಬಾಸ್‌’ ಮನೆಯಲ್ಲಿದ್ದ ಸ್ಪರ್ಧಿಗಳು ಹಾಗೂ ಸಿಬ್ಬಂದಿಯನ್ನು ಆಯೋಜಕರು ಸಮೀಪದ ಈಗಲ್ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಿದ್ದಾರೆ. ಪಾರ್ಕ್‌ಗೆ ಬಂದಿದ್ದ ಪ್ರವಾಸಿಗರನ್ನು ಸಹ ಸ್ಥಳದಿಂದ ಹೊರಕ್ಕೆ ಕಳುಹಿಸಲಾಗಿದೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದ ಮೇರೆಗೆ ತಹಶೀಲ್ದಾರ್ ತೇಜಸ್ವಿನಿ ಹಾಗೂ ಸಿಬ್ಬಂದಿ ಜಾಲಿವುಡ್‌ ಸ್ಟುಡಿಯೊಕ್ಕೆ ಬೀಗ ಜಡಿದರು. 

ADVERTISEMENT

ಮನರಂಜನೆ, ಸಾಹಸ ಚಟುವಟಿಕೆಗಳಿಗೆ ಜಾಲಿವುಡ್ ಪಾರ್ಕ್ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆದಿರಲಿಲ್ಲ. ಪಾರ್ಕ್‌ನಿಂದ ಕೊಳಚೆ ನೀರನ್ನು ಸಂಸ್ಕರಿಸದೆಯೇ ಹೊರಕ್ಕೆ ಬಿಡಲಾಗುತ್ತಿತ್ತು. ತ್ಯಾಜ್ಯವನ್ನು ಸಹ ಸರಿಯಾಗಿ ವಿಲೇವಾರಿ ಮಾಡುತ್ತಿರಲಿಲ್ಲ ಎಂಬ ಆರೋಪ ಮಾಡಲಾಗಿದೆ.

ಮಾಲಿನ್ಯ ನಿಯಂತ್ರಣ ಕಾಯ್ದೆಗಳಲ್ಲಿ ಮುಖ್ಯವಾಗಿ ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಯ ವಿವಿಧ ನಿಯಮಗಳನ್ನು ಜಾಲಿವುಡ್ ಉಲ್ಲಂಘಿಸಿದೆ ಎನ್ನಲಾಗಿತ್ತು. ಈ ಕುರಿತು ರಾಮನಗರ ಪರಿಸರ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿ ವರದಿ ಕೊಟ್ಟಿದ್ದರು. ಅದರ ಬೆನ್ನಲ್ಲೇ, ಜಾಲಿವುಡ್‌ಗೆ ನೀಡಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಮಂಡಳಿಯು ನಿರ್ದೇಶನ ನೀಡಿ ನೋಟಿಸ್ ಜಾರಿ ಮಾಡಿತ್ತು.

ನೋಟಿಸ್‌ಗೆ ಜಾಲಿವುಡ್ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಪಾರ್ಕ್‌ಗೆ ಬೀಗಮುದ್ರೆ ಹಾಕುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯು ಜಿಲ್ಲಾಧಿಕಾರಿಗೆ ಸೋಮವಾರ ಸೂಚನೆ ನೀಡಿತ್ತು.

ಹೀಗಾಗಿ ತಹಶೀಲ್ದಾರ್ ಅವರು ಪೊಲೀಸ್ ಭದ್ರತೆಯಲ್ಲಿ ಸಂಸ್ಥೆಗೆ ಬೀಗ ಮುದ್ರೆ ಹಾಕಿದರು. ಈ ವೇಳೆ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪಾರ್ಕ್ ಎದುರು ಜಮಾಯಿಸಿ ಜಿಲ್ಲಾಡಳಿತದ ಪರವಾಗಿ ಘೋಷಣೆ ಕೂಗಿ, ಅಭಿನಂದಿಸಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯದ ಜಾಲಿವುಡ್‌ಗೆ ನೋಟಿಸ್ ನೀಡಲಾಗಿತ್ತು. ಜಿಲ್ಲಾಡಳಿತದ ಪರವಾಗಿ ನೋಟಿಸ್ ನೀಡಲು ಹೋದಾಗ ಸ್ವೀಕರಿಸದೆ ಜಾಲಿವುಡ್ ಅಧಿಕಾರಿಗಳು ಉದ್ಧಟತನ ತೋರಿದ್ದರು. ಇದೀಗ, ಮಂಡಳಿ ಸೂಚನೆ ಮೇರೆಗೆ ನೋಟಿಸ್ ನೀಡಿ ಸಂಸ್ಥೆಗೆ ಬೀಗ ಹಾಕಿದ್ದೇವೆ. ಬಿಗ್ ಬಾಸ್ ಸ್ಪರ್ಧಿಗಳನ್ನು ಹೊರಕ್ಕೆ ಕಳಿಸಿ, ಎಲ್ಲಾ ಚಟುವಟಿಕೆ ಸ್ಥಗಿತಗೊಳಿಸಿದ್ದೇವೆ ಎಂದು ರಾಮನಗರ ತಹಶೀಲ್ದಾರ್ ತೇಜಸ್ವಿನಿ ಮಾಧ್ಯಮದವರಿಗೆ ತಿಳಿಸಿದರು.

