ADVERTISEMENT

ಭ್ರೂಣ ಲಿಂಗ ಪತ್ತೆ ಮಾಡಿದ ಆರೋಪ, ವೈದ್ಯೆ ವಿರುದ್ಧ ಕ್ರಮಕ್ಕೆ ಶಿಫಾರಸು: ಡಿಎಚ್‌ಒ

'ಗರ್ಭಾವಸ್ಥೆ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ಕಾಯ್ದೆ ಉಲ್ಲಂಘನೆ'

​ಪ್ರಜಾವಾಣಿ ವಾರ್ತೆ
Published 19 ಜನವರಿ 2024, 13:04 IST
Last Updated 19 ಜನವರಿ 2024, 13:04 IST
   

ರಾಮನಗರ: ಜಿಲ್ಲೆಯ ಕನಕಪುರದ ಸಾರ್ವಜನಿಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗರ್ಭಾವಸ್ಥೆ ಮತ್ತು ಪ್ರಸವಪೂರ್ವ ಲಿಂಗ ಪತ್ತೆ (ಪಿಸಿ ಆ್ಯಂಡ್ ಪಿಎನ್‌ಡಿಟಿ) ಕಾಯ್ದೆ ಉಲ್ಲಂಘಿಸಿ, ಸ್ಕ್ಯಾನಿಂಗ್ ಯಂತ್ರ ದುರ್ಬಳಕೆ ಮಾಡಿಕೊಂಡು ಭ್ರೂಣ ಲಿಂಗ ಪತ್ತೆ ಮಾಡಿದ ಆರೋಪ ಎದುರಿಸುತ್ತಿರುವ ಪ್ರಸೂತಿ ತಜ್ಞೆ ಡಾ. ದಾಕ್ಷಾಯಿಣಿ ಅವರ ವಿರುದ್ಧ ಕ್ರಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಶಿಫಾರಸು ಮಾಡಿದ್ದಾರೆ.

‘ಆರೋಪಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ಜನವರಿ 8ರಂದು ದಾಕ್ಷಾಯಿಣಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಪ್ರತಿಕ್ರಿಯೆಗೆ 7 ದಿನ ಕಾಲಾವಕಾಶ ನೀಡಲಾಗಿತ್ತು. ಅವರು ಪ್ರತಿಕ್ರಿಯೆ ನೀಡಿದ್ದು, ಪಿಸಿ ಆ್ಯಂಡ್ ಪಿಎನ್‌ಡಿಟಿ ಕಾಯ್ದೆ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಾಗಾಗಿ, ಅವರ ವಿರುದ್ಧ ಕ್ರಮಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ತಪಾಸಣೆ ಮತ್ತು ಮೇಲ್ವಿಚಾರಣೆ ಸಮಿತಿ ಸದಸ್ಯರ ತಂಡ ಜನವರಿ 4ರಂದು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದಾಗ, ಹೆರಿಗೆ ಕೊಠಡಿಯಲ್ಲಿ ಸ್ಕ್ಯಾನಿಂಗ್ ಯಂತ್ರವಿತ್ತು. ಅದರ ಪರವಾನಗಿ ಅವಧಿ ಮುಗಿದಿದ್ದರೂ ನವೀಕರಿಸದೆ ಬಳಸಿರುವುದನ್ನು ತಂಡ ಪತ್ತೆ ಹಚ್ಚಿತ್ತು. ಅಲ್ಲದೆ, ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ಯಂತ್ರವನ್ನು ದಾಕ್ಷಾಯಿಣಿ ಅವರು ಮೇಲಧಿಕಾರಿಗಳ ಅನುಮತಿ ಇಲ್ಲದೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತಂದು ಇಟ್ಟುಕೊಂಡಿದ್ದರು. ಈ ಕುರಿತು, ತಂಡ ಸ್ಥಳದಲ್ಲಿದ್ದ ಸಿಬ್ಬಂದಿಯಿಂದಲೂ ಲಿಖಿತ ಹೇಳಿಕೆ ಪಡೆದು ಡಿಎಚ್‌ಒಗೆ ವರದಿ ಸಲ್ಲಿಸಿತ್ತು.

ADVERTISEMENT

ವರದಿ ಸಲ್ಲಿಸಿದ 4 ದಿನಗಳ ಬಳಿಕ ಪಿಸಿ ಆ್ಯಂಡ್ ಪಿಎನ್‌ಡಿಟಿ ಕಾಯ್ದೆ ಉಲ್ಲಂಘಿಸಿರುವ ಕುರಿತು, ವೈದ್ಯೆಗೆ ಕಾರಣ ಕೇಳಿ ಡಿಎಚ್‌ಒ ನೋಟಿಸ್ ಜಾರಿ ಮಾಡಿದ್ದರು. ಇದರ ಬೆನ್ನಲ್ಲೇ, ವೈದ್ಯೆ ವಿರುದ್ಧ ಪ್ರಗತಿಪರ ಸಂಘಟನೆಗಳ ಒಕ್ಕೂಟ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಆರೋಪ ಮಾಡಿ ಪ್ರತಿಭಟನೆ ನಡೆಸಿತ್ತು. ಮೇಲಧಿಕಾರಿಗಳು ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.

ಇತ್ತೀಚೆಗೆ ಡಿಎಚ್‌ಒ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದ ಒಕ್ಕೂಟದ ಪದಾಧಿಕಾರಿಗಳು, ವೈದ್ಯೆಯನ್ನು ತಕ್ಷಣ ಅಮಾನತುಗೊಳಿಸಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಬೇಕು ಎಂದು ಆಗ್ರಹಿಸಿದ್ದವು. ಇದರ ಬೆನ್ನಲ್ಲೇ ಅವರ ವಿರುದ್ಧ ಕ್ರಮಕ್ಕೆ ಡಿಎಚ್‌ಒ ಮೇಲಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.

ಶಿಕ್ಷೆ, ದಂಡ ಹೆಚ್ಚಿಸಲು ಸರ್ಕಾರ ನಿರ್ಧಾರ

ಮಂಡ್ಯದಲ್ಲಿ ಪೊಲೀಸರು ಭ್ರೂಣ ‌ಹತ್ಯೆ ಜಾಲವನ್ನು ಇತ್ತೀಚೆಗೆ ಬೇಧಿಸಿದ ಬೆನ್ನಲ್ಲೇ, ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚನೆ ಜೊತೆಗೆ, ಈ ಕುರಿತ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಅದರಂತೆ ಭ್ರೂಣ ಹತ್ಯೆಗೆ ಹಿಂದೆ ಇದ್ದ ₹ 10 ಸಾವಿರ ದಂಡವನ್ನು ₹ 5 ಲಕ್ಷಕ್ಕೆ ಮತ್ತು 3 ವರ್ಷವಿದ್ದ ಜೈಲು ಶಿಕ್ಷೆಯನ್ನು 5 ವರ್ಷಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಇಂತಹ ಕೃತ್ಯವನ್ನು ಜಾಮೀನುರಹಿತ ಅಪರಾಧ ಎಂದು ಪರಿಗಣಿಸಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.