
ರಾಮನಗರ: ರಾಜಧಾನಿಗೆ ಹೊಂದಿಕೊಂಡಂತಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಕೇಂದ್ರವಾದ ರಾಮನಗರ ಮತ್ತು ತಾಲ್ಲೂಕು ಕೇಂದ್ರವಾದ ಕನಕಪುರಕ್ಕೆ ಬಿಎಂಟಿಸಿ ಬಸ್ ಸೇವೆ ಆರಂಭಿಸಬೇಕೆಂಬ ಈ ಭಾಗದ ಜನರ ಬಹುದಿನಗಳ ಕನಸು ನನಸಾಗುವ ಗಳಿಗೆ ಬಂದಿದೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ರಾಮನಗರ ಮತ್ತು ಬನಶಂಕರಿಯಿಂದ ಕನಕಪುರಕ್ಕೆ ವಜ್ರ ವಿಸ್ತಾರ ನೂತನ ಹವಾನಿಯಂತ್ರಿತ ಬಿಎಂಟಿಸಿ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಬಸ್ ಸೇವೆಗೆ ಚಾಲನೆ ನೀಡಲಿದ್ದಾರೆ.
ಹಿಂದಿನಿಂದಲೂ ಬೇಡಿಕೆ: ಬೆಂಗಳೂರಿಗೆ ಸಮೀಪವಿರುವ ರಾಮನಗರ ಮತ್ತು ಕನಕಪುರದಿಂದ ಸಾವಿರಾರು ಮಂದಿ ಬೆಂಗಳೂರಿಗೆ ಉದ್ಯೋಗ, ವ್ಯಾಪಾರ ಸೇರಿದಂತೆ ವಿವಿಧ ಉದ್ದೇಶಗಳಿಗೆ ನಿತ್ಯ ಹೋಗಿ ಬರುತ್ತಲೇ ಇರುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ಈ ಮಾರ್ಗದಿಂದ ರಾಜಧಾನಿಗೆ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ತುಂಬಿ ತುಳುಕುತ್ತಿರುತ್ತವೆ. ಹಾಗಾಗಿ, ಬಿಎಂಟಿಸಿ ಬಸ್ ಸೇವೆಯನ್ನು ಎರಡೂ ನಗರಗಳಿಗೆ ವಿಸ್ತರಿಸಬೇಕು ಎಂಬ ಒತ್ತಾಯ ಬಹಳ ಹಿಂದಿನಿಂದಲೂ ಇದೆ.
ಎರಡೂವರೆ ವರ್ಷದ ಹಿಂದೆ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷವು ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ‘ಶಕ್ತಿ’ ಗ್ಯಾರಂಟಿ ಯೋಜನೆ ಜಾರಿಗೆ ತಂದಿತು. ಬಳಿಕ, ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಯಿತು. ಅದಕ್ಕೂ ಮುಂಚೆ ತಮ್ಮ ಪ್ರಯಾಣಕ್ಕೆ ಬೇರೆ ಸಾರಿಗೆ ಮೂಲಗಳನ್ನು ಅವಲಂಬಿಸಿದ್ದವರು ಬಸ್ ಅವಲಂಬಿಸಿದ್ದು ಸಹ ಇದಕ್ಕೆ ಕಾರಣ.
ಹೆಚ್ಚಾಗದ ಬಸ್‌ಗಳು: ಪ್ರಯಾಣಿಕರ ಹೆಚ್ಚಳಕ್ಕೆ ಪೂರಕವಾಗಿ ಬಸ್‌ಗಳ ಸಂಖ್ಯೆ ಹೆಚ್ಚಾಗಲಿಲ್ಲ. ಇದರಿಂದಾಗಿ ಬಸ್‌ಗಳು ಹಿಂದೆಂದಿಗಿಂತಲೂ ಹೆಚ್ಚು ತುಂಬಿ ತುಳುಕತೊಡಗಿದವು. ಬಸ್‌ಗಳಲ್ಲಿ ಕಾಲಿಡಲೂ ಜಾಗವಿಲ್ಲದ ಸ್ಥಿತಿ ಬೆಳಿಗ್ಗೆ ಮತ್ತು ಸಂಜೆ ಕಚೇರಿಗೆ ಹೋಗುವ ಸಮಯದಲ್ಲಿ ಸಾಮಾನ್ಯವಾಗಿದೆ. ಹಾಗಾಗಿ, ಬಿಎಂಟಿಸಿ ಬಸ್ ಸೇವೆಯನ್ನು ರಾಮನಗರ ಮತ್ತು ಕನಕಪುರಕ್ಕೆ ವಿಸ್ತರಿಸಬೇಕು ಎಂಬು ಕೂಗು ಮತ್ತಷ್ಟು ತೀವ್ರಗೊಂಡಿತ್ತು.
