ರಾಮನಗರ: ‘ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿಕೃತಕಾಮಿಯಾಗಿದ್ದು, ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಆತನಿಂದಾಗಿ ರಾಜ್ಯವಷ್ಟೇ ಅಲ್ಲದೆ, ಇಡೀ ದೇಶವೇ ತಲೆ ತಗ್ಗಿಸುವ ಸ್ಥಿತಿ ಬಂದಿದೆ’ ಎಂದು ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಎಂ. ನಾಗೇಶ್ ಆಗ್ರಹಿಸಿದರು.
‘ಪ್ರಜ್ವಲ್ ಪ್ರಕರಣದ ತನಿಖೆಗಾಗಿ ನೇಮಿಸಿರುವ ಎಸ್‌ಐಟಿಯು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವುದರ ಕುರಿತು ಅನುಮಾನವಿದೆ. ಹಾಗಾಗಿ, ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ರಾಷ್ಟ್ರೀಯ ಮತ್ತು ರಾಜ್ಯ ಮಹಿಳಾ ಆಯೋಗ ಸಹ ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು’ ಎಂದು ನಗರದ ಚೈತನ್ಯ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಸಂಸದನೊಬ್ಬ ತನ್ನ ರಾಜಕೀಯ ಅಧಿಕಾರ, ಪ್ರಭಾವ ಹಾಗೂ ಹಣಬಲವನ್ನು ಬಳಸಿಕೊಂಡು ಹಲವು ಮಹಿಳೆಯರ ಮೇಲೆ ಎಸಗಿರುವ ಹೀನ ಕೃತ್ಯವನ್ನು ಪಕ್ಷಾತೀತವಾಗಿ ಎಲ್ಲರೂ ಖಂಡಿಸಬೇಕು. ಆದರೆ, ಮೈತ್ರಿಕೂಟದ ಬಿಜೆಪಿ ಮತ್ತು ಜೆಡಿಎಸ್‌ನವರು ಪ್ರಜ್ವಲ್ ವಿಷಯದಲ್ಲಿ ತುಟಿ ಬಿಚ್ಚುತ್ತಿಲ್ಲ. ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ಭಾಷಣ ಮಾಡುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಹ ದನಿ ಎತ್ತದಿರುವುದು ಅವರ ಸೋಗಲಾಡಿತನಕ್ಕೆ ಸಾಕ್ಷಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರಜ್ವಲ್ ನನ್ನ ಮಗ ಎಂದು ಹಾಸನ ಕ್ಷೇತ್ರದಾದ್ಯಂತ ಪ್ರಚಾರ ಮಾಡಿದ್ದ ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ಮಗನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ಕೇಳಿ ಬರುತ್ತಿದ್ದಂತೆ ಅವರ ಕುಟುಂಬವೇ ಬೇರೆ, ನಮ್ಮ ಕುಟುಂಬವೇ ಬೇರೆ ಎನ್ನುತ್ತಾ ಪ್ರಜ್ವಲ್ ಪರ ವಕಾಲತ್ತು ವಹಿಸುತ್ತಿರುವುದು ನಾಚಿಕೆಗೇಡು’ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಅನ್ನದಾನಪ್ಪ ಮಾತನಾಡಿ, ‘ಸಂಸದ ಪ್ರಜ್ವಲ್ ಮತ್ತು ಅವರ ತಂದೆ ಶಾಸಕ ಎಚ್.ಡಿ. ರೇವಣ್ಣ ಎಸಗಿರುವ ಕೃತ್ಯವು ಅತ್ಯಂತ ಗಂಭೀರವಾದುದು. ದೇಶದ ಚರಿತ್ರೆಯಲ್ಲೇ ಇಷ್ಟೊಂದು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ನಿದರ್ಶನಗಳಿಲ್ಲ. ಸರ್ಕಾರ ಕೂಡಲೇ ಇಬ್ಬರನ್ನೂ ಬಂಧಿಸಬೇಕು. ಕೋರ್ಟ್ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗಬೇಕು’ ಎಂದರು.
ಜಿಲ್ಲಾ ಅಧ್ಯಕ್ಷ ಎಂ.ಎನ್. ಕೃಷ್ಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಗೇಶ್, ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಮ್ಮ, ಮುಖಂಡರಾದ ನಾರಾಯಣಪ್ಪ, ದೇವರಾಜು, ಟಿ.ಸಿ. ಉಮೇಶ್ ಇದ್ದರು.
ಅಧಿಕಾರ ಮತ್ತು ಹಣಬಲ ಬಳಸಿಕೊಂಡು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವುದು ಖಂಡನೀಯ. ಆರೋಪಿಗಳಾದ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ. ರೇವಣ್ಣ ಅವರನ್ನು ತಕ್ಷಣ ಬಂಧಿಸಿ ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಬೇಕು– ಪಾರ್ವತಮ್ಮ ಅಧ್ಯಕ್ಷೆ ಬಿಎಸ್‌ಪಿ ಜಿಲ್ಲಾ ಘಟಕ
‘ಜಿಲ್ಲೆಯ ಗೌರವ ಹಾಳು ಮಾಡಿದ ಶಾಸಕ
‘ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಜೊತೆ ವಾಟ್ಸ್‌ಆ್ಯಪ್ ಕಾಲ್‌ನಲ್ಲಿ ಮಾತನಾಡಿರುವ ವಿಡಿಯೊ ಹರಿದಾಡುತ್ತಿರುವುದು ಜಿಲ್ಲೆಯ ಗೌರವಕ್ಕೆ ಧಕ್ಕೆ ತಂದಿದೆ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ನಮ್ಮಿಬ್ಬರದು ತಂದೆ–ಮಗಳ ಸಂಬಂಧ ಎಂದು ಹೇಳಿಕೊಂಡು ಆ ಸಂಬಂಧಕ್ಕಿರುವ ಮೌಲ್ಯಕ್ಕೆ ಅವಮಾನ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರಿಗೆ ನಾಚಿಕೆಯಾಗಬೇಕು’ ಎಂದು ನಾಗೇಶ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.