ADVERTISEMENT

ವಿಷ್ಣು ಅವತಾರದಿಂದ ಬುದ್ಧನಿಗೆ ಮುಕ್ತಿ ನೀಡಬೇಕಿದೆ: ಪ್ರೊ. ಬೋರಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 6:38 IST
Last Updated 5 ಜನವರಿ 2026, 6:38 IST
   

ರಾಮನಗರ: ಇಂದಿನ ಸಮಾಜಕ್ಕೆ ಬುದ್ಧ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಕುವೆಂಪು ವಿಚಾರಗಳು ಅತ್ಯಗತ್ಯವಾಗಿ ಬೇಕಿದೆ. ಈ ಮಹನೀಯರು ಚಿಂತನೆ ಮೂಲಕ ಸದ್ಯದ ವ್ಯತಿರಿಕ್ತ ಬೆಳವಣಿಗೆಗಳ ವಿರುದ್ಧ ವೈಚಾರಿಕ ಪ್ರತಿತಂತ್ರ ಹೂಡಬೇಕಿದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಹೇಳಿದರು.

ನಗರದ ಜಾನಪದ ಲೋಕದ ದೊಡ್ಮನೆಯಲ್ಲಿ ಭಾನುವಾರ ನಡೆದ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ ಅವರ ಜನ್ಮದಿನದ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಜನರಲ್ಲಿ ವೈಚಾರಿಕಾ ಪ್ರಜ್ಞೆ ಬಿತ್ತಿದ ಬುದ್ಧನನ್ನು ಒಂದು ವರ್ಗ ವಿಷ್ಣುವಿನ ಅವತಾರ ಎಂದು ಹೇಳಿ ಪೂಜಿಸುವಂತೆ ಮಾಡಿದೆ. ಅದಕ್ಕೆ ಮುಕ್ತಿ ನೀಡಬೇಕಿದೆ ಎಂದರು.

ಹಿರಿಯ ಪತ್ರಕರ್ತ‌ ಸು.ತ. ರಾಮೇಗೌಡ ಮಾತನಾಡಿ, ‘ಸಾಮಾಜಿಕ ಅವ್ಯವಸ್ಥೆ ಪ್ರಶ್ನಿಸುವ ಜೊತೆಗೆ ವೈಚಾರಿಕೆ ಬಿತ್ತಿದ ಪ್ರಮುಖರಲ್ಲಿ ವೆಂಕಟಯ್ಯ ಪ್ರಮುಖರು. ಆ ವಿಷಯದಲ್ಲಿ ಅವರ ಬದ್ಧತೆ ಪ್ರಶ್ನಾತೀತ. ಮಾತು ಮತ್ತು ಕೃತಿಗೆ ತಕ್ಕಂತೆ ಬದುಕಿದ ಅವರು ಕೆಲಸಗಳ ಮೂಲಕ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.

ADVERTISEMENT

ಲೇಖಕ ಡಾ. ಅಪ್ಪಗೆರೆ ಸೋಮಶೇಖರ್ ಮಾತನಾಡಿ, ‘ವೆಂಕಟಯ್ಯ ಅವರು ನನ್ನನ್ನು ಒಳಗೊಂಡಂತೆ ನೂರಾರು ಮಂದಿಗೆ ಆದರ್ಶವಾಗಿರುವವರು. ನಮ್ಮೂರಿನ ಕೀರ್ತಿಯನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂತಹವರ ಕೊಡುಗೆಯನ್ನು ಗ್ರಾಮಸ್ಥರು ಸ್ಮರಿಸಿ ಗೌರವಿಸಬೇಕು’ ಎಂದರು.

