ರಾಮನಗರ: ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಣೆ ನಡೆಸುತ್ತಿದ್ದ ತಾಲ್ಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ಜಿಲ್ಲಾಡಳಿತ ಮಂಗಳವಾರ ಬೀಗಮುದ್ರೆಯ ಬಿಸಿ ಮುಟ್ಟಿಸಿದೆ.
ಆದರೆ, ಜಾಲಿವುಡ್ ನಿರ್ಲಕ್ಷ್ಯದಿಂದಾಗಿ ಜನಪ್ರಿಯ ಟಿ.ವಿ ರಿಯಾಲಿಟಿ ಷೋ ‘ಬಿಗ್ ಬಾಸ್’ ಇದೀಗ ಅಡಕತ್ತರಿಯಲ್ಲಿ ಸಿಲುಕಿದೆ. ಬುಧವಾರ ಈ ಬೆಳವಣಿಗೆ ಯಾವ ಆಯಾಮ ಪಡೆದುಕೊಳ್ಳಲಿದೆ? ಷೋ ಬೇರೆಡೆಗೆ ಸ್ಥಳಾಂತರವಾಗುವುದೇ ಎಂಬ ಕುತೂಹಲ ಮನೆ ಮಾಡಿದೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಿದ ನೋಟಿಸ್ ನಿರ್ಲಕ್ಷ್ಯಿಸಿದ್ದ ಜಾಲಿವುಡ್ ಸಂಸ್ಥೆಯಿಂದಾಗಿ, 11ನೇ ದಿನ ತಲುಪಿದ್ದ ‘ಬಿಗ್ ಬಾಸ್’ ಷೋ ಚಿತ್ರೀಕರಣ ಮಧ್ಯಾಹ್ನದಿಂದಲೇ ಸ್ಥಗಿತಗೊಂಡಿದೆ. ಜಿಲ್ಲಾಡಳಿತದ ಬೀಗಮುದ್ರೆ ಕಾರ್ಯಾಚರಣೆಯಿಂದ ತಪ್ಪಿಸಿಕೊಳ್ಳಲು ಸಂಸ್ಥೆಯು ರಾತ್ರಿವರೆಗೆ ನಡೆಸಿದ ಸರ್ಕಸ್ ಫಲ ಕೊಡಲಿಲ್ಲ.
ಪೊಲೀಸರೊಂದಿಗೆ ಸಂಜೆ ಪಾರ್ಕ್‌ಗೆ ಬಂದ ತಹಶೀಲ್ದಾರ್ ತೇಜಸ್ವಿನಿ ಅವರು, ಅಂತಿಮವಾಗಿ ಸಂಸ್ಥೆಯ ನಾಲ್ಕೂ ದ್ವಾರಗಳಿಗೆ ಬೀಗ ಜಡಿದು ಸೀಲಿಂಗ್ ಮಾಡಿದರು. ಆಯೋಜಕರು ವಿಧಿ ಇಲ್ಲದೆ ‘ಬಿಗ್ ಬಾಸ್’ ಸ್ಪರ್ಧಿಗಳನ್ನು ಸಮೀಪದ ಈಗಲ್ಟನ್ ರೆಸಾರ್ಟ್‌ಗೆ ಸ್ಥಳಾಂತರಿಸಿದ್ದಾರೆ. ಪಾರ್ಕ್‌ನ ಎಲ್ಲಾ ಚಟುವಟಿಕೆಗಳು ಸದ್ಯ ಸ್ಥಗಿತವಾಗಿವೆ.
ಎಲ್ಲರಿಗೂ ಶಾಕ್: ಪಾರ್ಕ್‌ನ ಪ್ರವೇಶದ್ವಾರಕ್ಕೆ ಬೀಗ ಜಡಿದ ತಹಶೀಲ್ದಾರ್ ನೇರವಾಗಿ ಬಿಗ್ ಬಾಸ್ ಷೋ ಸ್ಥಳಕ್ಕೆ ತೆರಳಿದರು. ಕೂಡಲೇ ಷೋ ಸ್ಥಗಿತಗೊಳಿಸಿ ಸ್ಪರ್ಧಿಗಳು ಹಾಗೂ ಪ್ರವಾಸಿಗರನ್ನು ಹೊರಕ್ಕೆ ಕಳಿಸುವಂತೆ ಸೂಚಿಸಿದರು. ಆಯೋಜಕರು ಎಲ್ಲಾ ಸ್ಪರ್ಧಿಗಳನ್ನು ಸ್ಟುಡಿಯೊದಲ್ಲಿರುವ ಮಿನಿ ಥಿಯೇಟರ್‌ನಲ್ಲಿ ಕೂರಿಸಿ, ಪರಿಸ್ಥಿತಿ ನಿಭಾಯಿಸುತ್ತಿದ್ದರು.
