ರಾಮನಗರ: ರಾಜ್ಯದ ಗಮನ ಸೆಳೆದಿದ್ದ ತಾಲ್ಲೂಕಿನ ಭದ್ರಾಪುರದ ರೈಲು ಹಳಿ ಪಕ್ಕ 15 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯ ಕುಟುಂಬಕ್ಕೆ ಸಿಕ್ಕಿದ್ದ ₹4,12,500 ಪರಿಹಾರ ಕೈ ತಪ್ಪಲಿದೆ. ಸಾವಿಗೆ ಜಾತಿ ದೌರ್ಜನ್ಯದ ಶಂಕೆ ವ್ಯಕ್ತಪಡಿಸಿ ಸಮಾಜ ಕಲ್ಯಾಣ ಇಲಾಖೆ ಪರಿಹಾರ ಕೊಟ್ಟಿತ್ತು. ಇದೀಗ, ಬಾಲಕಿಯದ್ದು ರೈಲು ಅಪಘಾತದ ಸಾವು ಎಂದು ಪೊಲೀಸರು ಹೇಳುತ್ತಿದ್ದಂತೆ ಪರಿಹಾರ ಹಿಂಪಡೆಯಲು ಮುಂದಾಗಿದೆ.
ಹಕ್ಕಿಪಿಕ್ಕಿ ಸಮುದಾಯದ 8ನೇ ತರಗತಿಯ ಮಾತು ಬಾರದ ಮತ್ತು ಕಿವಿ ಕೇಳಿಸದ ಬಾಲಕಿ ಖುಷಿ, ಮೇ 11ರಂದು ರಾತ್ರಿ ಕಾಣೆಯಾಗಿದ್ದಳು. ಮಾರನೇಯ ದಿನ ಬೆಳಿಗ್ಗೆ ಗ್ರಾಮದ ರೈಲು ಹಳಿ ಪಕ್ಕ ಅರೆನಗ್ನಾವಸ್ಥೆಯಲ್ಲಿ ಆಕೆ ಶವ ಪತ್ತೆಯಾಗಿತ್ತು. ದುಷ್ಕರ್ಮಿಗಳು ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆಂದು ಕುಟುಂಬದವರು ಸೇರಿದಂತೆ ಗ್ರಾಮಸ್ಥರು ಆರೋಪಿಸಿದ್ದರು.
ಘಟನೆ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತಲ್ಲದೆ, ಬಾಲಕಿ ಸಾವಿಗೆ ನ್ಯಾಯಕ್ಕೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆದಿತ್ತು. ಶಾಸಕ, ಸಂಸದರು, ವಿರೋಧ ಪಕ್ಷದ ನಾಯಕರು ಸೇರಿದಂತೆ ವಿವಿಧ ಸಂಘ–ಸಂಘಟನೆಗಳ ಪದಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಬಿಡದಿ ಠಾಣೆ ಪೊಲೀಸರು ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಚೆಕ್ ಕೊಟ್ಟಿದ್ದ ಡಿಸಿಎಂ: ‘ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು, ಬಾಲಕಿ ಸಾವಿಗೆ ಜಾತಿ ದೌರ್ಜನ್ಯ ಕಾರಣವಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಘಟನೆ ಬೆನ್ನಲ್ಲೇ (ಮೇ 14) ಗ್ರಾಮಕ್ಕೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೂಲಕ, ಸಮಾಜ ಇಲಾಖೆ ವತಿಯಿಂದ ₹4,12,500 ಮೊತ್ತದ ಪರಿಹಾರದ ಚೆಕ್ ಅನ್ನು ಬಾಲಕಿ ತಾಯಿ ಶೀಲಾ ಅವರಿಗೆ ವಿತರಿಸಲಾಗಿತ್ತು’ ಎಂದು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಯ ಕೊಲೆಯಲ್ಲಿ ಮೇಲ್ಜಾತಿಯ ವ್ಯಕ್ತಿಗಳ ಭಾಗಿ ಅನುಮಾನ ಇದ್ದಿದ್ದರಿಂದ, ಜಾತಿ ದೌರ್ಜನ್ಯದಡಿ ಸಾವನ್ನು ಪರಿಗಣಿಸಲಾಗಿತ್ತು. ಅದರಂತೆ, ಸಂತ್ರಸ್ತರ ಕುಟುಂಬಕ್ಕೆ ನೀಡುವ ₹8.25 ಲಕ್ಷ ಪರಿಹಾರದ ಪೈಕಿ, ಎಫ್‌ಐಆರ್ ಹಂತದಲ್ಲಿ ನೀಡುವ ಅರ್ಧ ಪರಿಹಾರ ಮೊತ್ತವನ್ನು ಬಾಲಕಿ ತಾಯಿಗೆ ವಿತರಿಸಲಾಗಿತ್ತು’ ಎಂದು ಹೇಳಿದರು.
