ADVERTISEMENT

ಪಾದಯಾತ್ರೆಯಲ್ಲಿ ಮುನಿಸು ಬಹಿರಂಗ: ಸಿಪಿವೈ ಬೆಂಬಲಿಗರ ಮೇಲೆ ಎಚ್‌ಡಿಕೆ ಗರಂ

‘ಟಿಕೆಟ್ ಘೋಷಿಸಿ’ ಎಂದು ಕೂಗಿದ ಸಿಪಿವೈ ಬೆಂಬಲಿಗರ ಮೇಲೆ ಎಚ್‌ಡಿಕೆ ಗರಂ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2024, 23:40 IST
Last Updated 5 ಆಗಸ್ಟ್ 2024, 23:40 IST
<div class="paragraphs"><p>ಬಿಜೆಪಿ–ಜೆಡಿಎಸ್‌ನ ಮೈಸೂರು ಚಲೋ ಪಾದಯಾತ್ರೆ ಸೋಮವಾರ ಚನ್ನಪಟ್ಟಣ ತಲುಪಿದಾಗ ನಡೆದ ಬಹಿರಂಗ ಸಮಾವೇಶವನ್ನು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿದರು.</p></div>

ಬಿಜೆಪಿ–ಜೆಡಿಎಸ್‌ನ ಮೈಸೂರು ಚಲೋ ಪಾದಯಾತ್ರೆ ಸೋಮವಾರ ಚನ್ನಪಟ್ಟಣ ತಲುಪಿದಾಗ ನಡೆದ ಬಹಿರಂಗ ಸಮಾವೇಶವನ್ನು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿದರು.

   

ಚನ್ನಪಟ್ಟಣ (ರಾಮನಗರ): ಮುಡಾ ಹಗರಣದ ವಿರುದ್ಧ ಬಿಜೆಪಿ–ಜೆಡಿಎಸ್‌ ಜಂಟಿಯಾಗಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ವೇಳೆ ಚನ್ನಪಟ್ಟಣ ಉಪ ಚುನಾವಣೆ ಕುರಿತಂತೆ ಮೈತ್ರಿ ನಾಯಕರ ನಡುವಿನ ಮುನಿಸು, ಅಸಮಾಧಾನ ಬಹಿರಂಗಗೊಂಡಿತು.

ಪಾದಯಾತ್ರೆಯಲ್ಲಿ ಬಿಜೆಪಿ ನಾಯಕರ ಜೊತೆ ಕೆಲ ಹೊತ್ತು ಹೆಜ್ಜೆ ಹಾಕಿದ ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿ ಯೋಗೇಶ್ವರ್, ನಂತರ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಬಹಿರಂಗ ಸಮಾವೇಶದ ವೇದಿಕೆಯಲ್ಲೂ ಅವರ ಗೈರು ಎದ್ದು ಕಾಣುತ್ತಿತ್ತು. ಪಾದಯಾತ್ರೆ ಮಾರ್ಗದಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ಗಳಲ್ಲಿ ಸಿಪಿವೈ ಭಾವಚಿತ್ರ ಕಾಣಲಿಲ್ಲ. ಎಲ್ಲೆಲ್ಲೂ ನಿಖಿಲ್ ಭಾವಚಿತ್ರವೇ ಎದ್ದು ಕಾಣುತ್ತಿತ್ತು.

ADVERTISEMENT

ಎಚ್‌.ಡಿ. ಕುಮಾರಸ್ವಾಮಿ ಭಾಷಣ ಮಾಡುವಾಗ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಬೆಂಬಲಿಗರು ‘ಸಿಪಿವೈಗೆ ಚನ್ನಪಟ್ಟಣ ಟಿಕೆಟ್ ಘೋಷಿಸಿ’ ಎಂದು ಕೂಗತೊಡಗಿದರು. ಆಗ ಸಿಟ್ಟಿಗೆದ್ದ ಎಚ್‌ಡಿಕೆ, ‘ಚನ್ನಪಟ್ಟಣದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಿದೆ ಎಂದು ಗದರಿದರು.

‘ಎರಡೂ ಪಕ್ಷದವರು ಮೊದಲು ನಿಷ್ಠೆ ತೋರಿಸಿ. ನಾವೀಗ ಟಿಕೆಟ್ ಹಂಚೋಕೆ ಬಂದಿಲ್ಲ. ಸಮಾನ ಮನಸ್ಕರ ಹೆಸರಿನಲ್ಲಿ, ಬಿಜೆಪಿ ಬಾವುಟ ಇಟ್ಟುಕೊಂಡು ಸಭೆ ಕರೆಯುತ್ತೀರಾ? ಇಲ್ಲಿ ಎನ್‌ಡಿಎ ಉಳಿಯಬೇಕಿದ್ದು, ಕಾಂಗ್ರೆಸ್‌ಗೆ ಕ್ಷೇತ್ರ ಬಿಟ್ಟು ಕೊಡುವುದಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಮಿತಿ ನಾಯಕರು ದೆಹಲಿಯಲ್ಲಿ ಟಿಕೆಟ್ ಕುರಿತು ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾರೇ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸಬೇಕು’ ಎಂದು ಹರಿಹಾಯ್ದರು.