ಆದರೆ, ಥಿಯೇಟರ್‌ಗೆ ತೆರಳಿದ ತಹಶೀಲ್ದಾರ್ ಕೂಡಲೇ ಸ್ಪರ್ಧಿಗಳನ್ನು ಹೊರಕ್ಕೆ ಕಳಿಸುವಂತೆ ತಾಕೀತು ಮಾಡಿದರು. ಅಧಿಕಾರಿಗಳು ಮತ್ತು ಪೊಲೀಸರನ್ನು ಕಂಡ ಸ್ಪರ್ಧಿಗಳು ಶಾಕ್ ಆದರು. ಆಯೋಜಕರು ಸ್ಪರ್ಧಿಗಳನ್ನು ಕಾರುಗಳಲ್ಲಿ ಹಿಂದಿನ ದ್ವಾರಗಳಲ್ಲಿ ಈಗಲ್ಟನ್ ರೆಸಾರ್ಟ್‌ಗೆ ಸ್ಥಳಾಂತರ ಮಾಡಿದರು.
ಸಂಜೆಯಿಂದ ರಾತ್ರಿ 8 ಗಂಟೆಯವರೆಗೆ ಸ್ಥಳದಲ್ಲಿದ್ದ ತಹಶೀಲ್ದಾರ್ ಎಲ್ಲಾ ದ್ವಾರಗಳಿಗೆ ಬೀಗ ಸೀಲ್ ಮಾಡಿಸಿದ ಬಳಿಕವೇ ಅಲ್ಲಿಂದ ಹೊರಟರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಪ್ಪ, ರಾಮನಗರ ಡಿವೈಎಸ್ಪಿ ಬಿ.ಎನ್. ಶ್ರೀನಿವಾಸ್, ಬಿಡದಿ ಠಾಣೆ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ಸ್ಥಳದಲ್ಲಿದ್ದರು. ಸ್ಥಳದಲ್ಲಿ ಕೆಎಸ್‌ಆರ್‌ಪಿ ವಾಹನ ಬೀಡು ಬಿಟ್ಟಿತ್ತು.
ನೋಟಿಸ್ ಸ್ವೀಕರಿಸಲು ಹಿಂದೇಟು: ನಿಯಮ ಉಲ್ಲಂಘನೆ ಕುರಿತು ಕಂದಾಯ ನಿರೀಕ್ಷಕ ಮತ್ತು ಗ್ರಾಮ ಆಡಳಿತಾಧಿಕಾರಿ ತೆರಳಿದ್ದಾಗ, ಸಂಸ್ಥೆಯವರು ನೋಟಿಸ್ ಪಡೆದಿರಲಿಲ್ಲ. ಹಾಗಾಗಿ, ಖುದ್ದು ನೋಟಿಸ್ ನೀಡಲು ತಹಶೀಲ್ದಾರ್ ಹೋಗಿದ್ದಾಗಲೂ, ನಾವು ಪಡೆಯುವುದಿಲ್ಲ ಎಂದು ವಾಗ್ವಾದ ನಡೆಸಿದ್ದರು.
ಮಂಡಳಿ ಆದೇಶ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರಿಂದ, ತಹಶೀಲ್ದಾರ್ ಅವರು ಪೊಲೀಸ್ ನೆರವಿನೊಂದಿಗೆ ಬೀಗಮುದ್ರೆ ಹಾಕಿದರು. ಇತ್ತ ಸಂಸ್ಥೆಗೆ ಬೀಗ ಬೀಳುತ್ತಿದ್ದಂತೆ ಕನ್ನಡಪರ ಸಂಘಟನೆಗಳ ಮುಖಂಡರು, ಪ್ರವೇಶ ದ್ವಾರದ ಎದುರು ಸಂಸ್ಥೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲಾಡಳಿತದ ಕ್ರಮಕ್ಕೆ ಜೈಕಾರ ಹಾಕಿದರು.