‘ಇದೀಗ ಪೊಲೀಸರ ತನಿಖೆಯಲ್ಲಿ ಬಾಲಕಿಯದ್ದು ಕೊಲೆಯಲ್ಲ, ಬದಲಿಗೆ ರೈಲು ಅಪಘಾತದ ಸಾವು ಎಂಬುದು ಗೊತ್ತಾಗಿದೆ. ಹಾಗಾಗಿ, ಬಾಲಕಿ ಕುಟುಂಬಕ್ಕೆ ಜಾತಿ ದೌರ್ಜನ್ಯದಡಿ ಸಂಭವಿಸುವ ಸಾವಿಗೆ ನೀಡುವ ಪರಿಹಾರವು ಅನ್ವಯವಾಗದಿರುವುದರಿಂದ ಹಿಂಪಡೆಯಲು ತೀರ್ಮಾನಿಸಲಾಗಿದೆ. ಅದಕ್ಕಾಗಿ, ಪೊಲೀಸರ ವರದಿಗಾಗಿ ಕಾಯಲಾಗುತ್ತಿದೆ’ ಎಂದು ಹೇಳಿದರು.
ವಿಶೇಷ ಪ್ರಕರಣವೆಂದು ಪರಿಗಣಿಸಬಹುದೇ?
ನಿಯಮದ ಪ್ರಕಾರ ಬಾಲಕಿ ಕುಟುಂಬಕ್ಕೆ ಕೊಟ್ಟಿರುವ ಪರಿಹಾರವನ್ನು ಹಿಂಪಡೆಯಲು ಮುಂದಾಗಿರುವ ಸಮಾಜ ಕಲ್ಯಾಣ ಇಲಾಖೆಯು ಘಟನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಬಹುದೇ ಎಂಬ ಸಾಧ್ಯತೆ ಕಡೆಗೂ ಗಮನ ಹರಿಸಿದೆ. ಬಾಲಕಿ ಸಾವಿನಿಂದ ಕುಟುಂಬ ಆಘಾತದಲ್ಲಿದೆ. ಇಂತಹ ಸಂದರ್ಭದಲ್ಲಿ ಪರಿಹಾರ ಹಿಂಪಡೆಯುವುದು ಸರಿಯಲ್ಲ. ಹಾಗಾಗಿ ಮಾನವೀಯತೆ ನೆಲೆಯಲ್ಲಿ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಪರಿಹಾರ ನೀಡುವ ಸಾಧ್ಯತೆ ಕುರಿತು ಮೇಲಧಿಕಾರಿಗಳ ಸಲಹೆ ಕೋರಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.
ಪ್ರಕರಣದ ಹಿನ್ನೋಟ
ಮೇ 11: ಮನೆ ಬಳಿ ಆಟವಾಡಿಕೊಂಡಿದ್ದ ಬಾಲಕಿ ಖುಷಿ ರಾತ್ರಿ ನಾಪತ್ತೆ.
ಮೇ 12: ಬೆಳಿಗ್ಗೆ ಗ್ರಾಮದ ಬಳಿಯ ರೈಲು ಹಳಿ ಪಕ್ಕ ಬಾಲಕಿ ಶವ ಪತ್ತೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು.
ಮೇ 13: ಆರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಪೊಲೀಸರು. ಶವದ ಮರಣೋತ್ತರ ಪರೀಕ್ಷೆ. ವರದಿ ಬಂದಿಲ್ಲವೆಂದು ಮನೆ ಮುಂದೆ ಶವ ಇಟ್ಟು ಧರಣಿ ನಡೆಸಿದ ಕುಟುಂಬ.
ಮೇ 14: ಮಧ್ಯಾಹ್ನ ಶವದ ಅಂತ್ಯಕ್ರಿಯೆ. ಸಂಜೆ ಡಿಸಿಎಂ ಡಿ.ಕೆ. ಶಿವಕುಮಾರ್ ಗ್ರಾಮಕ್ಕೆ ಭೇಟಿ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಹಾರ ಚೆಕ್ ಮತ್ತು ಶವ ಸಂಸ್ಕಾರಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ₹50 ಸಾವಿರ ಮೊತ್ತದ ಚೆಕ್ ವಿತರಣೆ
ಮೇ 17: ಪೊಲೀಸರ ಕೈ ಸೇರಿದ ಎಫ್‌ಎಸ್ಎಲ್ ವರದಿ. ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಸುದ್ದಿಗೋಷ್ಠಿ ನಡೆಸಿದ ಎಸ್‌ಪಿ.
ಮೇ 19: ಬಾಲಕಿಯದ್ದು ಕೊಲೆಯಲ್ಲ. ಬದಲಿಗೆ ರೈಲು ಅಪಘಾತ ಎಂದು ಸ್ಪಷ್ಟಪಡಿಸಿದ ಎಸ್‌ಪಿ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬಾಲಕಿ ರೈಲಿಗೆ ಸಿಲುಕಿ ಸತ್ತಿದ್ದಾಳೆ ಎಂದು ಹೇಳಲಾದ ಅಸ್ಪಷ್ಟ ವಿಡಿಯೊ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.