ರಾಮನಗರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 16ನೇ ಬಜೆಟ್‌ನಲ್ಲಿ ದಲಿತರ ಮೂಗಿಗೆ ತುಪ್ಪ ಸವರಲಾಗಿದೆ. ಸುಮಾರ ₹4.09 ಲಕ್ಷ ಕೋಟಿ ಬಜೆಟ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಬೆಂಬಲಿಸಿದ ದಲಿತರಿಗೆ ವಂಚಿಸಲಾಗಿದೆ’ ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಎಂ. ಕೃಷ್ಣಮೂರ್ತಿ ಟೀಕಿಸಿದರು.
‘ಎಸ್‌ಇಪಿ ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಸಮುದಾಯಗಳಿಗೆ ₹42 ಸಾವಿರ ಕೋಟಿ ಅನುದಾನ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಮಟೆ ಬಾರಿಸುತ್ತಿದ್ದಾರೆ. ಆದರೆ, ವಾಸ್ತವವಾಗಿ ಕಾಯ್ದೆಯ ನಿಯಮ 7(ಸಿ) ಅನ್ವಯ ಸುಮಾರು ₹21 ಸಾವಿರ ಕೋಟಿಯನ್ನು ಬೇರೆ ಕಾರ್ಯಗಳಿಗೆ ಬಳಸಲಾಗುತ್ತಿದೆ’ ಎಂದು ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಅನುದಾನದಲ್ಲಿ ₹13 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ ಉಳಿದ ಆರೇಳು ಕೋಟಿ ಮೊತ್ತವನ್ನು ಸಹ ಪರಿಶಿಷ್ಟರ ಅಭ್ಯುದಯಕ್ಕಾಗಿ ಸರಿಯಾಗಿ ಬಳಸುತ್ತಿಲ್ಲ. ಮುಖ್ಯವಾಗಿ ಪರಿಶಿಷ್ಟರಿಗೆ ಸಂಬಂಧಿಸಿದ 8 ನಿಗಮಗಳಿಗೆ ಕೇವಲ ₹488 ಕೋಟಿ ನೀಡಲಾಗಿದೆ. ಕಾಯ್ದೆ ಬರುವುದಕ್ಕೆ ಮುಂಚೆ ₹500 ಕೋಟಿಗೂ ಹೆಚ್ಚು ಮೊತ್ತ ಸಿಗುತ್ತಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಮೊತ್ತ ಇಳಿಕೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸರ್ಕಾರದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಡಾ. ಎಚ್.ಸಿ. ಮಹದೇವಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾರೆ. ದಲಿತರಿಗೆ ಅನ್ಯಾಯವಾಗದಂತೆ ಕಾವಲುನಾಯಿಯಾಗಿ ಅವರು ಕೆಲಸ ಮಾಡಬೇಕಿತ್ತು. ಆದರೆ, ಅವರ ಬಾಯಿ ಕಟ್ಟಿ ಹಾಕಲಾಗಿದೆ. ದಲಿತರ ಹಣ ಬೇರೆಯವರ ಪಾಲಾಗುತ್ತಿದ್ದರೂ ಕೇಳುವವರೇ ಇಲ್ಲವಾಗಿದೆ. ಪರಿಶಿಷ್ಟ ಸಚಿವರೇ ನಾಚಿಕೆ ಬಿಟ್ಟು ಅದನ್ನು ಸಮರ್ಥಿಸುತ್ತಿದ್ದಾರೆ’ ಎಂದರು.
‘ಬಿಜೆಪಿಯವರು ಬಜೆಟ್ ಅನ್ನು ಹಲಾಲ್ ಬಜೆಟ್, ಪಾಕಿಸ್ತಾನ್ ಬಜೆಟ್ ಎಂದು ಟೀಕಿಸುತ್ತಿರುವುದು ಅವರ ದುಷ್ಟ ಮನಸ್ಥಿತಿಗೆ ಸಾಕ್ಷಿ. ಮುಸ್ಲಿಮರನ್ನು ಒಳಗೊಂಡಂತೆ ಶೇ 15ರಷ್ಟಿರುವ ಅಲ್ಪಸಂಖ್ಯಾತರಿಗೆ ಕೇವಲ ₹4,500 ಕೋಟಿ ನೀಡಲಾಗಿದೆ. ಅಲ್ಪಸಂಖ್ಯಾತರು ಸಹ ಭಾರತೀಯರು ಎಂಬುದನ್ನು ಮರೆತಿರುವ ಬಿಜೆಪಿ, ಇಲ್ಲೂ ತನ್ನ ಕೋಮು ದ್ವೇಷ ಪ್ರದರ್ಶಿಸಿದೆ’ ಎಂದು ಅಸಮಾಧಾನ ಹೊರಹಾಕಿದರು.
‘ವಸತಿ ಶಾಲೆಗಳನ್ನು ತೆರೆಯುವುದು, ವಿಶ್ವವಿದ್ಯಾಲಯಗಳನ್ನು ಮುಚ್ಚುವ ಕ್ರಮ ಸರಿಯಲ್ಲ. ಬದಲಿಗೆ ಶಾಲಾ–ಕಾಲೇಜು, ವಿ.ವಿ.ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕಿತ್ತು. ರೈತರ ಸಾಲ ಮನ್ನಾ ಮಾಡಬೇಕಿತ್ತು. ಬಿಜೆಪಿ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸದ ಸಿದ್ದರಾಮಯ್ಯ, ರೈತ ವಿರೋಧಿ ನೀತಿ ಅನುಸರಿಸಿದ್ದಾರೆ’ ಎಂದು ಹೇಳಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಕೃಷ್ಣಪ್ಪ, ಜಿಲ್ಲಾಧ್ಯಕ್ಷ ರಾಜ್ ಮೌರ್ಯ, ಉಸ್ತುವಾರಿ ಗೋಪಿ, ಕಾಂತರಾಜು, ಸ್ವಾಮಿ, ಹನುಮಂತಯ್ಯ, ನಂಜುಂಡಿ ಹಾಗೂ ಇತರರು ಇದ್ದಾರೆ.
ರಾಜ್ಯ ಸರ್ಕಾರ ಕಾವೇರಿ ನದಿಗೆ ಮೇಕೆದಾಟುವಿನಲ್ಲಿ ಅಣೆಕಟ್ಟೆ ನಿರ್ಮಿಸುವ ಮೊತ್ತದಲ್ಲಿ ಇಡೀ ರಾಜ್ಯದ ಕೆರೆಗಳು ಹಾಗೂ ಜಲಾಶಯಗಳ ಹೂಳೆತ್ತಿದರೆ ರಾಜ್ಯದಲ್ಲಿ ಕುಡಿಯಲು ಹಾಗೂ ಕೃಷಿಗೆ ನೀರಿನ ಕೊರತೆಯಾಗುವುದಿಲ್ಲ.– ಎಂ. ಕೃಷ್ಣಮೂರ್ತಿ, ಅಧ್ಯಕ್ಷ ಬಹುಜನ ಸಮಾಜ ಪಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.