ಕನಕಪುರ: ಕ್ಷುಲ್ಲಕ ಕಾರಣಕ್ಕೆ ಅಣ್ಣ–ತಮ್ಮನ ನಡುವೆ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಟಿ.ಗೊಲ್ಲಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಗ್ರಾಮದ ಮುನಿಸಿದ್ದೇಗೌಡ ಅವರ ಮಗ ಎಂ. ರವೀಶ (39) ಕೊಲೆಯಾದ ವ್ಯಕ್ತಿ. ಇದೇ ಗ್ರಾಮದ ನಾಗರಾಜು ಮಗ ರವಿ ಕೊಲೆ ಆರೋಪಿ. ಇವರಿಬ್ಬರು ದೊಡ್ಡಪ್ಪ ಮತ್ತು ಚಿಕ್ಕಪ್ಪನ ಮಕ್ಕಳಾಗಿದ್ದು, ಸಂಬಂಧದಲ್ಲಿ ಅಣ್ಣ ತಮ್ಮಂದಿರಾಗಿದ್ದಾರೆ.
ರವೀಶ್ ಮತ್ತು ರವಿ ಮಧ್ಯೆ ಹಿಂದೊಮ್ಮೆ ಜಗಳವಾಗಿತ್ತು. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ದ್ವೇಷ ಬೆಳೆದಿತ್ತು. ರವೀಶ್ ಅವರು ರಾತ್ರಿ ಮನೆಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಅಡ್ಡಗಟ್ಟಿದ ರವಿ, ಹಳೆ ವಿಷಯಕ್ಕೆ ಗಲಾಟೆ ಮಾಡಿದ್ದಾನೆ. ನಂತರ ತನ್ನ ಬಳಿಯಿದ್ದ ಚಾಕುವಿನಿಂದ ರವೀಶ ಅವರ ಎದೆಗೆ ಇರಿದಿದ್ದಾನೆ.
ಕೂಗಾಟ ಕೇಳಿದ ಅಕ್ಕಪಕ್ಕದಲ್ಲಿದ್ದವರು ಬಂದಾಗ, ರವಿ ಚಾಕು ಸಮೇತ ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ರವೀಶ್ ಕುಸಿದು ನೆಲಕ್ಕೆ ಬಿದ್ದಿದ್ದಾರೆ. ಸ್ಥಳದಲ್ಲಿದ್ದವರು ಕೂಡಲೇ ಅವರನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ ಎಂದು ಕೋಡಿಹಳ್ಳಿ ಠಾಣೆ ಪೊಲೀಸರು ತಿಳಿಸಿದರು.
ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗೆ ದಯಾನಂದ ಸಾಗರ್ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ರವೀಶ್ ಕೊನೆಯುಸಿರೆಳೆದರು. ಘಟನೆ ಕುರಿತು ರವೀಶ್ ಅವರ ಸಹೋದರ ರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ರವಿ, ಬೆಂಗಳೂರಿನಲ್ಲಿ ಮಸಾಜ್ ಮಾಡುವ ಉಪಕರಣಗಳನ್ನು ಮಾರಾಟ ಮಾಡುತ್ತಿದ್ದ. ಗ್ರಾಮಕ್ಕೆ ಬಂದಾಗಲೆಲ್ಲಾ ಆತ ಯಾರ ಜೊತೆಯಲ್ಲಾದರು ಜಗಳವಾಡುತ್ತಿದ್ದ. ಘಟನೆಯಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ದ ವಾತಾವರಣವಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ.ವಿ. ಸುರೇಶ್, ಲಕ್ಷ್ಮೀನಾರಾಯಣ, ಡಿವೈಎಸ್‌ಪಿ ಗಿರಿ, ಸಿಪಿಐ ಕೃಷ್ಣ ಲಮಾಣಿ, ಎಸ್‌ಐಗಳಾದ ರವಿಕುಮಾರ್, ಮನೋಹರ್, ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.