ನಿಯಮ ಉಲ್ಲಂಘನೆ ಕುರಿತು ಜಿಬಿಡಿಎ ಸಹ ಜಾಲಿವುಡ್ ಸಂಸ್ಥೆಗೆ ನೋಟಿಸ್ ನೀಡಿತ್ತು. ಆಗ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಉದ್ದಟತನ ತೋರಿದ್ದರು. ನಿಯಮ ಉಲ್ಲಂಘಿಸಿದ ಸಂಸ್ಥೆಗೆ ತಕ್ಕ ಶಾಸ್ತಿ ಆಗಿದೆ– ಜಿ.ಎನ್. ನಟರಾಜ್ ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಪಾರ್ಕ್‌ಗೆ ಬಳಸುವ ನೀರನ್ನು ಸಂಸ್ಕರಿಸದೆ ಹಾಗೆಯೇ ಹೊರಕ್ಕೆ ಬಿಡಲಾಗುತ್ತಿದೆ.– ಪಾರ್ಕ್ ಒಳಗೆ 250 ಕೆಎಲ್‌ಡಿ (ಕಿಲೋಲೀಟರ್) ಸಾಮರ್ಥ್ಯದ ಕೊಳಚೆ ನೀರು ಸಂಸ್ಕರಿಸುವ ಎಸ್‌ಟಿಪಿ (ಕೊಳಚೆ ನೀರು ಸಂಸ್ಕರಣೆ ಘಟಕ) ಇದೆ ಎಂದು ಸಂಸ್ಥೆ ಹೇಳಿದರೂ ಘಟಕ ಕೆಲಸ ಮಾಡುತ್ತಿಲ್ಲ.– ಪಾರ್ಕ್‌ನಲ್ಲಿ 625 ಕೆವಿಎ ಮತ್ತು 500 ಕೆವಿಎ ಡಿ.ಜೆ ಸೆಟ್ ಅಳವಡಿಸಿರುವುದರಿಂದ ಪರಿಸರ ಮತ್ತು ಶಬ್ದಮಾಲಿನ್ಯ ಉಂಟಾಗುತ್ತಿದೆ.– ತ್ಯಾಜ್ಯ ನಿರ್ವಹಣೆ ಸರಿಯಾಗಿಲ್ಲ. ಹಸಿ ಮತ್ತು ಒಣ ಕಸ ವಿಂಗಡಿಸದೆ ಹಾಗೆಯೇ ವಿಲೇವಾರಿ ಮಾಡಲಾಗುತ್ತಿದೆ.
ಜಾಲಿವುಡ್ ಸ್ಟುಡಿಯೋಗೆ ಬೀಗ ಬಿದ್ದಿರುವುದರಿಂದ ಬಿಗ್ ಬಾಸ್ ಷೋ ಚಿತ್ರೀಕರಣ ಸ್ಥಗಿತಗೊಂಡಿದೆ. ಇದರಿಂದಾಗಿ ಷೋಗೆ ಹಿನ್ನೆಡೆಯಾಗಿದೆ. ಬೀಗಮುದ್ರೆ ಪ್ರಶ್ನಿಸಿ ಸಂಸ್ಥೆಯು ಬುಧವಾರ ಕೋರ್ಟ್ ಮೊರೆ ಹೋಗಲು ಸಿದ್ದತೆ ನಡೆಸಿದೆ. ಒಂದು ವೇಳೆ ಕೋರ್ಟ್‌ನಿಂದ ತಡೆಯಾಜ್ಞೆ ಸಿಕ್ಕರೆ ಸ್ಟುಡಿಯೊದಲ್ಲೇ ಷೋ ಮುಂದುವರಿಯಲಿದೆ. ಇಲ್ಲದಿದ್ದರೆ ಬೇರೆಡೆಗೆ ಸ್ಥಳಾಂತರಿಸಲು ಆಯೋಜಕರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಕುರಿತು ಕಲರ್ಸ್ ಕನ್ನಡ ಟಿ.ವಿ ಚಾನೆಲ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.