ADVERTISEMENT

ರಾಮನಗರದಲ್ಲಿ ರಾವಣರ ಆಡಳಿತ: ಸಿಪಿವೈ ಟೀಕೆ

ಬಿಜೆಪಿ ಬೂತ್‌ ಮಟ್ಟದ ಕಾರ್ಯಕರ್ತರ ಸಭೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 12:05 IST
Last Updated 19 ಮಾರ್ಚ್ 2019, 12:05 IST
ರಾಮನಗರದಲ್ಲಿ ಮಂಗಳವಾರ ನಡೆದ ಬಿಜೆಪಿ ಸಭೆಯಲ್ಲಿ ಸಿ.ಪಿ. ಯೋಗೇಶ್ವರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮುನಿರಾಜು, ರುದ್ರೇಶ್‌ ಪಾಲ್ಗೊಂಡರು
ರಾಮನಗರದಲ್ಲಿ ಮಂಗಳವಾರ ನಡೆದ ಬಿಜೆಪಿ ಸಭೆಯಲ್ಲಿ ಸಿ.ಪಿ. ಯೋಗೇಶ್ವರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮುನಿರಾಜು, ರುದ್ರೇಶ್‌ ಪಾಲ್ಗೊಂಡರು   

ರಾಮನಗರ: ‘ಡಿ.ಕೆ. ಶಿವಕುಮಾರ್‌ರ ಕಪ್ಪು ಸಾಮ್ರಾಜ್ಯದ ಅಧಃಪತನ ಪ್ರಾರಂಭವಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್‌ ಹೇಳಿದರು.

ಇಲ್ಲಿನ ಆರ್‌ವಿಸಿಎಸ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಬೂತ್ ಮಟ್ಟದ ಪ್ರಮುಖರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ರಾಮನಗರ ಜಿಲ್ಲೆಯಲ್ಲಿ ರಾಮನಂತವರು ಆಡಳಿತ ನಡೆಸಬೇಕಿತ್ತು. ಆದರೆ ರಾವಣನಂತವರ ದುರಾಡಳಿತದಿಂದ ಜನರು ಕುಡಿಯಲು ನೀರಿಲ್ಲದೆ, ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅಧಿಕಾರದ ದರ್ಪದಿಂದ ಜನರನ್ನು ಶೋಷಣೆ ಮಾಡುತ್ತಿರುವ ಇಂತವರಿಗೆ ಈ ಬಾರಿಯ ಚುನಾವಣೆ ತಕ್ಕ ಉತ್ತರ ನೀಡಲಿದೆ ಎಂದು ತಿಳಿಸಿದರು.

‘ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕಿ ಅನಿತಾ, ಇವರ ಜತೆಗೆ ಕಾಂಗ್ರೆಸ್‌ನ ಪ್ರಭಾವಿಗಳಾದ ಸಚಿವ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಈ ಕ್ಷೇತ್ರದಲ್ಲಿ ಇದ್ದಾರೆ. ಇವರೆಲ್ಲ ಸ್ವಾರ್ಥಕ್ಕಾಗಿ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿದ್ದಾರೆ. ಇವರ ದುರಾಡಳಿತದಿಂದ ಜನರು ಬೇಸತ್ತಿದ್ದು, ಮೈತ್ರಿಯನ್ನು ಒಪ್ಪುತ್ತಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ ಎಂದರು.

ADVERTISEMENT

‘ಎಂಟು ತಿಂಗಳಿನಿಂದ ರಾಜಕೀಯ ಚಟುವಟಿಕೆಯಿಂದ ದೂರವಿದ್ದೆ. ಅಷ್ಟೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಚುನಾವಣೆಯಲ್ಲಿ ನನಗೆ ಮನ್ನಣೆ ಸಿಗಲಿಲ್ಲ ಎಂಬ ಬೇಸರವಿತ್ತು. ಈಗಿನಿಂದ ಸಕ್ರಿಯ ರಾಜಕಾರಣಕ್ಕೆ ಮರಳುತ್ತೇನೆ’ ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಪ್ರಭಾರಿ ಕಟ್ಟಾಸುಬ್ರಹ್ಮಣ್ಯ ನಾಯ್ಡು ಮಾತನಾಡಿ ‘ಲೋಕಸಭಾ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ಮಾಡಲು ಸಣ್ಣಪುಟ್ಟ ಪಕ್ಷಗಳು ಒಂದಾಗಿವೆ. ತಮ್ಮ ಕುಟುಂಬದವರನ್ನು, ಮಕ್ಕಳನ್ನು ಶಾಸಕರನ್ನಾಗಿ, ಸಚಿವರನ್ನಾಗಿ ಮಾಡಲು ಶ್ರಮಿಸುತ್ತಿವೆ. ಇವರಿಗೆಲ್ಲಾ ದೇಶದ ಅಭಿವೃದ್ಧಿ ಬೇಕಾಗಿಲ್ಲ. ಇಂತವರ ವಿರುದ್ಧ ಜನರು ಜಾಗೃತಿಗೊಳ್ಳಬೇಕು’ ಎಂದು ತಿಳಿಸಿದರು.