ಕೋಟೆ ಚಿಕ್ಕತಾಯಮ್ಮ ನಂಜಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಅಪ್ಪಗೆರೆಯ ಸೂಲಗಿತ್ತಿ ವೆಂಕಟ ಲಕ್ಷ್ಮಮ್ಮ, ವಿಕಾಸ್ ಮೌರ್ಯ ಹಾಗೂ ಡಾ. ಪ್ರಕಾಶ ಮಂಟೇದ ಅವರನ್ನು ವೆಂಕಟಯ್ಯ ದಂಪತಿ ಸನ್ಮಾನಿಸಿದರು. ವೆಂಕಟಯ್ಯ ಅವರ ಪತ್ನಿ ಸರಸ್ವತಿ, ಪುತ್ರ ಡಾ. ವಿಜಯ್ ಅಪ್ಪಗೆರೆ, ಪುತ್ರಿ ಸರಳಾ ಲೋಕಾನಂದ ಹಾಗೂ ಇತರರು ಇದ್ದರು. ಮಹೇಶ್ ಮೌರ್ಯ ಅಪ್ಪಗೆರೆ ನಿರೂಪಣೆ ಮಾಡಿದರು.

‘ನಮ್ಮ ನಡುವಿನ ಡಾ. ಎಚ್ಚೆನ್’

‘ತಮ್ಮ ಬದುಕಿನುದ್ದಕ್ಕೂ ವೈಚಾರಿಕವಾಗಿ ಬದುಕುತ್ತಾ ಅಂತಹದ್ದೊಂದು ಪ್ರಜ್ಞೆಯನ್ನು ಸಮಾಜದಲ್ಲಿ ಮೂಡಿಸುತ್ತಾ ಬಂದಿರುವ ವೆಂಕಟಯ್ಯ ಅವರು ನಮ್ಮ ನಡುವಿನ ಡಾ. ಎಚ್ಚೆನ್ (ವಿಚಾರವಾದಿ ಡಾ. ಎಚ್.ಎನ್‌. ನರಸಿಂಹಯ್ಯ) ಎನ್ನಬಹುದು. ಹದಿನೈದಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ವೆಂಕಟಯ್ಯ ಅವರ ಸಾಹಿತ್ಯ ಕೃಷಿಯನ್ನು ಕನ್ನಡ ಸಾಹಿತ್ಯ ಲೋಕ ಸರಿಯಾಗಿ ಗಮನಿಸಲಿಲ್ಲ. ಇದು ಸಾರಸ್ವತ ಲೋಕದ ಲೋಪ. ಅದೇ ವೆಂಕಟಯ್ಯ ಅವರು ಮೇಲ್ಜಾತಿಗೆ ಸೇರಿದ್ದರೆ ಅವರಿಗೆ ಪ್ರಶಸ್ತಿ ಪುರಸ್ಕಾರ ಸಮ್ಮೇಳನ ಅಧ್ಯಕ್ಷತೆ ಸೇರಿದಂತೆ ಹಲವು ಗೌರವಗಳು ಹುಡುಕಿಕೊಂಡು ಬರುತ್ತಿದ್ದವು’ ಎಂದು ಲೇಖಕ ವಿಕಾಸ್ ಆರ್. ಮೌರ್ಯ ಅಭಿಪ್ರಾಯಪಟ್ಟರು.

ಶಿಕ್ಷಣವು ನಮ್ಮನ್ನು ವೈಚಾರಿಕತೆ ಕಡೆಗೆ ಕೊಂಡೊಯ್ಯುತ್ತದೆ. ಸಮಾಜವು ನಮಗೆ ಕೊಟ್ಟಿದ್ದಕ್ಕೆ ಪ್ರತಿಯಾಗಿ ನಾವೂ ಸಹ ಹಿಂತಿರುಗಿ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಬದುಕಿಗೆ ಸಾರ್ಥಕತೆ ಬರುತ್ತದೆ
– ಡಾ. ವೆಂಕಟಯ್ಯ ಅಪ್ಪಗೆರೆ, ಸಾಹಿತಿ
ಜಿಲ್ಲೆಗೆ ಹಿಡಿದಿರುವ ಸಾಂಸ್ಕೃತಿಕ ಜಡತ್ವ ಬಿಡಿಸುವ ನಿಟ್ಟಿನಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯ ಕಾರ್ಯೋನ್ಮುಖವಾಗಬೇಕು. ಧರ್ಮ ಮತ್ತು ಜಾತಿಗಳ ನಡುವಣ ಸ್ಥಳೀಯ ಸೌಹಾರ್ದದ ಪರಂಪರೆಯ ಉತ್ಖನನ ಆಗಬೇಕಿದೆ
– ಪ್ರಕಾಶ ಮಂಟೇದ, ಸಾಹಿತಿ