ಬಸ್‌ಗಾಗಿ ಅಲ್ಲಲ್ಲಿ ಪ್ರತಿಭಟನೆಗಳು ಸಹ ನಡೆದವು. ಹಲವೆಡೆ ಗ್ರಾಮಸ್ಥರು ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ ನಿದರ್ಶನಗಳಿವೆ. ವಿದ್ಯಾರ್ಥಿ ಸಂಘಟನೆಗಳು ಹಾಗೂ ಸಾರ್ವಜನಿಕರು ಬಿಎಂಟಿಸಿ ಬಸ್ ಸೇವೆಗಾಗಿ ಸಚಿವರು ಮತ್ತು ಶಾಸಕರಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಸಚಿವರು ಹಾಗೂ ಶಾಸಕರು ಭರವಸೆ ನೀಡುತ್ತಲೇ ಬಂದಿದ್ದರು. ಇದೀಗ ಆ ಭರವಸೆ ನಿಜವಾಗುತ್ತಿದೆ.
ಕಾರ್ಯಾಚರಣೆ ಮಿತಿ ವಿಸ್ತರಣೆ
ರಾಜಧಾನಿ ಹೊರವಲಯದ ಪಟ್ಟಣಗಳು ಮತ್ತು ನಗರಗಳಿಗೆ ಬಿಎಂಟಿಸಿ ಬಸ್ ಸೇವೆ ವಿಸ್ತರಣೆ ಮಾಡಬೇಕೆಂಬ ಕೂಗು ಎಲ್ಲೆಡೆ ಹೆಚ್ಚಾದ ಬಳಿಕ ಬಸ್ ಕಾರ್ಯಾಚರಣೆಗೆ ಇದ್ದ ಅಂತರದ ಮಿತಿಯನ್ನು ಬಿಎಂಟಿಸಿಯು 45 ಕಿ.ಮೀ.ಗೆ ವಿಸ್ತರಿಸಿ ಆದೇಶ ಹೊರಡಿಸಿತು.
ಈ ಕುರಿತು ಆಕ್ಷೇಪಣೆಗೆ ಒಂದು ತಿಂಗಳು ಗಡುವು ನೀಡಿದ್ದ ಬಿಎಂಟಿಸಿ ಅಂತಿಮವಾಗಿ 45 ಕಿ.ಮೀ. ಮಿತಿಯಲ್ಲಿರುವ ರಾಮನಗರ ಮತ್ತು ಕನಕಪುರಕ್ಕೆ ಬಸ್ ಕಾರ್ಯಾಚರಣೆ ಆರಂಭಿಸಿದೆ. ಬಿಡದಿ ಹಾರೋಹಳ್ಳಿಗೆ ಈಗಾಗಲೇ ಸಂಚಾರ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ರಾಮನಗರ ತಾಲ್ಲೂಕಿನ ಬಿಡದಿಗೆ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತವೆ. ಜೊತೆಗೆ ಪಟ್ಟಣದಲ್ಲಿ ಬಿಎಂಟಿಸಿ ಬಸ್ ನಿಲ್ದಾಣವೂ ಇದೆ. ಜಿಲ್ಲಾ ಕೇಂದ್ರವಾದ ರಾಮನಗರವು ಬಿಡದಿಯಿಂದ ಕೇವಲ 15 ಕಿ.ಮೀ. ದೂರದಲ್ಲಿದೆ. ಅದೇ ರೀತಿ ಮೆಜೆಸ್ಟಿಕ್‌ನಿಂದ ಸುಮಾರು 35 ಕಿ.ಮೀ. ಹಾರೋಹಳ್ಳಿಗೂ ಬಿಎಂಟಿಸಿ ಬಸ್‌ಗಳು ಬರುತ್ತವೆ. ಇಲ್ಲಿಂದ ಕನಕಪುರ ಕೇವಲ 18 ಕಿ.ಮೀ. ದೂರದಲ್ಲಿದೆ. ಇದೀಗ ಮೆಜೆಸ್ಟಿಕ್‌ನಿಂದ ರಾಮನಗರಕ್ಕೆ ಮತ್ತು ಬನಶಂಕರಿಯಿಂದ ಕನಕಪುರಕ್ಕೆ ಬಸ್ ಸಂಚಾರ ಶುರುವಾಗುತ್ತಿದೆ. ಇದರೊಂದಿಗೆ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.