‘ನರೇಂದ್ರ ಮೋದಿ ನಿಸ್ವಾರ್ಥದಿಂದ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮಾಡಿರುವ ಸಾಧನೆಗಳನ್ನು ಜನರಿಗೆ ತಿಳಿಸಬೇಕು. ಪಕ್ಷದ ಪದಾಧಿಕಾರಿಗಳಾಗಿರುವವರು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಅವರ ಬದಲಿಗೆ ಬೇರೊಬ್ಬರನ್ನು ನೇಮಿಸಲಾಗುತ್ತದೆ’ ಎಂದು ಎಚ್ಚರಿಸಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮುನಿರಾಜು ಮಾತನಾಡಿ ರಾಮನಗರ ಜಿಲ್ಲೆಯಲ್ಲಿ ಕೆಲವರು ನಮ್ಮ ದಬ್ಬಾಳಿಕೆ, ದೌರ್ಜನ್ಯವನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೀಗುತ್ತಿದ್ದಾರೆ. ಇಂತವರಿಗೆ ಸೂಕ್ತ ಪಾಠ ಕಲಿಸಬೇಕಿದೆ. ಕಳೆದ ಬಾರಿಯ ಉಪಚುನಾವಣೆಯಲ್ಲಿ ಪಕ್ಷಕ್ಕೆ ಆದ ಮುಜುಗರದ ವಿರುದ್ಧ ಸೇಡನ್ನು ತೀರಿಸಿಕೊಳ್ಳಬೇಕು ಎಂದು ತಿಳಿಸಿದರು.

ಡಿ.ಕೆ. ಸುರೇಶ್ ಕೇಂದ್ರ ಸರ್ಕಾರದ ಅನುದಾನದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ, ತಾವು ಸ್ಥಾಪಿಸಿದ್ದು ಎಂದು ಪ್ರಚಾರ ಪಡೆಯುತ್ತಿದ್ದಾರೆ. ಈ ವಿಷಯವನ್ನು ಪಕ್ಷದ ಮುಖಂಡರು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್ ಮಾತನಾಡಿ ಜಿಲ್ಲೆಯಲ್ಲಿ ನಡೆಯುವ ನಕಲಿ ಮತದಾನವನ್ನು ತಡೆಗಟ್ಟಬೇಕು. ಕನಕಪುರದ ಸಹೋದರರ ಗೂಂಡಾಗಿರಿಗೆ ಯಾರೂ ಹೆದರಿಕೊಳ್ಳಬಾರದು. ಪಕ್ಷದ ಕಾರ್ಯಕರ್ತರು ಜನರಲ್ಲಿ ಧೈರ್ಯ ತುಂಬಿ, ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಮಾಡಬೇಕು ಎಂದು ತಿಳಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್ ಗೌಡ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು. ಉಪಚುನಾವಣೆಯಲ್ಲಿ ಪಕ್ಷಾಂತರಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಅವಮಾನ ಅನುಭವಿಸಲಾಯಿತು. ಅಭ್ಯರ್ಥಿ ಯಾರೇ ಆದರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಹಪ್ರಭಾರಿ ಜಿ. ಮರಿಸ್ವಾಮಯ್ಯ, ಬಿಜೆಪಿ ಪದಾಧಿಕಾರಿಗಳಾದ ಎಸ್.ಆರ್. ನಾಗರಾಜು, ಮಲವೇಗೌಡ, ಆರ್.ವಿ. ಸುರೇಶ್, ಎಂ. ವಿಜಯ್‌ಕುಮಾರ್, ಜಿ. ನಾಗರಾಜು, ಪಿ. ಶಬರಿ. ಚಂದ್ರಶೇಖರರೆಡ್ಡಿ, ಮಲ್ಲೇಶ್, ರಾಘವೇಂದ್ರ, ಭರತರಾಜ್, ನರಸಿಂಹಯ್ಯ, ಗುಲಾಬ್ ಜಾನ್, ನಗರಸಬಾ ಸದಸ್ಯರಾದ ಪಿ. ರವಿಕುಮಾರ್, ನಾಗೇಶ್ ಇದ್ದರು.

ಮುರುಳೀಧರ್ ಸ್ವಾಗತಿಸಿದರು. ಜಿ.ವಿ. ಪದ್ಮನಾಭ ನಿರೂಪಿಸಿದರು. ವರದರಾಜ್‌ಗೌಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.