ಡಿ.ಕೆ. ಸಹೋದರರ ವಿರುದ್ಧ ಭಾಷಣದಲ್ಲಿ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಮಾತಿನ ಮಧ್ಯೆ, ‘ಚನ್ನಪಟ್ಟಣದ ಕೆರೆಗಳಿಗೆ ನೀರು ಹರಿದಿದ್ದು ನಾನು ಸದಾನಂದ ಗೌಡ ಹಾಗೂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ. ಈ ಅಣ್ಣ–ತಮ್ಮಂದಿರು ಆಗ ಬಂದು ನೀರು ತುಂಬಿಸಲಿಲ್ಲ’ ಎಂದರು. ಹಿಂದಿನ ಭಾಷಣಗಳಲ್ಲಿ ಯೋಗೇಶ್ವರ್ ಅವರು ಕೆರೆ ತುಂಬಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದಿದ್ದ ಕುಮಾರಸ್ವಾಮಿ, ಇಂದು ಅಪ್ಪಿತಪ್ಪಿಯೂ ಅವರ ಹೆಸರೇಳಲಿಲ್ಲ.

ವೇದಿಕೆಯಲ್ಲಿ ಸಿಪಿವೈ ಗೈರು: ಇತ್ತೀಚೆಗೆ ತಮ್ಮ ತಂದೆ ನಿಧನರಾದ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಗೈರಾಗಿರುವುದಾಗಿ ಹೇಳಿಕೊಂಡಿದ್ದ ಯೋಗೇಶ್ವರ್‌, ಇಂದು ಕೆಲ ಹೊತ್ತು ಪ್ರತ್ಯಕ್ಷವಾಗಿ ಮಾಯವಾದರು. ಕ್ಷೇತ್ರದಲ್ಲಿ ಸಿಪಿವೈ ಬದಲು ನಿಖಿಲ್ ಕಣಕ್ಕಿಳಿಸಲು ಎಚ್‌ಡಿಕೆ ಒಲವು ತೋರಿರುವುದೇ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಕೇಳಿದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಿಪಿವೈ, ‘ನೆನ್ನೆ ಹಾಕಿದ್ದ ಕಾಂಗ್ರೆಸ್ ಫ್ಲೆಕ್ಸ್‌ ಅನ್ನು ಇಂದು ಕಿತ್ತುಕೊಂಡು ಹೋಗಿದ್ದಾರೆ. ಇಂದು ಹಾಕಿರುವ ಬಿಜೆಪಿ–ಜೆಡಿಎಸ್‌ ಫ್ಲೆಕ್ಸ್ ಅನ್ನು ನಾಳೆ ಕಿತ್ತುಕೊಂಡು ಹೋಗುತ್ತಾರೆ. ಹಾಗಾಗಿ, ನಾನು ಅದರ ಬಗ್ಗೆ ಚಿಂತೆ ಮಾಡುವುದಿಲ್ಲ. ನನ್ನ ಭಾವಚಿತ್ರ ಕ್ಷೇತ್ರದ ಜನರ ಮನಸ್ಸಿನಲ್ಲಿದೆ. ಜನಗಳ ಹೃದಯದಲ್ಲಿರುವ ನಾನು ಏನಾಗಬೇಕೇಂದು ಜನ ತೀರ್ಮಾನಿಸುತ್ತಾರೆ’ ಎಂದು ಮಾರ್ಮಿಕವಾಗಿ ಹೇಳಿದರು.

ನಾಯಕರ ಪ್ರತ್ಯೇಕ ನಡಿಗೆ: ಕೆಂಗಲ್‌ನಿಂದ ಬೆಳಿಗ್ಗೆ 9.30ಕ್ಕೆ ಶುರುವಾಗಬೇಕಿದ್ದ ಪಾದಯಾತ್ರೆಗೆ ಬಿಜೆಪಿ ನಾಯಕರು ಬಂದರೂ ಜೆಡಿಎಸ್‌ ನಾಯಕರು ಬರಲಿಲ್ಲ. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಜೆಡಿಎಸ್‌ನವರ ಅನುಪಸ್ಥಿತಿಯಲ್ಲೇ 10.30ರ ಸುಮಾರಿಗೆ ಪಾದಯಾತ್ರೆ ಶುರು ಮಾಡಿದರು.