ಜಾಲಿವುಡ್ ಸ್ಟುಡಿಯೊಕ್ಕೆ ಬೀಗಮುದ್ರೆ ಹಾಕಬೇಕಿರುವುದರಿಂದ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಪೊಲೀಸ್ ಭದ್ರತೆ ಒದಗಿಸುವಂತೆ ಜಿಲ್ಲಾಡಳಿತ ಕೋರಿತ್ತು. ಅದರಂತೆ ಬೀಗಮುದ್ರೆ ಕಾರ್ಯಾಚರಣೆಗೆ ಭದ್ರತೆ ಒದಗಿಸಿದ್ದೇವೆ
ಆರ್. ಶ್ರೀನಿವಾಸ ಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೆಂಗಳೂರು ದಕ್ಷಿಣ ಜಿಲ್ಲೆ

ಮಂಡಳಿ ಆದೇಶದಂತೆ ಬೀಗ: ಡಿ.ಸಿ

‘ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸಂಸ್ಥೆಯು ಮನರಂಜನೆ ಹಾಗೂ ಇತರ ಸಾಹಸ ಚಟುವಟಿಕೆ ನಡೆಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿರಲಿಲ್ಲ. ಈ ಕುರಿತು ಮಂಡಳಿಯ ಅಧಿಕಾರಿಗಳು ಸ್ಥಳ ಪರೀಶಿಲನೆ ನಡೆಸಿ ವರದಿ ನೀಡಿದ್ದರು. ಆ ಮೇರೆಗೆ ಮಂಡಳಿಯು ಜಾಲಿವುಡ್‌ನಲ್ಲಿ ನಡೆಯುತ್ತಿರುವ ಚಟುವಟಿಕೆ ಸ್ಥಗಿತಗೊಳಿಸಿ ಬೀಗಮುದ್ರೆ ಹಾಕುವಂತೆ ಆದೇಶ ಮಾಡಿತ್ತು. ಪೊಲೀಸ್ ಭದ್ರತೆಯಲ್ಲಿ ಜಾಲಿವುಡ್‌ಗೆ ಹಾಕಿ ಹಾಕಿ ಸೀಲಿಂಗ್ ಮಾಡಿದ್ದೇವೆ. ಮುಂದೇನು ಮಾಡಬೇಕೆಂಬುದನ್ನು ಮಂಡಳಿ ನಿರ್ಧರಿಸಲಿದೆ’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದರು.

ಹೈಕೋರ್ಟ್‌ ಮೊರೆ ಸಾಧ್ಯತೆ

ಬಿಗ್‌ಬಾಸ್‌ ಸ್ಪರ್ಧೆ ಶುರುವಾಗಿ 11 ದಿನವಾಗಿದೆ. ಈಗ ಜಿಲ್ಲಾಡಳಿತ ಬೀಗಮುದ್ರೆ ಹಾಕಿದ್ದು ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲು ಜಾಲಿವುಡ್‌ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಕೋರ್ಟ್‌ನಲ್ಲಿ ಮಂಡಳಿ ಆದೇಶಕ್ಕೆ ತಡೆಯಾಜ್ಞೆ ಸಿಗುವ ವಿಶ್ವಾಸ ಇರುವುದರಿಂದ ಮತ್ತೆ ಬಿಗ್‌ಬಾಸ್‌ ಷೋ ಮುಂದುವರಿಸಲು ಸ್ಪರ್ಧಿಗಳನ್ನು ಸಮೀಪದ ಈಗಲ್ಟನ್ ರೆಸಾರ್ಟ್‌ನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.