11 ಗಂಟೆಗೆ ಕೆಂಗಲ್‌ಗೆ ಬಂದ ಕುಮಾರಸ್ವಾಮಿ ಮತ್ತು ನಿಖಿಲ್ ಅವರು, ದೇವರ ದರ್ಶನ ಪಡೆದು ಕಾರಿನಲ್ಲಿ ತೆರಳಿ ಪಾದಯಾತ್ರೆ ಸೇರಿಕೊಂಡರು. ಮುಂದೆ ವಿಜಯೇಂದ್ರ ಮತ್ತು ಹಿಂದೆ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಎರಡೂ ಪಕ್ಷದ ನಾಯಕರ ಪಾದಯಾತ್ರೆ, ಚನ್ನಪಟ್ಟಣದಲ್ಲಿ ಒಟ್ಟಾಯಿತು. ಬಹಿರಂಗ ಸಮಾವೇಶದಲ್ಲಿ ಭಾಷಣ ಮಾಡುವಾಗ ಎಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.

ಸಿದ್ದರಾಮಯ್ಯ ಈಗ ಲೂಟಿರಾಮಯ್ಯ ಆಗಿದ್ದಾರೆ. ಅವರಿಗೆ ಮನೆ ಕಟ್ಟೋಕೆ 14 ನಿವೇಶನ ಬೇಕಿತ್ತಾ? ಅವರು ಬೇಗ ಸಿ.ಎಂ ಕುರ್ಚಿಯಿಂದ ಇಳಿಯಲಿ ಎಂದೇ ಶಿವಕುಮಾರ್ ಒಬ್ಬರೇ ಜನಾಂದೋಲನ ಕಾರ್ಯಕ್ರಮ ಮಾಡುತ್ತಿದ್ದಾರೆ
– ಆರ್. ಅಶೋಕ ವಿರೋಧ ಪಕ್ಷದ ನಾಯಕ
ಕಾರ್ಯಕರ್ತೆ ಸಾವು; ಮತ್ತೊಬ್ಬರು ಅಸ್ವಸ್ಥ
ಪಾದಯಾತ್ರೆಗೆ ಬಂದಿದ್ದ ಬೆಂಗಳೂರಿನ ಬನಶಂಕರಿಯ ಜೆಡಿಎಸ್ ಕಾರ್ಯಕರ್ತೆ ಗೌರಮ್ಮ (45) ಅವರು ಕೆಂಗಲ್ ಬಳಿ ಬೆಳಿಗ್ಗೆ 11.30ರ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟರು. ಪಾದಯಾತ್ರೆಯಲ್ಲಿ ಸಾಗುತ್ತಿದ್ದ ಅವರು ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರು. ಸ್ಥಳದಲ್ಲಿದ್ದವರು ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆತಂದರು. ಅಷ್ಟೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಗೌರಮ್ಮ ಅವರಿಗೆ ನಮನ ಸಲ್ಲಿಸಿದರು. ಚನ್ನಪಟ್ಟಣ ಸಮೀಪದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದ ಬೆಂಗಳೂರಿನ ಜಯನಗರ ಮಂಡಲದ ಬಿಜೆಪಿ ಉಪಾಧ್ಯಕ್ಷ ಶಂಕರ್ ಎಂಬುವರು ಅಸ್ವಸ್ಥರಾಗಿ ಕುಸಿದರು. ತಕ್ಷಣ ಅವರನ್ನು ಚನ್ನಪಟ್ಟಣದ ದಾಖಲಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಮಾಡಿ ಧೈರ್ಯ ತುಂಬಿದರು.
ವರದಿಗಾರರ ಮೇಲೆ ಹಲ್ಲೆ
ಚನ್ನಪಟ್ಟಣ ಬಳಿ ಬಂದ ಪಾದಯಾತ್ರೆ ವರದಿ ಮಾಡುತ್ತಿದ್ದ ನ್ಯೂಸ್ ಫಸ್ಟ್ ಸುದ್ದಿವಾಹಿನಿಯ ವರದಿಗಾರರಾದ ಮೋಹನ್ ಜಿ. ಮಂಜುನಾಥ್ ಕ್ಯಾಮೆರಾಮನ್ ಅವಿರಾಜ್ ಹಾಗೂ ಚಾಲಕ ಆನಂದ್ ಅವರ ಮೇಲೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಬೆಂಬಲಿಗರು ಹಲ್ಲೆ ನಡೆಸಿದರು. ವರದಿಗಾರರಿದ್ದ ಕಾರು ತಡೆದ ಬೆಂಬಲಿಗರು ಮುಂದಕ್ಕೆ ಹೋಗಲು ಅವಕಾಶ ನೀಡಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಪೂಂಜಾ ಸೇರಿದಂತೆ ಬೆಂಬಲಿಗರು ‘ಮಾಧ್ಯಮಗಳಿಂದ ಏನೂ ಕಿತ್ತುಕೊಳ್ಳೋಕೆ ಆಗಲ್ಲ’ ಎಂದು ಕೆಟ್ಟದಾಗಿ ನಿಂದಿಸಿದರು. ಆಗ ಕೆಲ ಬೆಂಬಲಿಗರು ಹಲ್ಲೆ ನಡೆಸಿದರು. ಘಟನೆ ಕುರಿತು ಮಾಧ್ಯಮದವರು ಯಡಿಯೂರಪ್ಪ ಮತ್ತು ವಿಜಯೇಂದ್ರ ಗಮನಕ್ಕೆ ತಂದಾಗ ಶಾಸಕ ಮತ್ತು ಬೆಂಬಲಿಗರು ಕ್ಷಮೆ ಯಾಚಿಸಿದರು ಎಂದು ಮೂಲಗಳು ತಿಳಿಸಿವೆ.
ಸ್ಪರ್ಧೆ ಶತಸಿದ್ಧ; ಪಕ್ಷ ಗೊತ್ತಿಲ್ಲ: ಯೋಗೇಶ್ವರ್
ಚನ್ನಪಟ್ಟಣ: ‘ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಶತಸಿದ್ಧ. ಆದರೆ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬ ತೀರ್ಮಾನವನ್ನು ಬೆಂಬಲಿಗರು, ಹಿತೈಷಿಗಳಿಗೆ ಬಿಟ್ಟಿದ್ದೇನೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ. ಸಭೆಯೊಂದರಲ್ಲಿ ಮಾತನಾಡಿ, ‘ಚನ್ನಪಟ್ಟಣ ಜನತೆ ನನ್ನ ಸ್ಪರ್ಧೆಯನ್ನು ಬಯಸುತ್ತಿದೆ. ನಿಮ್ಮ ಜೊತೆ ಇರುತ್ತೇವೆ ಎಂದು ಜನರು ಪಕ್ಷಾತೀತವಾಗಿ ಹೇಳುತ್ತಿದ್ದಾರೆ. ಆ.11ರಂದು ತಾಲ್ಲೂಕಿನಲ್ಲಿ ‘ನಮ್ಮ ಶಾಸಕ, ನಮ್ಮ ಹಕ್ಕು’ ಸ್ವಾಭಿಮಾನಿ ಸಮಾವೇಶ ನಡೆಯಲಿದೆ. ಇದು ತಾಲ್ಲೂಕಿನ ರಾಜಕೀಯ ಅಸ್ಮಿತೆ, ಸ್ವಾಭಿಮಾನವನ್ನು ತೀರ್ಮಾನಿಸುವ ದಿಕ್ಸೂಚಿ ಆಗಲಿದೆ. ನಾನು ರಾಜಕೀಯದಲ್ಲಿ ಮುಂದುವರೆಯುವ ಅಥವಾ ರಾಜಕೀಯ ಬಿಡುವ, ಚುನಾವಣೆಗೆ ಸ್ವರ್ಧಿಸುವ ಇಲ್ಲವೇ ಹಿಂದೆ ಸರಿಯುವ ನಿರ್ಧಾರ ಆ ಸಭೆಯಲ್ಲಿ ಅಂತಿಮವಾಗಲಿದೆ’ ಎಂದು ಹೇಳಿದರು.
‘ದೆಹಲಿಯಲ್ಲಿ ನಿರ್ಧಾರ’
‘ಮೈತ್ರಿ ಅಭ್ಯರ್ಥಿ ಆಗುವ ನೀರಿಕ್ಷೆ ಇತ್ತು. ಅದಕ್ಕೆ ಪೂರಕ ವಾತಾ ವರಣವೂ ಇತ್ತು. ಆದರೆ ರಾಜಕೀಯ ಕಾರಣಗಳಿಂದ ಅಪಸ್ಪರ ಕೇಳಿ ಬರುತ್ತಿದೆ. ದೆಹಲಿಯಿಂದ ಅಂತಿಮ ನಿರ್ಧಾರ ಹೊರ ಬೀಳಲಿದೆ. ಈ ಬಗ್ಗೆ ಚರ್ಚಿಸಲು ಸಂಸದ ಬಸವರಾಜ ಬೊಮ್ಮಾಯಿ ಭೇಟಿಯಾಗುವಂತೆ ತಿಳಿಸಿದ್ದಾರೆ’ ಎಂದು ಯೋಗೇಶ್ವರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.